ರಾಜ್ಯಸಭೆ ಟಿಕೆಟ್ ಪಕ್ಷದ ತೀರ್ಮಾನವೇ ಅಂತಿಮ: ಜಾರಕಿಹೊಳಿ
ಮಾಜಿ ಸಚಿವ ಉಮೇಶ ಕತ್ತಿ ಬಂಡಾಯವೆದ್ದಿಲ್ಲ: ಸಚಿವ ರಮೇಶ ಜಾರಕಿಹೊಳಿ| ರಾಜ್ಯಸಭೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆದಿದ್ದು, ಈ ವಿಚಾರವನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಪಕ್ಷದ ತೀರ್ಮಾನಕ್ಕೆ ಬಿಡಲಾಗಿದ್ದು, ಆ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ: ಜಾರಕಿಹೊಳಿ|
ಬೆಳಗಾವಿ(ಜೂ.06): ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದೇ ಮೊದಲ ಬಾರಿಗೆ ಶುಕ್ರವಾರ ಬೆಳಗಾವಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಸಭೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆದಿದ್ದು, ಈ ವಿಚಾರವನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಪಕ್ಷದ ತೀರ್ಮಾನಕ್ಕೆ ಬಿಡಲಾಗಿದ್ದು, ಆ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ ಎಂದರು.
ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಮಾಜಿ ಸಚಿವ ಉಮೇಶ ಕತ್ತಿ ಬಂಡಾಯ ಎದ್ದಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಆಗಿವೆ. ಹಾಗಾಗಿ, ಅವರ ಮನೆಯಲ್ಲಿ ತಮ್ಮ ಆಪ್ತ ಶಾಸಕರ ಜೊತೆಗೆ ಭೋಜನ ಕೂಟ ಹಮ್ಮಿಕೊಂಡಿದ್ದರು. ಇದು ಭಿನ್ನಮತದ ಚಟುವಟಿಕೆಯಲ್ಲ ಎಂದರು.
‘ಕೆಲವು ಮೆಂಟಲ್‌ಗಳು ಈಗ ಮನ ಬಂದಂತೆ ಮಾತಾಡ್ತಾರೆ’
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾನ್ ನಾಯಕರು, ಅವರ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಅತೃಪ್ತ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕಣ್ಣು ಹಳದಿಯಿದೆ. ಅವರು ಹಾಗೆ ನೋಡಲಿ ಬಿಡಿ ಎಂದರು.
ಜಿಲ್ಲೆಯ ನೇಕಾರರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಲಾಗುವುದು. ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಆಗಿರುವ ಪ್ರಮಾದಗಳನ್ನು ಈ ಬಾರಿ ಸರಿಪಡಿಸಲಾಗುವುದು. ಈ ಹಿಂದೆ ಜಗದೀಶ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗಲೂ ನಾನೇ ಜಿಲ್ಲಾ ಉಸ್ತುವಾರಿ ಸಚಿವನಂತೆಯೇ ಇದ್ದೆ. ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ನನಗೆ ಯಾವುದೇ ವ್ಯತ್ಯಾಸ ಇಲ್ಲ. ಮೂರನೇ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಯಾರೇ ಆಗಲಿ ಒಳ್ಳೆಯ ಸಲಹೆ ಸೂಚನೆ ನೀಡಿದರೆ ಸ್ವೀಕರಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲರನ್ನು ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಸಂಬಂಧ ಹಿರೇಬಾಗೇವಾಡಿ ಬಳಿ ಜಾಗವನ್ನು ಗುರುತಿಸಲಾಗುತ್ತಿದೆ. ಈ ಹಿಂದೆ ತರಾತುರಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಈಗ ಆ ಆದೇಶ ಹಿಂಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜಾಗವನ್ನು ಗುರುತಿಸಿ, ಈ ಕುರಿತು ಹೊಸ ಆದೇಶವನ್ನು ಹೊರಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.