ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ ಸ್ಥಿತಿ ಬಂದೊದಗಿದ್ದು, ಇದನ್ನು ಮೆಟ್ಟಿ ನಿಂತು ಎಲ್ಲರನ್ನು ಪ್ರೀತಿಸಿ, ಸಹಬಾಳ್ಮೆಯಿಂದ ಬಾಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಮಾ.08): ದೇವರ ದೃಷ್ಟಿಯಲ್ಲಿ ಧರ್ಮ, ಜಾತಿ ಇರುವುದಿಲ್ಲ, ಇದನ್ನೆಲ್ಲ ನಾವು ಮಾಡಿಕೊಂಡಿದ್ದು ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ ಸ್ಥಿತಿ ಬಂದೊದಗಿದ್ದು, ಇದನ್ನು ಮೆಟ್ಟಿ ನಿಂತು ಎಲ್ಲರನ್ನು ಪ್ರೀತಿಸಿ, ಸಹಬಾಳ್ಮೆಯಿಂದ ಬಾಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಿಸಿರುವ ಲಕ್ಷ್ಮಿದೇವಿ (ಹುಚ್ಚಮ್ಮ) ಅಮ್ಮನವರ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಜಾತಿ, ಧರ್ಮ, ವರ್ಗ ತೊಲಗಿ ಮನುಷ್ಯ ಮನುಷ್ಯರನ್ನು ಪ್ರೀತಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು. ದೇವರು ದೇವಾಲಯಕ್ಕೆ ಸೀಮಿತವಾಗಿರುವುದಿಲ್ಲ, ಎಲ್ಲಾ ಕಡೆ ಇರುವ ದೇವರನ್ನು ನಾನು ನಂಬುತ್ತೇನೆ, ದೇವಾಲಯದಲ್ಲಿ ಮಾತ್ರ ದೇವರು ಇದ್ದಾನೆ ಎಂದು ನಾನು ನಂಬಿಲ್ಲ, ಏನೆ ಕೆಲಸ ಆರಂಭಿಸಿದರೂ ಸಹ ದೇವರನ್ನು ನೆನೆಯುತ್ತೇವೆ, ಎಲ್ಲರಿಗೂ ಒಳಿತನ್ನು ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಪ್ರೀತಿಯಿಂದ ಕಾಣುವ ಗ್ರಾಮ ಶಿರಮಳ್ಳಿ, ಈ ಗ್ರಾಮದ ಜನರು ನಾನು ಹೇಳಿದಂತೆ ಕೇಳುವ ಜನರಾಗಿದ್ದೀರಿ, ನಾನು ಯಾವ ಪಕ್ಷಕ್ಕೆ ಹೋದರೂ ನನ್ನನ್ನೇ ಬೆಂಬಲಿಸಿದ್ದಾರೆ, ಇಂತಹವರಬೆಂಬಲದಿಂದ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದೇನೆ, ಅಲ್ಲದೇ ಹೆಚ್ಚು ಬಾರಿ ಆಯವ್ಯಯ ಮಂಡಿಸಲು ಸಹ ನೀವೇ ಕಾರಣ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಪಣ
ಶಾಸಕ ಅನಿಲ್ ಚಿಕ್ಕಮಾದು ಈ ತಾಲ್ಲೂಕಿಗೆ ಏನೇ ಅಭಿವೃದ್ಧಿ ಕೆಲಸ ಕೇಳಿದರೂ ಸಹ ನಾನು ಮಂಜೂರು ಮಾಡುತ್ತೇನೆ, ಕ್ಷೇತ್ರದ ಅಭಿವೃದ್ಧಿಗೆ ನಾನೂ ಸಹ ಪಣತೊಡಲಿದ್ದೇನೆ ಎಂದರು. ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ನಾನು ಶಾಸಕನಾಗಲು ಪ್ರಮುಖವಾಗಿ ದೃವನಾರಾಯಣ್, ಸಿದ್ದರಾಮಯ್ಯ ಮತ್ತು ನನ್ನ ತಂದೆ ಚಿಕ್ಕಮಾದುರವರೇ ಕಾರಣ ಎಂದರು. ತಾಲ್ಲೂಕು ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಹಾಸ್ಟೆಲ್ ಅನ್ನು ತಾಲ್ಲೂಕಿಗೆ ಬಜೆಟ್ನಲ್ಲಿ ಮಂಜೂರು ಮಾಡಿದ್ದು ಸುಮಾರು 35 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಸಂಸದ ಸುನೀಲ್ ಬೋಸ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಡಿ. ರವಿಶಂಕರ್, ಎಚ್.ಎಂ. ಗಣೇಶ್ ಪ್ರಸಾದ್, ಡಾ.ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಎಂ. ಶಿವಣ್ಣ, ಬೀಚನಹಳ್ಳಿ ಚಿಕ್ಕಣ್ಣ, ಮುಖಂಡರಾದ ಶಿವಪ್ಪ ಕೋಟೆ, ರಾಜೇಗೌಡ, ಮಾದಪ್ಪ, ಏಜಾಜ್ ಪಾಷ, ನರಸಿಂಹಮೂರ್ತಿ, ಮಲ್ಲೇಶ್, ಮೊಳೆಯೂರು ಅನಂದ, ಮಾಲೇಗೌಡ, ಚಿಕ್ಕಣ್ಣ, ನಾಗೇಗೌಡ, ಗಣೇಶ್, ಸುಬ್ರಹ್ಮಣ್ಯ, ತಹಸೀಲ್ದಾರ್ ಶ್ರೀನಿವಾಸ್, ಬಸಪ್ಪ, ಕಾರ್ತಿಕ್, ಮರಿದೇವಯ್ಯ, ಬೈಪಾಸ್ ಮಂಜು, ಸಿದ್ದರಾಮು ಇದ್ದರು.


