ಶ್ರೀಶೈಲ ಮಠದ 

ಬೆಳಗಾವಿ[ಫೆ.15]: ಜಲಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ರಮೇಶ ಜಾರಕಿಹೊಳಿ ಅವರು ತಮ್ಮ ತವರು ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿನ ತಾಂತ್ರಿಕ ಅಡಚಣೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರಾ ಎಂದು ಈ ಭಾಗದ ಜನರು ಎದುರು ನೋಡುತ್ತಿದ್ದಾರೆ. 

ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರಾವರಿ ಯೋಜನೆ ಅನುಷ್ಠಾನ ಆರಂಭಿಕವಾಗಿ ಜಲಸಂಪನ್ಮೂಲ ಸಚಿವರಿಗೆ ಇರುವ ಆರಂಭಿಕ ಸವಾಲು ಎಂದೇ ಹೇಳಬಹುದು. ಯೋಜನೆ ಅನುಷ್ಠಾನಕ್ಕೆ ಎದುರಾಗುವ ಕೇಂದ್ರ ಪರಿಸರ ಇಲಾಖೆಯ ತಾಂತ್ರಿಕ ತೊಂದರೆಗಳು, ಜತೆಗೆ ನೆರೆಯ ಗೋವಾ ಮತ್ತು ಮಹಾರಾಷ್ಟ್ರದ ಅಡ್ಡಿ ಆತಂಕ ಗಳು ನಿವಾರಿಸುವ ಸವಾಲು ಇದೆ. ಈ ಮೂಲಕ ಇದುವರೆಗೆ ಹೋರಾಟ ಮಾಡಿಕೊಂಡು ಬಂದಿರು ವ ಮಹದಾಯಿ ರೈತ ಹೋರಾಟಗಾರರಿಗೆ ಸಿಹಿ ನೀಡುತ್ತಾರಾ ಎಂಬುದೇ ಇದೀಗ ಯಕ್ಷಪ್ರಶ್ನೆ. 

ಬೆಳಗಾವಿ ಗಡಿ, ಮಹದಾಯಿ ಸಮಸ್ಯೆ ನಿವಾರಣೆಗೆ ಕ್ರಮ: CM BSY

ಮಹಾದಾಯಿ ವಿವಾದ ಸದಾ ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಲೇ ಇದೆ. ಕಳಸಾ- ಬಂಡೂರಿ ನಾಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶ ಮಹದಾಯಿ, ಮಲಪ್ರಭೆ ನದಿ ಸೇರಿದಂತೆ ಹಲವು ನದಿ, ಕೊಳ್ಳಗಳ ಉಗಮ ಸ್ಥಾನ. ಕಳಸಾ, ಬಂಡೂರಿ ಹಳ್ಳಗಳು ಇಲ್ಲೇ ಇವೆ. ಕಳಸಾ, ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದರೆ, ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಸೇರಿಸುವುದು ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ. ಖಾನಾಪುರ ತಾಲೂಕಿನ ದಟ್ಟ ಅರಣ್ಯ ಪ್ರದೇ ಶದಲ್ಲಿ, ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶದ ಲ್ಲೇ ಕಳಸಾ ಮತ್ತು ಬಂಡೂರಿ ಎಂಬ ಸಣ್ಣ ಹಳ್ಳಗ ಳು ಹರಿಯುತ್ತಿವೆ. ಅದನ್ನು ಮಲಪ್ರಭೆಗೆ ಜೋಡಿ ಸುವುದು, ಹಾಗೂ ಈ ನೀರನ್ನು ನವಿಲುತೀರ್ಥ ಜಲಾಶಯದಲ್ಲಿ ಸಂಗ್ರಹಿಸಿ ಹುಬ್ಬಳ್ಳಿ-ಧಾರವಾಡ, ನವಲಗುಂದ, ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಸೇರಿದಂತೆ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವುದು ಈ ಯೋಜನೆ ಪ್ರಮುಖ ಉದ್ದೇಶ. 

ಖಾನಾಪುರದ ಕಣಕುಂಬಿ ಬಳಿ ಮಲಪ್ರಭಾ, ಅಲ್ಲಿಯೇ ಸಮೀಪದ ಮಾನ ಹತ್ತಿರ ಕಳಸಾ, ಅಮಗಾಂವ ಬಳಿ ಬಂಡೂರಿ ಹಳ್ಳಗಳು ಉಗಮವಾಗಿವೆ. ಬಂಡೂರಿ ಹಳ್ಳವನ್ನು ಮಲಪ್ರಭಾ ನದಿಗೆ ಸೇರಿಸಲು ನೇರ್ಸಾ ಬಳಿ ಮ ತ್ತು ಕಳಸಾವನ್ನು ಸೇರಿಸಲು ಮಲಪ್ರಭಾ ಉಗಮದ ಕಣಕುಂಬಿ ಬಳಿ ಕಾಲುವೆ ನಿರ್ಮಿಸಲಾಗಿದೆ. ಮಹದಾಯಿ ಅಥವಾ ಮಾಂಡೋವಿ ನದಿ ಖಾನಾಪುರ ತಾಲೂಕಿನ ಭೀಮಗಡ ಅರಣ್ಯ ಪ್ರದೇಶದಲ್ಲಿ ಉಗಮವಾಗಿ 29 ಕಿಮೀ ರಾಜ್ಯದಲ್ಲೇ ಹರಿದು ಗೋವಾದಲ್ಲಿ 52 ಕಿಮೀ ಕ್ರಮಿಸಿ ನಂತರ ಸಮುದ್ರ ಸೇರುತ್ತದೆ. 

ನರಗುಂದ: ಮಹದಾಯಿ ಯೋಜನೆ ಜಾರಿಯಲ್ಲಿ ಸರ್ಕಾರದಿಂದ ರೈತರಿಗೆ ಅನ್ಯಾಯ

ಮಹದಾಯಿ ನದಿ ನೀರು ಹಂಚಿಕೆ ವಿಚಾರ, ಈ ಯೋಜನೆ ಅನುಷ್ಠಾನದ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆಯೇ ಪ್ರತಿ ಬಾರಿಯೂ ಗೋವಾ ಸರ್ಕಾರ ಹಾಗೂ ಅಲ್ಲಿನ ಪರಿಸರವಾದಿಗಳು ಅಡ್ಡಿಪಡಿಸುತ್ತಲೇ ಇದ್ದಾರೆ. ಗೋವಾ ತಗಾದೆ ಹಿನ್ನೆಲೆಯಲ್ಲಿ ಕಳಸಾ- ಬಂಡೂರಿ ಹಳ್ಳಗಳ ಕಾಲುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂ ಡಿದೆ. ಗೋವಾ ಸರ್ಕಾರ ಅಡ್ಡಗಾಲು ಹಾಕುತ್ತಲೇ ಇದೆ. ಇನ್ನು ಕಳಸಾ- ಬಂಡೂರಿ ನಾಲಾ ವ್ಯಾಪ್ತಿ ಮಹಾರಾಷ್ಟ್ರದ ವ್ಯಾಪ್ತಿಗೂ ಒಳಪಡುತ್ತದೆ. ಹಾಗಾಗಿ, ಗೋವಾ ಹಾಗೂ ಮಹಾರಾಷ್ಟ್ರಗಳು ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿದೆ. ಈಗ ಗಡಿ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಸರ್ಕಾರ ವನ್ನು ಯೋಜನೆ ಅನುಷ್ಠಾನಕ್ಕೆ ಯಾವ ಕಾರ್ಯತಂತ್ರ ಉಪಯೋಗಿಸುತ್ತಾರೆ? ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದುವರೆಗೆ ಆಗದ ಪರಿಹಾರವನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುತ್ತಾ ರಾ ಎಂಬುದು ಸದ್ಯದ ಕುತೂಹಲ. 

ಕೇಂದ್ರದಿಂದಲೂ ಸಿಗುತ್ತಾ ಸಹಕಾರ? 

ಮಹದಾಯಿ ವಿವಾದ ಸಂಬಂಧ ಈ ಹಿಂದೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಪೂರ್ವದಲ್ಲಿ ಹಸಿರು ನಿಶಾನೆ ತೋರಿತ್ತು. ಉಪಕದನದ ನಂತರ ಸುಪ್ರೀಂ ನೆಪವೊಡ್ಡಿ ತನ್ನ ನಿರ್ಧಾರವನ್ನು ತಡೆ ಹಿಡಿದಿದೆ. ಇತ್ತ ಗೋವಾ ಕೂಡ ಇದಕ್ಕೆ ಆಕ್ಷೇಪ ಎತ್ತಿದೆ. ಹೀಗಾಗಿ ಇದಕ್ಕೆ ಪರಿಹಾರವನ್ನು ಕೇಂದ್ರ ಸರ್ಕಾರವೊಂದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ತಮ್ಮದೆ ಬಿಜೆಪಿ ಸರ್ಕಾರ ಇರುವುದರಿಂದ ಕೇಂದ್ರದ ನಾಯಕರ ಮನವೊಲಿಸುವಲ್ಲಿ ತಮ್ಮ ಪ್ರಭಾವ ಬಳಸಿ ಕೊಂಡು ಯಶಸ್ವಿಯಾಗುತ್ತಾರಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಒಂದು ವೇಳೆ ಕೇಂದ್ರದಿಂದ ಸಹಕಾರ ಸಿಗದಿದ್ದಲ್ಲಿ ಜಲಸಂಪನ್ಮೂಲ ಸಚಿವರ ಮುಂದಿನ ನಡೆ ಬಗ್ಗೆ ಕೂಡ ಕುತೂಹಲ ಇದೆ. ಜನಸಂಪನ್ಮೂಲ ಖಾತೆ ರಾಷ್ಟ್ರಮಟ್ಟದಲ್ಲಿನ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆಗೆ ಬಿಜೆಪಿ ಹೈಕಮಾಂಡ್ ಪರೋಕ್ಷವಾಗಿ ರಮೇಶ ಜಾರಕಿಹೊ ಳಿ ಅವರಿಗೆ ಕೊಡದಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಆದರೆ, ಅದೇ ಖಾತೆಯನ್ನು ಪಟ್ಟು ಹಿಡಿದು ಪಡೆದುಕೊಂಡಿರುವ ರಮೇಶ ಅವರಿಗೆ ಕೇಂದ್ರದ ನಾಯಕರು ಮಹದಾಯಿ ವಿಚಾರದಲ್ಲಿ ಸ್ಪಂದಿಸದೇ ಖಾತೆ ನಿರ್ವಹಣೆಯಲ್ಲಿ ಅಸಮರ್ಥತೆಯ ಪಟ್ಟ ನೀಡುವ ಮುನ್ಸೂಚನೆಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಹಾದಿಯೂ ಸಚಿವರಿಗೆ ಸುಲಭವಲ್ಲ ಎಂಬುವುದು ಇದರಿಂದ ವೇದ್ಯವಾಗುತ್ತದೆ.

ಈ ಬಗ್ಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು, ಕಾವೇರಿ , ಕೃಷ್ಣಾ, ಮಹದಾಯಿ ಸೇರಿದಂತೆ ಎಲ್ಲಾ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಿ, ರಾಜ್ಯದ ರೈತರಿಗೆ ಅನುಕೂಲವಾಗುವಂತೆ ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಒಂದೆಡೆ ನೀರಾವರಿ ಯೋಜನೆಗಳಿಗೆ ಆದ್ಯತೆ, ಮತ್ತೊಂದೆಡೆ ಸರ್ವೋಚ್ಚ ನ್ಯಾಯಾಲಯದಲ್ಲಿರುವ ನೀರು ಹಂಚಿಕೆ ಪ್ರಕರಣಗಳತ್ತ ವಿಶೇಷ ಗಮನ ಹರಿಸುತ್ತೇನೆ. ಜನತೆಗೆ ಮತ್ತು ರಾಜ್ಯದ ಭೂಮಿಗೆ ನೀರುಣಿಸುವುದು ಮತ್ತು ರಾಜ್ಯದ ಜನರ ಕಣ್ಣೀರು ಒರೆಸುವುದು ಎರಡೂ ನನ್ನ ಕರ್ತವ್ಯ ಎಂದು ತಿಳಿಸಿದ್ದಾರೆ.