Asianet Suvarna News Asianet Suvarna News

ಹೆಣ್ಮಕ್ಕಳ ಬಗ್ಗೆ ಜಾಸ್ತಿ ಮಾತಾಡ್ಬಾರದು: ರಮೇಶ ಜಾರಕಿಹೊಳಿ

ವೈಯಕ್ತಿಕ ನಿಂದನೆ ಬೇಡ| ರಾಜಕೀಯವಾಗಿ ಅಷ್ಟೇ ವಿರೋಧ ಮಾಡೋಣ| ಗೋಕಾಕ, ಬೆಳಗಾವಿ ಗ್ರಾಮೀಣ, ಅರಬಾವಿ ಕ್ಷೇತ್ರ ಗೆಲ್ಲಬೇಕು ಎಂದು ಗ್ರಾಪಂ ಚುನಾವಣೆಗಿಂತ ತಿಂಗಳು ಮೊದಲೇ ನಿರ್ಧಾರ ಮಾಡಿದ್ದೆವು: ಜಾರಕಿಹೊಳಿ| 

Minister Ramesh Jarkiholi Talks Over Lakshmi Hebbalkar grg
Author
Bengaluru, First Published Feb 15, 2021, 12:41 PM IST

ಬೆಳಗಾವಿ(ಫೆ.15): ರಾಜಕಾರಣದಲ್ಲಿ ಯೋಚನೆ ಮಾಡಿ ಮಾತನಾಡಬೇಕು. ಮಹಿಳೆಯರ ಬಗ್ಗೆ ಗೌರವ ಇದೆ. ಹೆಣ್ಣು ಮಗಳ ಬಗ್ಗೆ ಜಾಸ್ತಿ ಮಾತನಾಡಬಾರದು. ವೈಯಕ್ತಿಕ ನಿಂದನೆ ಬೇಡ. ರಾಜಕೀಯವಾಗಿ ಅಷ್ಟೇ ವಿರೋಧ ಮಾಡೋಣ. ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವುದೇ ಉದ್ದೇಶವಾಗಿರಲಿ ಎನ್ನುವ ಮೂಲಕ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ಗೆ ಟಕ್ಕರ್‌ ಕೊಟ್ಟಿದ್ದಾರೆ.

ನಗರದ ಸಿಪಿಇಡ್‌ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಪಂ ನೂತನ ಸದಸ್ಯರಿಗೆ, ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಗೋಕಾಕ, ಬೆಳಗಾವಿ ಗ್ರಾಮೀಣ, ಅರಬಾವಿ ಕ್ಷೇತ್ರ ಗೆಲ್ಲಬೇಕು ಎಂದು ಗ್ರಾಪಂ ಚುನಾವಣೆಗಿಂತ ತಿಂಗಳು ಮೊದಲೇ ನಿರ್ಧಾರ ಮಾಡಿದ್ದೆವು. ಸದ್ಯ ಸಮಾರಂಭದಲ್ಲಿ 22 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಜರಾಗಿದ್ದಾರೆ. ಮೂರು ಗ್ರಾಪಂನವರು ಫೋನ್‌ ಮಾಡಿದ್ದಾರೆ. ಫಲಿತಾಂಶ ದಿನ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ ಗೆಲುವು, ರಮೇಶ ಜಾರಕಿಹೊಳಿಗೆ ಮುಖಭಂಗ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಂತು. ಬಡಾಲ ಅಂಕಲಗಿ ಒಂದು ಗ್ರಾಪಂ ಫಲಿತಾಂಶಕ್ಕೆ ಆ ರೀತಿ ಸುದ್ದಿ ಹರಿಬಿಟ್ಟಿದ್ದರು. ನನ್ನ ಸಾಮರ್ಥ್ಯ ತೋರಿಸುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದೆ. ಅದೇ ರೀತಿ ಮಾಡಿದ್ದೇನೆ ಎಂದರು.

ನನ್ನ ಜೊತೆ ಇದ್ದವರು ಬರ್ತಾರೆ:

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಆರ್‌ಸಿಯು ನಿರ್ಮಾಣಕ್ಕೆ ಜಾಗ ಬೇಕಿದ್ದರಿಂದ ಕೆರೆ ಕೆಲಸ ನಿಲ್ಲಿಸಿದ್ದೇವೆ. ಮುಂದೆ ಕೆರೆ ಮಾಡಿಕೊಡುತ್ತೇನೆ. ಹಿರೇಬಾಗೇವಾಡಿ ಗ್ರಾಪಂನಲ್ಲಿ ಇರುವರು ನನ್ನ ಜನ. ಮುಂದೆ ಬಿಜೆಪಿಗೆ ಬರುತ್ತಾರೆ. ಗ್ರಾಮೀಣ ಕ್ಷೇತ್ರದಲ್ಲಿ ನಮ್ಮವರೇ ಹೆಚ್ಚಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ನನ್ನ ಜತೆ ಇದ್ದವರು. ಅವರೆಲ್ಲ ಬಿಜೆಪಿಗೆ ಬರ್ತಾರೆ. ಯಾರೊಂದಿಗೂ ವೈರತ್ವ ಮಾಡಿಕೊಳ್ಳಬೇಡಿ ಎಂದು ನೂತನ ಸದಸ್ಯರಿಗೆ ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಶಾಕ್​ ಕೊಡಲು ರಮೇಶ್​ ಜಾರಕಿಹೊಳಿ ಮೆಗಾ ಪಾಲಿಟಿಕ್ಸ್!​

ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ:

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಗೋಕಾಕ ಕ್ಷೇತ್ರಕ್ಕಿಂತ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಡಬೇಕಿದೆ. ಗ್ರಾಮೀಣ ಕ್ಷೇತ್ರ ಹಿಂದುಳಿದಿದೆ ಎಂದರು. ಅಧ್ಯಕ್ಷ, ಉಪಾಧ್ಯಕ್ಷ ಆಗುವಾಗ ಜಗಳಾಡಿದ್ದೀರಿ, ಇನ್ಮುಂದೆ ಮಾಡಬೇಡಿ. ಉದ್ಯೋಗ ಖಾತ್ರಿ ಕೆಲಸ ತಂದಿರುವೆ ಎಂದು ಗ್ರಾಮೀಣ ಕ್ಷೇತ್ರದಲ್ಲಿ ಹೇಳುತ್ತಾರೆ. ನರೇಗಾ ಕೇಂದ್ರ ಸರ್ಕಾರದ ಯೋಜನೆ ಎಂದರು. ಜಲಜೀವನ ಯೋಜನೆ ಯಶಸ್ವಿ ಮಾಡಬೇಕು. ನರೇಗಾವನ್ನು ಹೆಚ್ಚು ಬಳಸಬೇಕು. ಎಲ್ಲ ಯೋಜನೆಗಳನ್ನು ಜನರ ಮನೆಗಳಿಗೆ ತಲುಪಿಸಬೇಕು. ಗ್ರಾಪಂ ಸಭೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪತ್ರದ ಬಗ್ಗೆ ಪಿಡಿಒಗಳಿಂದ ಓದಿಸಬೇಕು ಎಂದರು.

ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸೋಲು, ಗೆಲುವು ಅದೃಷ್ಟದ ಆಟ. ಮುಂದೆ ಉತ್ತಮ ಕೆಲಸ ಮಾಡಲಿ ಎಂದು ಪೋ›ತ್ಸಾಹಿಸುವ ಸಲುವಾಗಿ ಸನ್ಮಾನ ಮಾಡಲಾಗುತ್ತಿದೆ. ಹುಲಿ ಕರ್ನಾಟಕವನ್ನು ಅಲ್ಲಾಡಿಸಿದೆ. ಕುರಿ ಜತೆ ಹೋಗಬಾರದು. ದೇಶ ಭಕ್ತಿಗೆ ನರೇಂದ್ರ ಮೋದಿ ಉದಾಹರಣೆ, ಪಾಕಿಸ್ತಾನ ಭಕ್ತಿಗೆ ರಾಹುಲ್‌ ಗಾಂಧಿ ಉದಾಹರಣೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಯುವರಾಜ ಜಾಧವ್‌, ಧನಂಜಯ ಜಾಧವ, ರಂಜನಾ ಕೋಲಕಾರ, ವೀರಭದ್ರ ಪೂಜಾರಿ, ಮೋಹನ ಅಂಗಡಿ, ಮನೋಹರ ಕಡೋಲಕರ, ಕಿರಣ ಜಾಧವ್‌, ಮಾಜಿ ಮಹಾಪೌರ ಶಿವಾಜಿ ಸುಂಟಕರ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios