ಕೆಲ ಫೈನಾನ್ಸ್ ಗಳಿಂದ ಮಾತ್ರ ಅತಿರೇಕದ ವರ್ತನೆಗಳು ಕಂಡು ಬಂದಿದ್ದು, ಉಳಿದ ಫೈನಾನ್ಸ್ ಗಳು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ತಪ್ಪು ತಿಳಿವಳಿಕೆ ಮೂಡುತ್ತಿದೆ. ವಂಚನೆ ಪ್ರಕರಣಗಳು ಹೊರತುಪಡಿಸಿ ಬೇರೆ ಯಾವುದೇ ಫೈನಾನ್ಸ್ ಗಳಿಂದ ತೊಂದರೆಯಾಗಿಲ್ಲ. ಫೈನಾನ್ಸ್ ಗಳು ಗ್ರಾಹಕರಿಂದ ಸಾಲ ವಸೂಲಿಗೆ ಕಾನೂನು ಬದ್ಧ ಕ್ರಮ ವಹಿಸಬೇಕು ಎಂದು ಸೂಚಿಸಿದ ಸಚಿವ ಸತೀಶ ಜಾರಕಿಹೊಳಿ 

ಬೆಳಗಾವಿ(ಫೆ.02): ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ‌ನೀಡಿದರೆ‌ ಅಂತಹ ಫೈನಾನ್ಸ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸ್‌ ಇಲಾಖೆಗೆ ನಿರ್ದೇಶನ‌ ನೀಡಲಾಗಿದೆ. ಫೈನಾನ್ಸ್‌ಗಳು ಕಾನೂನು ಬದ್ಧವಾಗಿ ನೋಟಿಸ್ ಜಾರಿ ಮಾಡಿ ಮಾಡಬೇಕು. ಮನೆಗಳಿಗೆ ಹೋಗಿ ಕಿರುಕುಳ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

Add Asianetnews Kannada as a Preferred SourcegooglePreferred

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಬ್ಯಾಂಕು, ಸಹಕಾರಿ ಸಂಘಗಳ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೆಲ ಫೈನಾನ್ಸ್ ಗಳಿಂದ ಮಾತ್ರ ಅತಿರೇಕದ ವರ್ತನೆಗಳು ಕಂಡು ಬಂದಿದ್ದು, ಉಳಿದ ಫೈನಾನ್ಸ್ ಗಳು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ತಪ್ಪು ತಿಳಿವಳಿಕೆ ಮೂಡುತ್ತಿದೆ. ವಂಚನೆ ಪ್ರಕರಣಗಳು ಹೊರತುಪಡಿಸಿ ಬೇರೆ ಯಾವುದೇ ಫೈನಾನ್ಸ್ ಗಳಿಂದ ತೊಂದರೆಯಾಗಿಲ್ಲ. ಫೈನಾನ್ಸ್ ಗಳು ಗ್ರಾಹಕರಿಂದ ಸಾಲ ವಸೂಲಿಗೆ ಕಾನೂನು ಬದ್ಧ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಮಂಡ್ಯ ಮೈಕ್ರೋ ಫೈನಾನ್ಸ್ ಕಿರುಕುಳ: ಮೊನ್ನೆ ಅಂಗನವಾಡಿ ಸಹಾಯಕಿ ತಾಯಿ, ಇಂದು ಮಗ ಆತ್ಮಹತ್ಯೆ

ಫೈನಾನ್ಸ್ ಗಳಿಂದ ಪಡೆದ ಸಾಲ ಮನ್ನಾ ಆಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ನಂಬಿಕೆಯಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಧ್ಯ ಪ್ರವೇಶಿಸಿದೆ. ಇದರಲ್ಲಿ ಸಾಲ ಮನ್ನಾ ಪ್ರಶ್ನೆಯೇ ಇಲ್ಲ. ನಿಯಮಾನುಸಾರ ಕಾಲಾವಕಾಶ ನೀಡಿ ಸಾಲ ಮರುಪಾವತಿ ಮಾಡಿಕೊಳ್ಳಬೇಕು ಎಂದ ಅವರು, ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಶಿಸ್ತು ಕ್ರಮ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ನೋಂದಣಿ ಇಲ್ಲದ ಫೈನಾನ್ಸ್ ಸಂಸ್ಥೆಗಳು ಸಾಲ ವಿತರಣೆ ಮಾಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದಲ್ಲಿ, ಸಹಕಾರ ಕಾಯ್ದೆಯಡಿ ಅಂತಹ ಸಂಸ್ಥೆಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಯಮಾನುಸಾರ ನೋಂದಣಿ ಇಲ್ಲದ ಸಹಕಾರ ಸಂಸ್ಥೆಗಳು ಶೇ14ರಷ್ಟು ಮಾತ್ರ ಬಡ್ಡಿ ವಿಧಿಸಬಹುದಾಗಿದೆ. ನೋಂದಣಿಯಾಗದ ಕಾರಣ ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಸಾರ್ವಜನಿಕರಿಗೆ ಸಂಸ್ಥೆಗಳಿಂದ ಕಿರುಕುಳ ಬಂದಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕು. ಅದರ ಬದಲಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮರುಪಾವತಿ ಸಾಮರ್ಥ್ಯ ಆಧಾರದ ಮೇಲೆ ಸಾಲ ನೀಡಬೇಕು. ಜನರು ಏಜೆಂಟರುಗಳ ಮೂಲಕ ಸಾಲ ಪಡೆಯಬಾರದು. ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವ ದೂರುಗಳು ಕೇಳಿಬರುತ್ತಿವೆ. ಸಾಲ ಮರುಪಾವತಿಗೆ ಸೂಚನೆ ನೀಡಲು ಕಾಯ್ದೆಯಡಿ ಕೆಲವು ನಿಯಮಗಳಿವೆ. ಒಂದುವೇಳೆ ಸಾಲ ಪಡೆದವರೊಂದಿಗೆ ಬೇಕಾಬಿಟ್ಟಿ ವರ್ತಿಸಿದಲ್ಲಿ ಅಂತಹ ಸಂಸ್ಥೆಗಳ ಮೇಲೆ ಮೊಕದ್ದಮೆ ದಾಖಲಿಸಬಹುದು. ಸಾಲ ಮರುಪಾವತಿಗೆ ಸಂಸ್ಥೆಗಳು ಕಾನೂನು ಮೂಲಕ ಮಾತ್ರ ವಸೂಲಿ ಮಾಡಬಹುದಾಗಿದೆ. ಸಾರ್ವಜನಿಕರಿಗೆ ತಿಳಿಹೇಳಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲಗಳನ್ನು ನೀಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಸಾಲದ ಕಂತು ಸಂಗ್ರಹಣೆಗೆ ಫೈನಾನ್ಸ್ ಸಿಬ್ಬಂದಿ ಮನೆಗಳಿಗೆ ಹೋದಲ್ಲಿ, ಸಾಲ ಪಡೆದವರು ಮರುಪಾವತಿಸದೇ ಫೈನಾನ್ಸ್ ಸಿಬ್ಬಂದಿಯನ್ನು ಮರಳಿ ಕಳುಹಿಸುವ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಫೈನಾನ್ಸ್ ಸಿಬ್ಬಂದಿ ಕಂತು ಪಡೆಯಲು ಮನೆಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಫೈನಾನ್ಸ್ ಪ್ರತಿನಿಧಿಯೊಬ್ಬರೂ ತಮ್ಮ ಸಮಸ್ಯೆ ಹೇಳಿದರು.

ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರಿಂದ ಮನವಿ, ದೂರು ಸ್ವೀಕರಿಸಿದರು.

ತುಮಕೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮನೆ ಬಿಟ್ಟವರು ವಾಪಸ್

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಸೀಲ್ದಾರರು, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರು ಸೇರಿಯಂತೆ ವಿವಿಧ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶೀಘ್ರವೇ ಸುಗ್ರಿವಾಜ್ಞೆ ಜಾರಿ;

ಇವರು ಜನರ ದಾರಿ ತಪ್ಪಿಸಿ ಕಮಿಷನ್ ಪಡೆಯಲು ಸಬ್ಸಿಡಿ ಸಾಲ ಎಂದು ನಂಬಿಸಿ ಅವರ ಹೆಸರಲ್ಲಿ ಸಾಲ ಮಂಜೂರು ಮಾಡಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಸಬ್ಸಿಡಿ ಸಾಲ ಎಂದು ಮೋಸ ಮಾಡಿದ ಮಧ್ಯವರ್ತಿಗಳ ಮೇಲೆ ಕ್ರಮ ಜರುಗಿಸಿ, ಅವರಿಂದ ಸಾಲ ಮರು ಪಾವತಿಸುವ ಕೆಲಸವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಸದ್ಯದಲ್ಲೇ ಜಾರಿಯಾಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.