ವಿಜಯಪುರ(ಏ.23): ಜಿಲ್ಲೆಯಲ್ಲಿ ತೀವೃತರವಾದ ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರ ಲಕ್ಷಣವುಳ್ಳವರನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತೆಯರು, ಎಎನ್‌ಎಂ ಮತ್ತು ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಗರದ ನೂತನ ಪ್ರವಾಸ ಮಂದಿರದಲ್ಲಿ ಬುಧವಾರ ಕೋವಿಡ್‌-19 ನಿಯಂತ್ರಣ ಕುರಿತಂತೆ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಂಟೈನ್ಮೆಂಟ್‌ ವಲಯದಲ್ಲಿ ಮಾತ್ರ ಈ ರೀತಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇನ್ನು ಮುಂದೆ ಜಿಲ್ಲೆಯಾದ್ಯಂತ ಮನೆಮನೆಗೆ ಭೇಟಿ ನೀಡುವ ಮೂಲಕ ತೀವ್ರ ತರವಾದ ಶ್ವಾಸಕೋಶದ ತೊಂದರೆ, ನೆಗಡಿ, ಜ್ವರ ಲಕ್ಷಣವುಳ್ಳವರನ್ನು ಪತ್ತೆ ಹಚ್ಚುವ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಹಿರಿಯ ನಾಗರಿಕರು, ಗರ್ಭಿಣಿ ಮಹಿಳೆಯರು, ಸಕ್ಕರೆ ಕಾಯಿಲೆ ಹೊಂದಿದವರು ಮತ್ತು ಡಯಾಲಿಸಿಸ್‌ ರೋಗಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

ವಿಜಯಪುರದಲ್ಲಿ ಐವರ ಮೇಲೆ ಕೊರೋನಾ ಪಾಸಿಟೀವ್ ಶಂಕೆ; ಹೋಂ ಕ್ವಾರಂಟೈನ್‌ನಲ್ಲಿ

ಜಿಲ್ಲೆಯಲ್ಲಿ ಕೋವಿಡ್‌-19ಗೆ ಸಂಬಂಧಪಟ್ಟಂತೆ ದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಅವಶ್ಯಕತೆಗೆ ಅನುಗುಣವಾಗಿ ಈ ಪ್ರಯೋಗಾಲಯ ಸ್ಥಾಪನೆಯಾಗಲಿದೆ. ನಗರದ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ಪಾಸಿಟಿವ್‌ ರೋಗಿಗಳನ್ನು ಉತ್ತಮ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲು ರಾಜ್ಯದ ಅತ್ಯಂತ ನುರಿತ ತಜ್ಞ ವೈದ್ಯರನ್ನು ಸಂಪರ್ಕದಲ್ಲಿದ್ದು, ಜಿಲ್ಲೆಯ ಖಾಸಗಿ ತಜ್ಞ ವೈದ್ಯರು ಈ ರೋಗಿಗಳ ಮೇಲೆ ತೀವ್ರ ನಿಗಾ ಇಟ್ಟು, ಉಪಚರಿಸುವಂತಹ ವಿಶೇಷವಾದ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ 35 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಬ್ಬರು ಮೃತ ಪಟ್ಟಿದ್ದಾರೆ. ಇನ್ನುಳಿದ 32 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಮತ್ತೆ ಹೊಸದಾಗಿ ಕೊರೋನಾ ವೈರಸ್‌ ಲಕ್ಷಣಗಳು ಕಂಡು ಬರದೇ ಇರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನೊಬ್ಬ ರೋಗಿ ಆಕ್ಸಿಜನ್‌ ಆಧಾರದ ಮೇಲೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಕೋವಿಡ್‌-19 ಕಟ್ಟಿಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿವೆ. ಪಾಸಿಟಿವ್‌ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 1033 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಬಗ್ಗೆ ಪತ್ತೆ ಹಚ್ಚಲಾಗಿದೆ. ಸರ್ಕಾರದ ನಿರ್ದೇಶನದಂತೆ ಅವರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದೇಶ ಮತ್ತು ಇತರೆ ಪ್ರದೇಶಗಳಿಂದ ಈವರೆಗೆ ಜಿಲ್ಲೆಗೆ 1705 ಜನರು ಬಂದ ಬಗ್ಗೆ ವರದಿಯಾಗಿದೆ. 1374 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 1084 ನೆಗೆಟಿವ್‌ ವರದಿ ಬಂದಿದ್ದು, 255 ಲ್ಯಾಬ್‌ ಟೆಸ್ಟ್‌ ವರದಿಗಳು ಇನ್ನೂ ಬರಬೇಕಾಗಿದೆ. 1 ರಿಂದ 28 ದಿನಗಳ ಹೋಮ್‌ ಕ್ವಾರಂಟೈನ್‌ ಅವಧಿಯಲ್ಲಿ ಒಟ್ಟು 1325 ಜನರಿದ್ದಾರೆ. 378 ಜನರು 28 ದಿನಗಳ ಹೋಮ್‌ ಕ್ವಾರಂಟೈನ್‌ದಿಂದ ಮುಕ್ತರಾಗಿದ್ದಾರೆಂದು ತಿಳಿಸಿದರು.

ನಗರದ ಕಂಟೈನ್ಮೆಂಟ್‌ ಮತ್ತು ತಿಕೋಟಾ ತಾಲೂಕಿನ ರತ್ನಾಪೂರನ್ನು ಕಂಟೈನ್ಮೆಂಟ್‌ ವಲಯವನ್ನಾಗಿ ರೂಪಿಸಿದ್ದು, ಆರೋಗ್ಯ, ಪೊಲೀಸ್‌ ಮತ್ತು ನಗರ ಸ್ಥಳಿಯ ಸಂಸ್ಥೆಗಳ ಸಿಬ್ಬಂದಿ ನಿಯೋಜಿಸಿದೆ. ಮಹಾನಗರ ಪಾಲಿಕೆಯ ಆಯುಕ್ತರು ನಗರದ ಕಂಟೈನ್ಮೆಂಟ್‌ ವಲಯದ ಮತ್ತು ತಿಕೋಟಾ ತಹಸೀಲ್ದಾರರು ಘಟನಾ ಕಮಾಂಡರ್‌ ಆಗಿ ತೀವ್ರ ನಿಗಾದೊಂದಿಗೆ ಕೆಲಸ ನಿರ್ವಹಿಸುತ್ತಿದ್ದು, ಸಿಸಿ ಕ್ಯಾಮೆರಾ ಮೂಲಕ ಅನಗತ್ಯ ಓಡಾಡುವವರ ಬಗ್ಗೆ ನಿಗಾ ಮತ್ತು ಸಾರ್ವಜನಿಕರಿಗೆ ಸಕಾಲಕ್ಕೆ ಅಗತ್ಯ ವಸ್ತುಗಳ ಪೂರೈಕೆ, ಸ್ವಚ್ಛತಾ ನಿರ್ವಹಣೆ ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗಲು ಸಲಹೆ ನೀಡಿದರು.

ಕೋವಿಡ್‌ ನಿರ್ವಹಣೆಯ ಜೊತೆಗೆ ರೈತರ ಬೆಳೆಗಳಿಗೂ ವಿಶೇಷ ಗಮನ ನೀಡುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಸಲಹೆ ಹಿನ್ನೆಲೆ ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿ, ದಾಳಿಂಬೆ, ಪಪ್ಪಾಯಿ, ಕರಬೂಜ ಸೇರಿದಂತೆ ಇತರೆ ಬೆಳೆಗಳಿಗೆ ರೈತರ ಅನುಕೂಲಕ್ಕಾಗಿ ಆವರ್ತ ನಿಧಿ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲು ಸೂಕ್ತ ಪ್ರಸ್ತಾವನೆ ರೂಪಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಜಿಲ್ಲೆಯಲ್ಲಿ ಖರೀದಿದಾರರು ಮತ್ತು ರೈತರ ಮಧ್ಯೆ ಸಂಪರ್ಕ ಜಾಲ ರೂಪಿಸಿ ಸೂಕ್ತ ಬೆಲೆ ಕಲ್ಪಿಸುವ ಕುರಿತಂತೆ ಶಾಸಕ ಅರುಣ ಶಹಾಪುರ ಅವರ ಸಲಹೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಉಜನಿ ಜಲಾಶಯದಿಂದ ಭೀಮಾ ನದಿಗೆ ಬಿಡಲಾದ ನೀರು ಅಕ್ಕಲಕೋಟೆವರೆಗೆ ಮಾತ್ರ ಲಭ್ಯವಾಗಲಿದ್ದು, ಇಂಡಿ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪೂರ ಬಹತೇಕ ಹಳ್ಳಿಗಳಿಗೆ ಈ ನೀರು ಲಭ್ಯವಾಗಲು ಅನಾನುಕೂಲವಾಗುತ್ತಿದ್ದು, ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ಸಚಿವರಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮೇರೆಗೆ ರಾಜ್ಯ ಮತ್ತು ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆಯಲು ತಾವು ಪ್ರಯತ್ನಸುವುದಾಗಿ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಜಿಲ್ಲೆಯಾದ್ಯಂತ ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವರಿಗೆ ಅವಶ್ಯಕ ಮಾಹಿತಿ ನೀಡಿದರು. ಶಾಸಕರಾದ ಎಂ.ಸಿ ಮನಗೂಳಿ, ಸೋಮನಗೌಡ ಪಾಟೀಲ (ಸಾಸನೂರ) ಮತ್ತು ಇತರ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.