ನರಗುಂದ(ಜ.27): ಬಂಡಾಯ ನೆಲದಲ್ಲಿ ರೈತ ಸಮುದಾಯ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಪಡೆದುಕೊಳ್ಳಲು ತಮ್ಮ ಜೀವನವನ್ನೇ ಬಿಟ್ಟು ಹೋರಾಟ ಮಾಡಿದರೂ ಸಹ ಆಳುವ ಸರ್ಕಾರಗಳು ಯೋಜನೆ ಜಾರಿ ಮಾಡದೆ ರೈತ ಹೋರಾಟಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಹಾಗೂ ರೈತ ಸೇನಾ ಸಂಘಟನೆ ತಾಲೂಕು ಉಪಾಧ್ಯಕ್ಷ ರಮೇಶ ನಾಯ್ಕರ ಹೇಳಿದ್ದಾರೆ. 

1655ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯ ಕಳೆದ 30 ವರ್ಷಗಳಿಂದ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ತಂದು ಮಲಪ್ರಭಾ ಜಲಾಶಯಕ್ಕೆ ಜೋಡಣೆ ಮಾಡಬೇಕೆಂದು ಆಳುವ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಕೂಡ ಯಾವುದೇ ರೀತಿ ಪ್ರಯೋಜನ ಆಗದಿರುವ ಹಿನ್ನಲೆಯಲ್ಲಿ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳ ನೇತೃತ್ವದಲ್ಲಿ ಕಳೆದ 4 ವರ್ಷಗಳಿಂದ ರೈತರು ಬಿಸಿಲು, ಮಳೆ ಲೆಕ್ಕಿಸದೇ ನಿರಂತರವಾಗಿ ಹೋರಾಟ ಮಾಡಿದರೂ ಕೂಡ ಸರ್ಕಾರಗಳು ಈ ಯೋಜನೆ ಜಾರಿ ಮಾಡದೆ ಈ ಭಾಗದ ರೈತರಿಗೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈತ ಸೇನಾ ಸಂಘಟನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಮಾತನಾಡಿ, ಈ ರೈತರ ಹೋರಾಟವನ್ನು ಸಹಿಸದ ಕೆಲವು ರಾಜಕಾರಣಿಗಳು ಮಹದಾಯಿ ಹೋರಾಟ ಮಾಡುವ ಮುಖಂಡರನ್ನು ಈ ಹೋರಾಟದಿಂದ ದೂರ ಸರಸಿ ಈ ಹೋರಾಟವನ್ನೇ ನಿಲ್ಲಿಸುವ ಕುತಂತ್ರ ಮಾಡುತ್ತಿದ್ದಾರೆ. ಈ ರೀತಿ ಹೋರಾಟಗಾರರಿಗೆ ಎಷ್ಟೇ ತೊಂದರೆ ನೀಡಿದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಸೋಮಲಿಂಗಪ್ಪ ಆಯಿಟ್ಟಿ, ಅರ್ಜುನ ಮಾನೆ, ಮಲ್ಲೇಶಪ್ಪ ಅಣ್ಣಿಗೇರಿ, ಎ.ಪಿ. ಪಾಟೀಲ, ಅಡಿಯಪ್ಪ ಕೋರಿ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಸೇರಿದಂತೆ ಮುಂತಾದವರು ಇದ್ದರು.