ಬೆಳಗಾವಿ [ಫೆ.29]:  ‘ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಹೋರಾಟಕ್ಕೆ ಜಯ ಸಿಕ್ಕಿದ್ದು, ಕೇಂದ್ರ ಸರ್ಕಾರ ಮಹದಾಯಿ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಶೀಘ್ರದಲ್ಲಿಯೇ ಕಳಸಾ- ಬಂಡೂರಿ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಬಜೆಟ್‌ನಲ್ಲಿ 200 ಕೋಟಿ ರು. ಮೀಸಲಿಡಲು ಮನವಿ ಮಾಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಮಗಾರಿಯನ್ನು ಪ್ರಾರಂಭಿಸಲು ಕೇಂದ್ರದಿಂದ ಇನ್ನೂ ಮೂರು ರೀತಿಯ ಅನುಮತಿಗಳ ಅಗತ್ಯ ಇದೆ. ನ್ಯಾಯಾಲಯ, ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗಿದೆ. ಅದನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಮಹದಾಯಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ನಮ್ಮ ಗೆಲುವಲ್ಲ, ಅದು ರೈತರ ಹೋರಾಟಕ್ಕೆ ಸಂದ ಜಯ’ ಎಂದರು.

‘ಮಹಾರಾಷ್ಟ್ರ, ಗೋವಾ ರಾಜ್ಯದ ರೈತರು, ನಾವು ಎಲ್ಲರೂ ಒಂದೇ. ಇದು ಎಲ್ಲರ ಗೆಲುವು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ನಾವು ದೈವ ಭಕ್ತರಿದ್ದೇವೆ. ಅದಕ್ಕೆ ಯಶಸ್ಸು ಸಿಕ್ಕಿದೆ. ನೀರಾವರಿ ಯೋಜನೆಗಳ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೊದಲಿನಿಂದಲೂ ಆದ್ಯತೆ ನೀಡುತ್ತಿದ್ದಾರೆ. ಬಜೆಟ್‌ನಲ್ಲಿ ಕಳಸಾ- ಬಂಡೂರಿ ಯೋಜನೆಗಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಸುಮಾರು 200 ಕೋಟಿ ರು. ಮೀಸಲಿಡುವಂತೆ ಮನವಿ ಮಾಡಲಾಗುವುದು. ಯೋಜನೆ ಸಂಬಂಧ ಸಮಗ್ರ ಯೋಜನಾ ವರದಿ ತಯಾರಿಸಲಾಗಿದೆ. ಮತ್ತೊಮ್ಮೆ ಅದನ್ನು ಪರಿಷ್ಕರಿಸಿ ಸುಪ್ರೀಂಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಯೋಜನೆ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕೇಂದ್ರದ ನಂತರ ರೈತರಿಗೆ ಬಂಪರ್ ಕೊಟ್ಟ ಬಿಎಸ್‌ವೈ...

‘ನೀರು ಭಾವನಾತ್ಮಕ ವಿಚಾರವಾಗಿರುವ ಹಿನ್ನೆಲೆಯಲ್ಲಿ ಯಾರೂ ಸಂಭ್ರಮಾಚರಣೆ ಮಾಡುವುದು ಬೇಡ. ಮಹದಾಯಿ ನೀರು ಹಂಚಿಕೆ ಸಂಬಂಧ ಸಲ್ಲಿಸಲಾಗಿರುವ ಅರ್ಜಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಇನ್ನೊಂದು ವಾರ ಎಲ್ಲಿಯೂ ಸಂಭ್ರಮಾಚರಣೆ ಮಾಡಬೇಡಿ’ ಎಂದು ಮನವಿ ಮಾಡಿದ ಅವರು, ‘ನಮ್ಮ ಸರ್ಕಾರವು ರೈತರ ಪರವಾಗಿದೆ. ಮಹದಾಯಿ ನೀರಿಗಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ರೈತರಿಗೆ ಅಭಿನಂದಿಸಬೇಕು. ಇನ್ನೂ ಕೆಲವೊಂದಿಷ್ಟುವಿಷಯಗಳಿವೆ. ಅವೆಲ್ಲವನ್ನೂ ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ, ನಮ್ಮ ಪಾಲಿನ ನೀರಿನ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಳಸಾ-ಬಂಡೂರಿ ನಾಲಾ ಕಾಮಗಾರಿ ನಡೆಯುತ್ತಿರುವ ಖಾನಾಪುರ ತಾಲೂಕಿನ ಕಣಕುಂಬಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

ಕೇಸು ವಾಪಸ್‌ ಸುಳಿವು:

ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಹೋರಾಟಗಳಲ್ಲಿ ಭಾಗಿಯಾಗಿದ್ದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಇಚ್ಛೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆದಷ್ಟುಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನಿನ ಹೋರಾಟದಲ್ಲಿ ಅಂತಿಮ ಘಟ್ಟತಲುಪಿದ್ದೇವೆ. ಕೃಷ್ಣಾ ನದಿಯ ನೀರಿಗೆ ಸಂಬಂಧಿಸಿದಂತೆ ನಮ್ಮ ಪಾಲನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಗತ್ಯ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಮಹದಾಯಿ ಸೇರಿ ವಿವಿಧ ನೀರಾವರಿ ಹೋರಾಟಗಳಲ್ಲಿ ಭಾಗಿಯಾಗಿದ್ದ ರೈತರ ಕೇಸ್‌ ಹಿಂಪಡೆವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು.

- ರಮೇಶ್‌ ಜಾರಕಿಹೊಳಿ ಜಲಸಂಪನ್ಮೂಲ ಸಚಿವ