Asianet Suvarna News Asianet Suvarna News

ರಾಜ್ಯಕ್ಕೆ ಬಂತು ಮಣ್ಣು, ನೀರಲ್ಲಿ ಕರಗುವ ಪ್ಲಾಸ್ಟಿಕ್‌!

ರಾಜ್ಯಕ್ಕೆ ಬಂತು ಮಣ್ಣು, ನೀರಲ್ಲಿ ಕರಗುವ ಪ್ಲಾಸ್ಟಿಕ್‌| ಕನ್ನಡಿಗನ ಎನ್ವಿ ಗ್ರೀನ್‌ ಬಯೋಟೆಕ್‌ ಕಂಪನಿಯಿಂದ ಆವಿಷ್ಕಾರ| ಬೆಂಗಳೂರಲ್ಲಿ ಕಚೇರಿ ಆರಂಭ, ಇನ್ಮುಂದೆ ಮಾರುಕಟ್ಟೆಯಲ್ಲೂ ಲಭ್ಯ

dissolvable plastic bags reaches karnataka pod
Author
Bangalore, First Published Mar 2, 2021, 9:24 AM IST

ಬೆಂಗಳೂರು(ಮಾ.02): ಪ್ಲಾಸ್ಟಿಕ್‌ ಮತ್ತು ಬಟ್ಟೆಬ್ಯಾಗ್‌ಗೆ ಪರ್ಯಾಯವಾಗಿ ಮಣ್ಣು ಮತ್ತು ಬಿಸಿ ನೀರಿನಲ್ಲಿ ಸುಲಭವಾಗಿ ಕರಗಬಲ್ಲ ಕೈಚೀಲಗಳನ್ನು ಎನ್ವಿಗ್ರೀನ್‌ ಬಯೋಟೆಕ್‌ ಇಂಡಿಯಾ ಎಂಬ ಕಂಪನಿ ಆವಿಷ್ಕರಿಸಿದ್ದು, ಈ ಉತ್ಪನ್ನಗಳು ಈಗ ಬೆಂಗಳೂರಿನಲ್ಲಿ ಮಾರುಕಟ್ಟೆಗೆ ಬಂದಿವೆ.

"

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ನ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಎಲ್ಲೆಡೆ ಜನಜಾಗೃತಿ ಮೂಡುತ್ತಿರುವ ವೇಳೆಯಲ್ಲಿ ಎನ್ವಿಗ್ರೀನ್‌ ಕಂಪನಿ ಸಂಪೂರ್ಣ ಪರಿಸರಸ್ನೇಹಿಯಾದ, ಶೇ.100ರಷ್ಟುಸಾವಯವ, ಜೈವಿಕ ತ್ಯಾಜ್ಯ ಬಳಸಿ ಕೈಚೀಲಗಳನ್ನು ಆವಿಷ್ಕರಿಸಿದೆ. ಈ ಕಂಪನಿಯ ಕಚೇರಿ ಇದೀಗ ಬೆಂಗಳೂರಿನಲ್ಲೂ ಆರಂಭಗೊಂಡಿದೆ.

ಸೋಮವಾರ ನಗರದ ಎಂ.ಜಿ.ರಸ್ತೆಯಲ್ಲಿ ಎನ್ವಿಗ್ರೀನ್‌ ಬಯೋಟೆಕ್‌ ಇಂಡಿಯಾದ ನೂತನ ಕಚೇರಿಯನ್ನು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ಸಂಸ್ಥೆಯ ಎನ್ವಿ ಗ್ರೀನ್‌ ಉತ್ಪನ್ನಗಳನ್ನು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಬಿಡುಗಡೆ ಮಾಡಿದರು.

ಪ್ಲಾಸ್ಟಿಕ್‌ ಚೀಲದಂತೆ ಕಾಣುವ, ಆದರೆ ನೈಸರ್ಗಿಕ ಪಿಷ್ಠ ಮತ್ತು ಸಸ್ಯಜನ್ಯ ಎಣ್ಣೆ ಉತ್ಪನ್ನಗಳಿಂದ ಆವಿಷ್ಕರಿಸಲಾಗಿರುವ ಎನ್ವಿ ಗ್ರೀನ್‌ ಕೈಚೀಲಗಳು, ಅರ್ಧ ಕೆ.ಜಿ.ಯಿಂದ 15 ಕೆ.ಜಿ. ವರೆಗಿನ ಭಾರ ತಡೆದುಕೊಳ್ಳುತ್ತವೆ. ಜೊತೆಗೆ ನೀರು ಮತ್ತು ಮಣ್ಣಿನಲ್ಲಿ ಸುಲಭವಾಗಿ ಕರಗುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಬಳಕೆದಾರರು ಕೂಡ ಯಾವುದೇ ಆತಂಕವಿಲ್ಲದೆ ಇವುಗಳನ್ನು ಉಪಯೋಗಬಹುದು. ಮಣ್ಣಿನಲ್ಲಿ ಈ ಕೈಚೀಲಗಳು ಕರಗಿದ ಮೇಲೆ ಸಸ್ಯಗಳಿಗೆ ಗೊಬ್ಬರವಾಗಿಯೂ ಬಳಕೆ ಮಾಡಬಹುದಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು, ಪ್ಲಾಸ್ಟಿಕ್‌ ಪಿಡುಗು ನಿವಾರಣೆಗೆ ಎನ್ವಿ ಗ್ರೀನ್‌ ಬ್ಯಾಗ್‌ ಹೆಚ್ಚು ಸಹಕಾರಿಯಾಗಿದೆ. ಕುದಿಯುವ ನೀರಿನಲ್ಲಿ ಶೇ.99ರಷ್ಟುಮತ್ತು ಮಣ್ಣಿನಲ್ಲಿ ಸ್ವಾಭಾವಿಕವಾಗಿ ಕರಗುವ ಎನ್ವಿ ಗ್ರೀನ್‌ ಬ್ಯಾಗ್‌ ಪರಿಸರ ಹಾನಿ ತಡೆಗಟ್ಟಬಲ್ಲದು. ಇಂತಹ ಬ್ಯಾಗ್‌ ಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಇಲಾಖೆಯಲ್ಲೂ ಎನ್ವಿ ಗ್ರೀನ್‌ ಬಳಸುವಂತೆ ಸೂಚನೆ ನೀಡಲು ಮುಖ್ಯಮಂತ್ರಿಯವರನ್ನು ಕೋರುತ್ತೇನೆ ಎಂದು ಹೇಳಿದರು.

ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಕನ್ನಡಿಗರೇ ಆದ ಅಶ್ವಥ್‌ ಹೆಗ್ಡೆ ಅವರು ಪರಿಸರ ಸ್ನೇಹಿ ಬ್ಯಾಗನ್ನು ಸಂಶೋಧನೆ ಮಾಡಿದ್ದಾರೆ. ಪ್ಲಾಸ್ಟಿಕ್‌ ಅಲ್ಲದ, ಕೊಳೆಯುವಂತಹ ಬ್ಯಾಗನ್ನು ತಯಾರು ಮಾಡಿರುವುದು ಒಳ್ಳೆಯ ಆವಿಷ್ಕಾರ. ಈಗಾಗಲೇ ಎಂಟು ದೇಶಗಳಿಗೆ ಈ ಬ್ಯಾಗ್‌ ರಫ್ತಾಗುತ್ತಿದ್ದು, ಇದೀಗ ನಮ್ಮ ನಾಡಿನಲ್ಲೇ ಕಚೇರಿ ಆರಂಭಿಸುತ್ತಿರುವುದು ಸಂತಸ ತಂದಿದೆ. ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಪೆಡಂಭೂತವಾಗಿ ಬೆಳೆಯುತ್ತಿದ್ದು, ಪ್ಲಾಸ್ಟಿಕ್‌ ಇಲ್ಲದೇ ಜೀವನವೇ ಇಲ್ಲವೇನೋ ಎಂಬಂತಹ ಸ್ಥಿತಿ ಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎನ್ವಿಗ್ರೀನ್‌ ಆಶಾದಾಯಕವಾಗಿದೆ ಎಂದರು.

ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಿಶಿಷ್ಟಉತ್ಪನ್ನದ ಆವಿಷ್ಕಾರ ಇದಾಗಿದ್ದು, ಸರ್ಕಾರ ಇಂತಹ ಉದ್ಯಮವನ್ನು ಬೆಂಬಲಿಸಬೇಕು. ಜನರಿಗೆ ಈ ಉತ್ಪನ್ನಗಳು ಹೆಚ್ಚು ತಲುಪುವಂತಾಗಬೇಕು. ಜತೆಗೆ ಇದರ ಬಳಕೆಯಿಂದಾಗುವ ಉಪಯೋಗದ ಕುರಿತು ಜಾಗೃತಿ ಮೂಡಿಸಬೇಕು. ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ತಯಾರಿಸಲ್ಪಡುವ ಉತ್ಪನ್ನಗಳ ಕಚ್ಚಾವಸ್ತುಗಳನ್ನು ತಯಾರಿಸುವ ಸಂಸ್ಥೆ ಇರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್ವಿಗ್ರೀನ್‌ ಬಯೋಟೆಕ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್‌ ಹೆಗ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೆಕೆಂಡುಗಳಲ್ಲೇ ನೈಸರ್ಗಿಕವಾಗಿ ಕರಗುತ್ತೆ!

ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗುವುದಿಲ್ಲ, ಕೊಳೆಯುವುದೂ ಇಲ್ಲ. ಆದರೆ, ಎನ್ವಿಗ್ರೀನ್‌ ಕೈಚೀಲವನ್ನು ಒಂದು ಲೋಟ ಕುದಿಯುವ ನೀರಿನಲ್ಲಿ ಹಾಕಿದ 10ರಿಂದ 15 ಸೆಕೆಂಡುಗಳಲ್ಲೇ ಕರಗುತ್ತದೆ. ಇನ್ನು ಈ ಕೈಚೀಲ 120ರಿಂದ 180 ದಿನಗಳಲ್ಲಿ ಯಾವುದೇ ರಾಸಾಯನಿಕ ವಸ್ತುಗಳ ಅಗತ್ಯವಿಲ್ಲದೆ ಸಹಜವಾಗಿ ಮಣ್ಣಿನಲ್ಲಿ ಕರಗುತ್ತದೆ.

ಆವಿಷ್ಕಾರದ ಹಿಂದಿನ ಮೆದುಳು ಅಶ್ವತ್‌್ಥ ಹೆಗ್ಡೆ

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸಣ್ಣ ಹಳ್ಳಿಯೊಂದರ ಯುವಕ ಅಶ್ವತ್‌್ಥ ಹೆಗ್ಡೆ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಸ್ಥಾಪಕ. ತಮ್ಮ ತಾಯಿಯಿಂದ 15 ಸಾವಿರ ರು. ಸಾಲ ಪಡೆದು ಅಡಿಕೆ ಹಾಳೆಯ ಪ್ಲೇಟ್‌ ತಯಾರಿಕಾ ಉದ್ಯಮ ಆರಂಭಿಸಿ ಯಶಸ್ಸು ಕಂಡ ಅವರು, ನಂತರ 2012ರಲ್ಲಿ ಎನ್ವಿಗ್ರೀನ್‌ ಬಯೋಟೆಕ್‌ ಇಂಡಿಯಾ ಸಂಸ್ಥೆ ಪ್ರಾರಂಭಿಸಿದ್ದರು. ನಂತರ ಪ್ರಕೃತಿಗೆ ಹಾನಿಯಾಗದಂತೆ ಪರಿಸರ ಸ್ನೇಹಿ ಚೀಲ ಮಾಡಬೇಕೆಂಬ ಹೆಗ್ಡೆ ಅವರ ಹಂಬಲ ಈ ಆವಿಷ್ಕಾರಕ್ಕೆ ನಾಂದಿಯಾಯಿತು.

17 ದೇಶಗಳಿಗೆ ರಫ್ತು

ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕ ಹೊಂದಿರುವ ಎನ್ವಿಗ್ರೀನ್‌ ಬಯೋಟೆಕ್‌ ಇಂಡಿಯಾ ಸಂಸ್ಥೆ ಬರೋಬ್ಬರಿ 17 ವಿವಿಧ ದೇಶಗಳಿಗೆ ತನ್ನ ಪರಿಸರ ಸ್ನೇಹಿ ಕೈ ಚೀಲದ ಉತ್ಪನ್ನ ರಫ್ತು ಮಾಡುತ್ತಿದೆ. ಈ ಕಂಪನಿಯು ತಮಿಳುನಾಡು, ಗೋವಾ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಹತ್ತು ಫ್ರಾಂಚೈಸಿಗಳು ಮತ್ತು ಉತ್ಪಾದನಾ ಘಟಕಗಳನ್ನು ಹೊಂದಿದೆ. ಅಲ್ಲದೆ, ಸಂಸ್ಥೆಯು ಸುಮಾರು 30ರಿಂದ 40 ಕೋಟಿ ರು.ಗಳಷ್ಟುವಹಿವಾಟು ನಡೆಸಿ ಗಮನ ಸೆಳೆದಿದೆ.

ಎನ್ವಿಗ್ರೀನ್‌ ಸಂಸ್ಥೆಯು ಪರಿಸರಸ್ನೇಹಿ ಏಪ್ರನ್‌, ಎಣ್ಣೆ ಮತ್ತು ಆಯಿಲ್‌ ಸ್ಯಾಶೆ, ಕಸದ ಚೀಲಗಳು, ಲಾಂಡ್ರಿ ಬ್ಯಾಗ್‌, ಕಸದ ಬುಟ್ಟಿಯ ಕವರ್‌ ಸೇರಿದಂತೆ ಒಟ್ಟು 8 ಮಾದರಿಯ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.

Follow Us:
Download App:
  • android
  • ios