ನದಿ ನೀರು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ, ಸಚಿವ ಶಿವರಾಮ ಹೆಬ್ಬಾರ ಗುರುವಾರ ವರದೆಗೆ ಬಾಗೀನ ಅರ್ಪಿಸಿದರು.

ಶಿರಸಿ(ಜು.15):  ವರದಾ ನದಿಯ ನೀರಿನ ಪ್ರವಾಹ ಗುರುವಾರ ಇನ್ನಷ್ಟು ಏರಿದೆ. ಮೊಗಳ್ಳಿ, ಭಾಶಿ ಪಂಚಾಯಿತಿ ಸೇರಿದಂತೆ ಈ ಭಾಗದಲ್ಲಿ ಮೂರು ಸಾವಿರ ಎಕರೆಗೂ ಅಧಿಕ ಕೃಷಿ ಪ್ರದೇಶ ಜಲಾವೃತಗೊಂಡಿದೆ. ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನೀರಿನ ಮಟ್ಟ ಜಾಸ್ತಿ ಆಗಿದೆ. ಮಳೆ ಇನ್ನೂ ಮುಂದುವರಿದಲ್ಲಿ ಇನ್ನಷ್ಟು ಕೃಷಿ ಭೂಮಿ ಮುಳುಗಡೆ ಆಗಿ ಭಾಶಿ ಪಂಚಾಯಿತಿಯ ವಿವಿಧ ಹಳ್ಳಿಗಳಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ. ನದಿ ನೀರು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ, ಸಚಿವ ಶಿವರಾಮ ಹೆಬ್ಬಾರ ಗುರುವಾರ ವರದೆಗೆ ಬಾಗೀನ ಅರ್ಪಿಸಿದರು.

ಬಳಿಕ ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ ಹೆಬ್ಬಾರ, ಪ್ರತಿವರ್ಷ ಇಲ್ಲಿಯ ಪರಿಸ್ಥಿತಿ ವೀಕ್ಷಿಸುತ್ತಿದ್ದೇವೆ. ಪ್ರತಿ ವರ್ಷವೂ ವರದೆಗೆ ಪ್ರವಾಹ ಬಂದಾಗ ಮೊಗಳ್ಳಿ ಮತ್ತು ಭಾಶಿ ಊರಿನ ಜನತೆ ಆತಂಕದಲ್ಲಿ ದಿನ ಕಳೆಯುವಂತಾಗುತ್ತದೆ. ಭಾಶಿ ಊರಿನವರಿಗೆ ಎತ್ತರದ ಜಾಗದಲ್ಲಿ ಮನೆ ನಿರ್ಮಿಸಲು ಯೋಜಿಸಲಾಗಿದ್ದರೂ ಇಲ್ಲಿಯ ಜನತೆ ಕೃಷಿ ಪ್ರದೇಶದ ಸಮೀಪದಲ್ಲಿರುವ ತಮ್ಮಮನೆ ಬಿಟ್ಟುಬರಲು ಸಿದ್ಧರಾಗುತ್ತಿಲ್ಲ. ಭಾಶಿಯಿಂದ ಹೊಸ್ಕೆರೆವರೆಗಿನ ರಸ್ತೆ ಅಭಿವೃದ್ಧಿ ಆಗಬೇಕು. ಅಲ್ಲದೇ ಭಾಶಿ ಗ್ರಾಮದೊಳಗೂ ರಸ್ತೆಗಳ ಅಭಿವೃದ್ಧಿ ಆಗಬೇಕಿದೆ ಎಂದರು.

ಹುಬ್ಬಳ್ಳಿಯಲ್ಲಿ ಮುಂದುವರಿದ ಮಳೆ: ಕುಸಿಯುತ್ತಿವೆ ಮನೆ

ಮಳೆಗಾಲದಲ್ಲಿ ವಾಸ್ತವ್ಯಕ್ಕೆ ಬೇರೆ ಜಾಗದಲ್ಲಿ ಅವಕಾಶ ನೀಡಬೇಕು ಎಂಬ ಬೇಡಿಕೆ ಸಹ ಈ ಭಾಗದ ಜನತೆಯಲ್ಲಿದೆ. ಆದರೆ, ಜಿಲ್ಲೆಯ ಎಲ್ಲೆಡೆಯಂತೆ ಅರಣ್ಯ ಪ್ರದೇಶವೇ ಇಲ್ಲಿ ಜಾಸ್ತಿ ಇರುವುದರಿಂದ ಬದಲಿ ಜಾಗ ನೀಡಲು ಸಾಧ್ಯವಾಗದಂತಾಗಿದೆ ಎಂದು ಹೇಳಿದರು.

ಸೊರಬ ಮತ್ತು ಸಾಗರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿದರೆ ವರದಾ ನದಿ ನೀರು ಜಾಸ್ತಿಯಾಗಿ ಬನವಾಸಿಯ ಜನತೆ ತೊಂದರೆ ಅನುಭವಿಸುವಂತಾಗುತ್ತಿದೆ. ಇದರ ಜೊತೆ ಬನವಾಸಿಯಿಂದ ಸೊರಬಕ್ಕೆ ತೆರಳುವ ರಸ್ತೆಯಲ್ಲಿ ಸೇತುವೆಯ ಎತ್ತರ ಇನ್ನೂ ಸ್ವಲ್ಪ ಏರಿಸಬೇಕು. ಇದರಿಂದಾಗಿ ಪ್ರವಾಹ ಮಟ್ಟಸ್ವಲ್ಪ ಕಡಿಮೆ ಆಗಲಿದೆ ಎಂದರು. ಕಸ್ತೂರಿರಂಗನ್‌ ವರದಿ ಜಾರಿಯಿಂದ ಮಲೆನಾಡಿನ ಜನತೆಗೆ ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಎಲ್ಲ ಶಾಸಕರು ಜು.18ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಅರಣ್ಯ ಅತಿಕ್ರಮಣದಾರರಿಗೆ ನೊಟೀಸ್‌ ನೀಡುವ ಪ್ರಕ್ರಿಯೆ ನಾವು ಸಹಿಸುವುದಿಲ್ಲ. ಜಿಲ್ಲೆಯ ಅರಣ್ಯವನ್ನು ಅನಾದಿಕಾಲದಿಂದ ನಾವು ರಕ್ಷಿಸಿಕೊಂಡು ಬಂದಿದ್ದೇವೆಯೇ ಹೊರತು ಅರಣ್ಯ ಇಲಾಖೆ ಅಧಿಕಾರಿಗಳು ಬಂದ ಮೇಲೆ ಉಳಿದಿದ್ದಲ್ಲ. ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿದುಕೊಂಡು ದಬ್ಬಾಳಿಕೆ ಸ್ಥಗಿತಗೊಳಿಸಲಿ. ಆದರೆ, ಹೊಸದಾಗಿ ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಉಪವಿಭಾಗಾಧಿಕಾರಿ ದೇವರಾಜ ಆರ್‌., ತಹಸೀಲ್ದಾರ ಶ್ರೀಧರ ಮುಂದಲಮನಿ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ ಇತರರಿದ್ದರು.

ಕರಾವಳಿಯಲ್ಲಿ ಮಳೆ ಇಳಿಮುಖ

ಕಾರವಾರ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಘಟ್ಟದ ಮೇಲಿನ ತಾಲೂಕಿನ ಕೆಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಗುರುವಾರ ಬೆಳಗ್ಗೆಯಿಂದ ಬೊಮ್ಮನಹಳ್ಳಿ ಜಲಾಶಯದ ಗೇಟ್‌ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಬೊಮ್ಮನಹಳ್ಳಿ ಜಲಾಶಯದ ಎರಡು ಗೇಟ್‌ ತೆರೆಯಲಾಗಿದ್ದು, 3000 ಕ್ಯೂಸೆಕ್‌, ವಿದ್ಯುತ್‌ ಉತ್ಪಾದನೆಯಿಂದ 1353 ಕ್ಯೂಸೆಕ್‌, 4353 ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕದ್ರಾ ಜಲಾಶಯದಿಂದ 4 ಗೇಟ್‌ನಿಂದ 5ಸಾವಿರ ಕ್ಯೂಸೆಕ್‌, ಯುನಿಟ್‌ನಿಂದ 19980 ಒಟ್ಟು 24,980 ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಮಲೆನಾಡಿನಲ್ಲಿ ಮತ್ತೆ ಮಳೆಯಬ್ಬರ: ಅನೇಕ ಕಡೆ ರಸ್ತೆ, ಭೂಕುಸಿತ

ಶಿರಸಿ ತಾಲೂಕಿನ ಪೂರ್ವ ಭಾಗವಾದ ಬನವಾಸಿ ಭಾಗದಲ್ಲಿ ಭಾರಿ ಮಳೆಯಾಗಿದೆ. ವರದಾ ನದಿಯಲ್ಲಿ ನೀರಿನ ಮಟ್ಟಏರಿಕೆ ಕಂಡಿದೆ. ಭಾಶಿ, ಮೊಗಳ್ಳಿ ಒಳಗೊಂಡು ವಿವಿಧ ಗ್ರಾಪಂ ವ್ಯಾಪ್ತಿಯ 3 ಸಾವಿರ ಎಕರೆ ಕೃಷಿ ಪ್ರದೇಶ ಜಲಾವೃತವಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 40 ಮನೆಗಳಿಗೆ ಹಾನಿಯಾಗಿದ್ದು, 1 ಜಾನುವಾರು ಮೃತಪಟ್ಟಿದೆ.

ಶಿರಸಿ ತಾಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗದ ಕೆಲವು ಕಡೆ ವಿದ್ಯುತ್‌ ಹಾಗೂ ನೆಟ್ವರ್ಕ್ ವ್ಯತ್ಯಯವಾಗಿತ್ತು. ಸಿದ್ದಾಪುರ ತಾಲೂಕಿನಲ್ಲಿ ಮಧ್ಯಾಹ್ನ ಒಂದು ತಾಸಿಗೂ ಅಧಿಕ ಕಾಲ ಭಾರಿ ಮಳೆಯಾಗಿದೆ. ಜೋಯಿಡಾ ಭಾಗದಲ್ಲಿ ಆಗಾಗ ರಭಸದಿಂದ ಮಳೆಯಾಗುತ್ತಿತ್ತು. ಯಲ್ಲಾಪುರ, ದಾಂಡೇಲಿ, ಹಳಿಯಾಳ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ಆಗಾಗ ಬಿಸಿಲಿನ ವಾತಾವರಣವಿದ್ದು, ಬಿಟ್ಟು ಬಿಟ್ಟು ರಭಸದಿಂದ ಮಳೆಯಾಗುತ್ತಿತ್ತು. ಭಟ್ಕಳ ತಾಲೂಕಿನಲ್ಲಿ ಬಿಸಿಲು ಮೂಡಿತ್ತು.