ನವದೆಹಲಿ (ಮಾ.10):  ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಎರಡು ಹೊಸ ಪ್ಲಾಸ್ಟಿಕ್‌ ಪಾರ್ಕ್ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಮಂಗಳವಾರ ಸಂಸತ್ತಿಗೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದಲ್ಲಿ ಕರ್ನಾಟಕದ ಪ್ಲಾಸ್ಟಿಕ್‌ ಪಾರ್ಕ್ ತಲೆ ಎತ್ತಲಿದೆ ಎಂದೂ ಮಾಹಿತಿ ನೀಡಿದ್ದಾರೆ.

2 ಪ್ಲಾಸ್ಟಿಕ್‌ ಪಾರ್ಕ್ಗಳ ಸ್ಥಾಪನೆಗೆ ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶ, ಉತ್ತರಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಗೋವಾ ಸೇರಿ ಒಟ್ಟು 7 ರಾಜ್ಯಗಳಿಂದ ಪ್ರಸ್ತಾವ ಬಂದಿತ್ತು. ಸ್ಥಳ ಆಯ್ಕೆ, ಅಂದಾಜು ಯೋಜನಾ ವೆಚ್ಚ, ನಿಗದಿತ ಕಾಲಮಿತಿಯೊಳಗೆ ಅನುಷ್ಠಾನ ಸಾಧ್ಯತೆ ಕುರಿತು ಕರ್ನಾಟಕ, ಉತ್ತರಪ್ರದೇಶ, ಬಿಹಾರ ಹಾಗೂ ಹಿಮಾಚಲಪ್ರದೇಶಗಳಿಂದ ಮಾತ್ರ ಪ್ರಸ್ತಾವ ಸ್ವೀಕರಿಸಲಾಗಿತ್ತು. ಇದೀಗ ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಪ್ಲಾಸ್ಟಿಕ್‌ ಪಾರ್ಕ್ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸದಾನಂದಗೌಡ ತಿಳಿಸಿದ್ದಾರೆ.

ರಾಜ್ಯಕ್ಕೆ ಬಂತು ಮಣ್ಣು, ನೀರಲ್ಲಿ ಕರಗುವ ಪ್ಲಾಸ್ಟಿಕ್‌! .

ಕರ್ನಾಟಕದಲ್ಲಿ ಮಂಗಳೂರು ಬಳಿಯ ಗಂಜಿಮಠ ಹಾಗೂ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಪ್ಲಾಸ್ಟಿಕ್‌ ಪಾರ್ಕ್ ಸ್ಥಾಪನೆಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆರಂಭಿಕ ಪ್ರಸ್ತಾವಗಳ ತಾಂತ್ರಿಕ ಮೌಲ್ಯಮಾಪನ ನಡೆಸಿ ಈ ಸಮಿತಿ ಶಿಫಾರಸು ಮಾಡಿದೆ ಎಂದು ಮಾಹಿತಿ ನೀಡಿದರು.

ಉದ್ದೇಶಿತ ಪ್ಲಾಸ್ಟಿಕ್‌ ಪಾರ್ಕ್ಗಳು ಅವಶ್ಯ ಅನುಮತಿಯನ್ನು ಪಡೆದು, ಶಾಸನಬದ್ಧ ಪರಿಸರ ನಿಯಮಗಳಿಗೆ ಅನುಗುಣವಾಗಿ ಘಟಕ ಸ್ಥಾಪಿಸಬೇಕು ಎಂದು ತಿಳಿಸಿದರು. ಈ ಪಾರ್ಕ್ಗಳ ಸ್ಥಾಪನೆಯಿಂದ ಪರಿಸರದ ಮೇಲೆ ಏನಾದರೂ ಪರಿಣಾಮವಾಗಲಿದೆಯೇ? ಈ ಬಗ್ಗೆ ಯಾವುದೇ ಸಮೀಕ್ಷೆಯನ್ನು ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರವನನ್ನು ಸದಾನಂದಗೌಡ ನೀಡಿದರು.

ಪ್ಲಾಸ್ಟಿಕ್‌ ಘಟಕದಲ್ಲೇನಿರುತ್ತೆ?:  ಇಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇವು ಗುಣಮಟ್ಟದ ಪ್ಲಾಸ್ಟಿಕ್‌ ಉತ್ಪನ್ನಗಳಾಗಿದ್ದು, ಹಾಳಾಗಿರುವ ಹಾಗೂ ಮರುಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್‌ ಬಳಸಿ ಮರು ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿತಗ್ಗುತ್ತದೆ.