ಗೋಕಾಕ(ಜೂ.08): ಪಕ್ಷದ ಐತಿಹಾಸಿಕ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಮಾಡಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ನಿಮಿತ್ತ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ವಿತರಣೆ ಕಾರ್ಯಕ್ಕೆ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯಸಭೆ ಟಿಕೆಟ್‌ ಪಕ್ಷದ ತೀರ್ಮಾನವೇ ಅಂತಿಮ: ಜಾರಕಿಹೊಳಿ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ, ಜಲಜೀವನ ಮಿಷನ್‌, 60 ವರ್ಷ ದಾಟಿದ ರೈತರು, ಕೃಷಿ ಕಾರ್ಮಿಕರು, ಸಣ್ಣ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರಿಗೆ ಮಾಸಿಕ 3 ಸಾವಿರ ಪಿಂಚಣಿ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 400 ಕ್ಕೂ ಅಧಿಕ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ ಸೇರಿದಂತೆ ಅನೇಕ ಐತಿಹಾಸಿಕ ಕಾರ್ಯಗಳನ್ನು ಮೋದಿ ಸರ್ಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿದೆ. ಈ ಎಲ್ಲ ಕಾರ್ಯಗಳನ್ನು ಮನೆ ಮನೆಗಳಿಗೆ ಮತ್ತು ಜನರ ಮನಮನಗಳಿಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಮಾಡಬೇಕಿದೆ ಎಂದು ಹೇಳಿದರು.

ನಂತರ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಗೋಕಾಕ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಗರದ ವಿವೇಕಾನಂದ ನಗರದಲ್ಲಿಯ ಮನೆಮನೆಗಳಲ್ಲಿ ತೆರಳಿ ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಳ ಕರಪತ್ರಗಳನ್ನು ವಿತರಿಸಿ ಕರಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಅಧ್ಯಕ್ಷ ರಾಜುಗೌಡ ಪಾಟೀಲ, ಜಿಪಂ ಸದಸ್ಯರಾದ ಮಲ್ಲಿಕಾರ್ಜುನ ನಾಯಿಕ, ಟಿ.ಆರ್‌.ಕಾಗಲ, ಮಡೆಪ್ಪ ತೋಳಿನವರ, ಗಣ್ಯರಾದ ಶಶಿಧರ ದೇಮಶಟ್ಟಿ, ರಾಜು ತಳವಾರ, ಭೀಮಗೌಡರ ಪೊಲೀಸಗೌಡರ, ಮುನ್ನಾ ದೇಸಾಯಿ, ಅಡಿವೆಪ್ಪ ನಾವಲಗಟ್ಟಿ, ರಾಜು ಹಿರೆಅಂಬಿಗೇರ, ಶಿವು ಹಿರೇಮಠ, ತವನಪ್ಪ ಬೆನ್ನಾಡಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.