ಬೆಳಗಾವಿ(ಫೆ.09): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಅವರು ನನ್ನನ್ನ ವಿರೋಧಿಸಿದ್ದಕ್ಕೆ ನಾನು ದೊಡ್ಡ ಲೀಡರ್ ಆಗಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಗಿದೆ. ನನ್ನ ಕನಸ್ಸಿನಲ್ಲಿಯೂ ಸಹ ನಾನು ಬಿಜೆಪಿಯಲ್ಲಿ ಸಚಿವನಾಗುತ್ತೇನೆ ಎಂದು ಉಹಿಸಿರಲಿಲ್ಲ. ಮಹೇಶ ಕುಮಟಹಳ್ಳಿ ಅಂತಹ ಜನರು ಜೊತೆಗಿದ್ರೆ ಜಗತ್ತನ್ನೇ ಗೆಲ್ಲಬಹುದು ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

ಭಾನುವಾರ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶ್ ಜಾರಕಿಹೊಳಿ, 14 ತಿಂಗಳಿಂದ ನಮ್ಮನ್ನು ನೋಡಿ ಅನೇಕರು ಅಪಹಾಸ್ಯ ಮಾಡಿದ್ದರು. ನಮಗೆ ಬಂತ ಸ್ಥಿತಿ ವೈರಿಗೆ ಬರಬಾರದು. ನಾವು ಮೊದಲು 36 ಜನ ಶಾಸಕರು ಇದ್ದೆವು, ಕೊನೆಗೆ ಉಳಿದಿದ್ದು 17 ಜನ ಮಾತ್ರ. ಎಲ್ಲರೂ ಹಿಂದುಳಿದ ಸಮಾಜದ ಶಾಸಕರೇ ಇದ್ದೆವು. ಈಗ ಯಶಸ್ಸು ಸಿಕ್ಕಿದೆ ಅಂತ ಬೀಗಿದರೆ ನಾವು ಮೂರ್ಖರಾಗುತ್ತೇವೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚುನಾವಣೆಯಲ್ಲಿ ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡಿದ್ದರು. ಗೋಕಾಕನಲ್ಲಿ ಏನಾದರೂ ಸೋತರೆ ಸೊಕ್ಕಿನಿಂದ ಮಾತ್ರ ಸೋಲಬೇಕು. ನಾನು, ಬಾಲಚಂದ್ರ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದರೆ ಸೋಲೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 

ಸತತವಾಗಿ ಪ್ರಯತ್ನ ಮಾಡಿದ್ದಕ್ಕೆ ನಮಗೆ ಯಶಸ್ಸು ಸಿಕ್ಕಿದೆ. ಮಹೇಶ್ ಕುಮಟಳ್ಳಿಯಂತ ಒಳ್ಳೆಯ ಜನ ಸಿಕ್ಕಿದ್ದಕ್ಕೆ ಒಳ್ಳೆಯದಾಯ್ತು, ಮಂತ್ರಿ ಆಗೋದು ಬೇಡ ಅಂತಾ ನಾನು ಬೆಂಗಳೂರಿಂದ ಗೋಕಾಕಗೆ ಬರುವ ಮನಸ್ಸು ಮಾಡಿದ್ದೆ, ಏಕಂದ್ರೆ ಮಹೇಶ್ ಕುಮಟಳ್ಳಿ, ಆರ್ ಶಂಕರ್, ಪ್ರತಾಪಗೌಡ ಪಾಟೀಲ್, ಮುನಿರತ್ನ ಎಲ್ಲರೂ ನನ್ನ ಕಣ್ಣು ಮುಂದೆ ಬರುತ್ತಿದ್ದರು. ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಸೋತಿದ್ರೂ ಅವರ ವಿಷಯ ಬೇರೆಯಾಗಿದೆ. ಆದರೆ ಉಳಿದವರು ನನ್ನ ಕಣ್ಣುಮುಂದೆ ಬರುತ್ತಿದ್ದರು. ಹೀಗಾಗಿ ನಾನು ಮಂತ್ರಿಯಾಗಲ್ಲ ಎಂದಿದ್ದೆ, ಬೆಂಗಳೂರಿಂದ ಗೋಕಾಕ ನಗರಕ್ಕೆ ಬರಲು ಪ್ರಮಾಣ ವಚನ ಸ್ವೀಕಾರದ ಹಿಂದಿನ ದಿನ ನಿರ್ಧರಿಸಿದ್ದೆನು.  ಈ ವೇಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಅಂತಾ ಮಹೇಶ ಕುಮಟಳ್ಳಿ ಕಾಲು ಮುಗಿದಿದ್ದರು. ಹೀಗಾಗಿ ನಾನು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದೆ. ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ಮಹೇಶ್ ಕುಮಟಳ್ಳಿ ಹಾಗೂ ಬಾಲಚಂದ್ರ ಜಾರಕಿಹೊಳಿ‌ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. 

ನನಗೆ ನೀರಾವರಿ ಖಾತೆ ಕೊಡುತ್ತಾರೋ ಅಥವಾ ಲೈಬ್ರರಿ ಖಾತೆ ಕೊಡುತ್ತಾರೋ ಗೊತ್ತಿಲ್ಲ,ಯಡಿಯೂರಪ್ಪ, ಅಮಿತ್ ಶಾ ನಂಬಿ ನಾನು ಬಿಜೆಪಿಗೆ ಬಂದಿದ್ದೇನೆ.  ಗೋಕಾಕ ನಗರ ಜನರ ಆಶೀರ್ವಾದದಿಂದ ನಾನು ಆರಿಸಿ ಬಂದಿದ್ದೇನೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಗೋಕಾಕ ಜನತೆಗೆ ಲಖನ್ ಜಾರಕಿಹೊಳಿ‌ಯಿಂದ ಇಷ್ಟೊಂದು ಅನ್ಯಾಯ ಆಗಿದೆ ಅಂತಾ ಗೊತ್ತಿರಲಿಲ್ಲ, ಅಣ್ಣ ತಮ್ಮಂದಿರಾಗಿ ಜಾರಕಿಹೊಳಿ‌ ಸಹೋದರರು ಒಂದೇ ಇರುತ್ತಾರೆ. ಸತೀಶ್ ಜಾರಕಿಹೊಳಿಗೆ ಭವಿಷ್ಯ ಒಳ್ಳೆಯದಿದೆ, ಸಿಎಂ ಕೂಡ ಆಗಬಹುದು. ಸತೀಶ್ ಜಾರಕಿಹೊಳಿ‌ ಇಪ್ಪತ್ತು ವರ್ಷ ಮಾಡದಿದ್ದನ್ನು ನಾನು ಎರಡು ವರ್ಷದಲ್ಲಿ ಮಾಡಿದ್ದೇನೆ. ಒಳ್ಳೆಯದಕ್ಕೆ ಹಠ ಮಾಡಬೇಕು. ಬಂಗಾರಪ್ಪ, ವೀರೇಂದ್ರ ಪಾಟೀಲ್, ಕೆ.ಹೆಚ್.ಪಾಟೀಲ್ ನಮ್ಮ ಲೀಡರ್‌ಗಳು ಅವರೆಲ್ಲಾ ಹಠವಾದಿಗಳಾಗಿದ್ದಾರೆ. ದ್ವೇಷ ರಾಜಕಾರಣ ಮಾಡಿದರೆ ಯಾರಿಗೂ ಒಳ್ಳೆಯದಾಗಲ್ಲ. ಎಲೆಕ್ಷನ್‌ನಲ್ಲಿ ನನ್ನ ವಿರೋಧ ಮಾಡಿದವರು ನಮ್ಮವರೇ, ಎಲೆಕ್ಷನ್‌ನಲ್ಲಿ ನನ್ನ ವಿರೋಧ ಮಾಡಿದವರು ಯಾರೆಂದು ನನಗೆ ಗೊತ್ತಿದೆ. ಇದೊಂದು ಸಲ ಮಾಫಿ ಮಾಡುತ್ತೇನೆ, ಮುಂದೆ ಹೀಗೆ ಮಾಡಬೇಡಿ ಎಂದು ಹೇಳಿದ್ದಾರೆ. 

ರಮೇಶ್ ಬಿಜೆಪಿಗೆ ಸೆಟ್ ಆಗಲ್ಲ ಮತ್ತೆ ಕಾಂಗ್ರೆಸ್ ಹೋಗ್ತಾರೆ ಅಂತಾ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಬಿಟ್ಟು ಎಲ್ಲಿಯೂ ಹೋಗಲ್ಲ, ಬಿಜೆಪಿಯಲ್ಲೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ವಯಸ್ಸಾಗಿದೆ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಗೋಕಾಕ ನನ್ನ ಕ್ಷೇತ್ರವಾದರೂ ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಅಥಣಿ ಕ್ಷೇತ್ರವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ, ಆರ್ ಎಸ್ ಎಸ್ ನವರು ನನಗೆ ವಾರ್ನಿಂಗ್ ಮಾಡಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಕೊಡಬೇಡಿ, ಸಣ್ಣಪುಟ್ಟ ಜಗಳ ಮಾಡಬೇಡಿ ಎಂದಿದ್ದಾರೆ. ನಾವು ಈಗ ಚೇಂಜ್ ಆಗಿದ್ದೇವೆ, ಕಳೆದ ಒಂದು ವರ್ಷದಿಂದ ಬಹಳಷ್ಟು ಪಳಗಿದ್ದೇವೆ. ಒಳ್ಳೆಯ ಪಕ್ಷ ಸೇರಿದ್ದೇವೆ ಆ ಪಕ್ಷದ ಶಿಸ್ತು ಕಲಿಯುತ್ತೇವೆ ಎಂದು ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ