ಕಾರವಾರ [ಫೆ.07] :  ಲಾರಿ ಕ್ಲೀನರ್, ಚಾಲಕರಾಗಿದ್ದ ಶಿವರಾಮ ಹೆಬ್ಬಾರ್ ಬಿಜೆಪಿ ಸರ್ಕಾರದಲ್ಲಿ ಸಂಪುಟದರ್ಜೆ ಸಚಿವರಾಗಿದ್ದು ಅವರ ಸಾಹಸವೇ ಹೌದು. ಯಲ್ಲಾಪುರ ಸಮೀಪದ ಶೇವ್ಕಾರ ಶಿವರಾಮ ಹೆಬ್ಬಾರ್ ಅವರ ಮೂಲ ಊರು. ನಂತರ ಶಿವರಾಮ ಹೆಬ್ಬಾರ್ ಅವರ ತಂದೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊನ್ನಾವರ ತಾಲೂಕಿನ ನವಿಲಗೋಣ ಬಳಿ ನೆಲೆ ನಿಂತರು. ಕಡತೋಕಾ ಜನತಾ ವಿದ್ಯಾಲಯದಲ್ಲಿ ಶಿವರಾಮ ಹೆಬ್ಬಾರ್ ಪ್ರೌಢಶಿಕ್ಷಣ ಮುಗಿಸಿದರು.

ಅಜ್ಜಿ ಮನೆ ಮಾವ ಕೃಷ್ಣ ಭಟ್ ಸುಣಜೋಗ ಅವರ ಲಾರಿಗೆ ಕ್ಲೀನರ್ ಆಗಿ ಕೆಲಸ ಮಾಡಿದರು. ನಂತರ ಚಾಲಕರಾಗಿಯೂ ದುಡಿದರು. ಯಲ್ಲಾಪುರ ಎಪಿಎಂಸಿಗೆ ಇಡಗುಂದಿ ಕ್ಷೇತ್ರದಿಂದ ಅವರೋಧವಾಗಿ ಆಯ್ಕೆಯಾಗುವ ಮೂಲಕ ಹೆಬ್ಬಾರ್ ಸಾರ್ವಜನಿಕ ಬದುಕಿಗೆ ಅಡಿ ಇಟ್ಟರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಆರ್.ಎಸ್. ಹೆಗಡೆ ಹಾಗೂ ಶಿವರಾಮ ಹೆಬ್ಬಾರ್ ಇಬ್ಬರಿಗೂ ಸರಿಸಮ ಮತಗಳು ಬಂತು. ಚೀಟಿ ಎತ್ತಿದಾಗ ಹೆಬ್ಬಾರ್‌ಗೆ ಅಧ್ಯಕ್ಷ ಸ್ಥಾನ ಒಲಿಯಿತು.

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ...

ಪಟ್ಟಣದ ಬಾಡಿಗೆ ಕಟ್ಟಡದಲ್ಲಿದ್ದ ಎಪಿಎಂಸಿಯನ್ನು ಶಿರಸಿ ರಸ್ತೆಯ ವಿಶಾಲ ಜಾಗದಲ್ಲಿ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಿದ ಹೆಬ್ಬಾರ್ ಪ್ರಂಶಸೆಗೆ ಒಳಗಾದರು. ನಂತರ ಸುಮಾರು 3 ಅವಧಿಗೆ ಅಧ್ಯಕ್ಷರಾಗಿದ್ದು, ಎಪಿಎಂಸಿಯನ್ನು ರಾಜ್ಯದಲ್ಲೆ ಮಾದರಿಯನ್ನಾಗಿ ರೂಪಿಸಿ ಪ್ರಶಸ್ತಿ ಪಡೆದಿದ್ದೇ ಅಲ್ಲದೆ ರೈತ ಸಭಾಭವನ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಿದರು. 

ಕೈಗಾ, ಮಾಗೋಡ ಚಳವಳಿ ಸೇರಿದಂತೆ ಹಲವು ಪರಿಸರ ಹೋರಾಟದಲ್ಲಿ ತೊಡಗಿಕೊಂಡ ಹೆಬ್ಬಾರ್ ಪರಿಸರ ರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸಿದರು. ಈ ನಡುವೆ ಹೆಬ್ಬಾರ್ ಬಿಜೆಪಿ ಕಾರ್ಯಕರ್ತರಾಗಿ ಬೆಳೆಯುತ್ತ ಬಂದರು. ಎರಡು ಅವಧಿಗೆ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿ ಚುರುಕಿನಿಂದ ಕೆಲಸ ಮಾಡಿದರು.

ಸಾಹುಕಾರ್ ಆಟಕ್ಕೆ ಮಣಿಯುತ್ತಾ 'ಹೈ' ಕಮಾಂಡ್?...

ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಿದರು. ನಂತರ ಮಾರ್ಗರೆಟ್ ಆಳ್ವ ಪ್ರಭಾವದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಹೊಸದಾಗಿ ಕ್ಷೇತ್ರ ಪುನರ್ ವಿಂಗಡಣೆಗೊಂಡು 2008 ರಲ್ಲಿ ಕ್ಷೇತ್ರ ಯಲ್ಲಾಪುರ ರಚನೆಯಾದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 1500 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. 2013 ರಲ್ಲಿ ಪುನಃ ಚುನಾವಣಾ ಕಣಕ್ಕಿಳಿದು 25 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. 2018 ರಲ್ಲಿ ಪುನಃ ಗೆದ್ದು
ಬಂದರು. ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿ ೩೦ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದು ಬಂದಿದ್ದಲ್ಲದೆ, ಮೊದಲ ಬಾರಿಗೆ ಸಂಪುಟ ದರ್ಜೆಯ ಸಚಿವರಾದರು.

ಇಬ್ಬರು ಮಕ್ಕಳು: ಶಿವರಾಮ ಹೆಬ್ಬಾರ್ 1957 ರ ಜ. 1 ರಂದು ಜನಿಸಿದರು. ಪತ್ನಿ ವನಜಾಕ್ಷಿ. ವಿವೇಕ ಹೆಬ್ಬಾರ್ ಮತ್ತು ಶೃತಿ ಇಬ್ಬರು ಮಕ್ಕಳು. ಪ್ರಸ್ತುತ ಯಲ್ಲಾಪುರ ಪಟ್ಟಣದಲ್ಲಿ ನೆಲೆಸಿದ್ದಾರೆ. ಯಲ್ಲಾಪುಕ್ಕೆ ಬರುವ ಮುನ್ನ ಅರಬೈಲ್ ನಿವಾಸಿಯಾಗಿದ್ದರು.