Asianet Suvarna News Asianet Suvarna News

ಮಹದಾಯಿ: ಕಾನೂನು ತೊಡಕು ನಿವಾರಿಸಲು ಕ್ರಮ, ರಮೇಶ್‌ ಜಾರಕಿಹೊಳಿ

ಸುಪ್ರೀಂ ಕೋರ್ಟ್‌ ಆದೇಶ ಚಾಚೂ ತಪ್ಪದೆ ಪಾಲನೆ| ಯೋಜನೆಗೆ ಹಂತ ಹಂತವಾಗಿ ಅನುದಾನ ಬಿಡುಗಡೆ|ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ| ಮಾ.2ರಂದು ಸುಪ್ರೀಂಕೋರ್ಟನಲ್ಲಿ ವಿಚಾರಣೆ| ಈ ಕುರಿತು ಜುಲೈನಲ್ಲಿ ಅಂತಿಮ ತೀರ್ಪು ಬರುವ ವಿಶ್ವಾಸ| 

Minister Ramesh Jarakiholi Says Action to alleviate legal complications for Mahadayi Dispute
Author
Bengaluru, First Published Mar 1, 2020, 10:38 AM IST

ಬೆಳಗಾವಿ(ಮಾ.01): ಮಹದಾಯಿ ಕುರಿತು ಸುಪ್ರೀಂ ಕೋರ್ಟ್‌ ಆದೇಶದಂತೆ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಲಯದ ಆದೇಶವನ್ನು ಚಾಚು ತಪ್ಪದೇ ಪಾಲನೆ ಮಾಡಲಾಗುವುದು. ರಾಜ್ಯದ ಜನ, ರೈತರ ಹಿತಾಸಕ್ತಿ ಮುಖ್ಯವಾಗಿದ್ದು, ಇದಕ್ಕೆ  ಸಂಬಂಧಿಸಿ ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ಹಕ್ಕಿದ್ದರೂ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ. ಮಾ.2ರಂದು ಸುಪ್ರೀಂಕೋರ್ಟನಲ್ಲಿ ವಿಚಾರಣೆಗೆ ಬರಲಿದೆ. ಈ ಕುರಿತು ಜುಲೈನಲ್ಲಿ ಅಂತಿಮ ತೀರ್ಪು ಬರುವ ವಿಶ್ವಾಸವಿದೆ ಎಂದರು.

ಮಹದಾಯಿ ನೀರಾವರಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜ್ಯದ ಜನ, ರೈತರ ಹಿತಾಸಕ್ತಿ ಮುಖ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಹದಾಯಿ ನೀರಾವರಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ನಾನು ರಾಜ್ಯ ಸರ್ಕಾರಕ್ಕೆ 200 ಕೋಟಿ ಅನುದಾನ ಕೇಳಿದ್ದೆ. ಆದರೆ, ಈಗ 500ರಿಂದ 1000 ಕೋಟಿ ಅನುದಾನ ಕೊಟ್ಟರೆ ಒಳ್ಳೆಯದು. ಈ ವಿಚಾರದಲ್ಲಿ ನಾನು ಕೆಲವೊಂದು ವಿಚಾರಗಳನ್ನು ಹೇಳುವುದಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ  2000 ಕೋಟಿ ಅನುದಾನ ಕೊಡಲು ಸಿದ್ಧವಿದೆ. ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಗೆ ಎಷ್ಟು ದುಡ್ಡುಕೊಟ್ಟರೂ ಕಡಿಮೆಯೇ ಎಂದು ಅಭಿಪ್ರಾಯಪಟ್ಟರು.

ಮಹದಾಯಿ : ಯಡಿಯೂರಪ್ಪ ಬಳಿ 200 ಕೋಟಿಗೆ ಜಾರಕಿಹೊಳಿ ಬೇಡಿಕೆ

ಮಾಜಿಗಳಿಂದ ಸಲಹೆ ಸ್ವೀಕಾರ:

ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇನ್ನು ಕಾವೇರಿ, ಮೇಕೆದಾಟು, ಕೃಷ್ಣಾ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಮಹದಾಯಿ ವಿಚಾರದಲ್ಲಿ ಶುಭದಿನ ಬಂದಿದ್ದು, ಅದು ಮುಂದುವರೆಯಬೇಕು. ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅಧ್ಯಯನ ಮಾಡುತ್ತಿದ್ದೇನೆ. ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಿಂದಿನ ಎಲ್ಲ ಜಲಸಂಪನ್ಮೂಲ ಸಚಿವರಿಂದ ಸಲಹೆ ಪಡೆಯಲಾಗುವುದು. ಸವಾಲಾಗಿ ತೆಗೆದುಕೊಂಡಿರುವ ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.
 

Follow Us:
Download App:
  • android
  • ios