ಬಿಎಂಟಿಸಿ ಸಿಬ್ಬಂದಿಗೆ ಸಂತಸದ ಸುದ್ದಿ ನೀಡಿದ ಸಚಿವ ರಾಮಲಿಂಗಾರೆಡ್ಡಿ
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ನಿತ್ಯ 1.10 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕ, ಅನುಕಂಪದ ನೇಮಕಾತಿಗಳು ಆಗಿರಲಿಲ್ಲ. ಕೊರತೆಯ ನಡುವೆಯೂ ನಿಗಮಗಳ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಶಕ್ತಿ ಯೋಜನೆ ಯಶಸ್ವಿಯಾಗಿದೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು(ಸೆ.26): ಕೆಎಸ್‌ಆರ್‌ಟಿಸಿಯಲ್ಲಿ ಜಾರಿಗೆ ತಂದ ಮಾದರಿಯಲ್ಲೇ ಬಿಎಂಟಿಸಿ ಚಾಲಕ, ನಿರ್ವಾಹಕರಿಗೂ ಒಂದು ಕೋಟಿ ರೂ. ಅಪಘಾತ ವಿಮೆ ಸೌಲಭ್ಯ ನೀಡುವ ಚಿಂತನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬಿಎಂಟಿಸಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ಲಾಂಛನ ಬಿಡುಗಡೆ ಹಾಗೂ ಅಪಘಾತರಹಿತವಾಗಿ ಬಸ್ ಚಾಲನೆ ಮಾಡಿದ 1,166 ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಒಂದು ಕೋಟಿ ಮೊತ್ತದ ವಿಮೆ ನೀಡುವ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.
"ಶಕ್ತಿ" ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ನಿತ್ಯ 1.10 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕ, ಅನುಕಂಪದ ನೇಮಕಾತಿಗಳು ಆಗಿರಲಿಲ್ಲ. ಕೊರತೆಯ ನಡುವೆಯೂ ನಿಗಮಗಳ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಅನುಕಂಪದ ಆಧಾರದ 200 ನೌಕರಿಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲಾಗುತ್ತದೆ, ಸಿಬ್ಬಂದಿಗಾಗಿ ಮೆಜೆಸ್ಟಿಕ್‌ನಲ್ಲಿ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಇಡೀ ದೇಶಕ್ಕೆ ಬಿಎಂಟಿಸಿ ಮಾದರಿಯಾಗಿದ್ದು, 25 ವರ್ಷಗಳ ಹಿಂದೆ ಬಿಟಿಸಿ ಹೆಸರಿನೊಂದಿಗೆ 98 ಬಸ್‌ಗಳೊಂದಿಗೆ ಆರಂಭವಾಗಿ ನಂತರ, ಬಿಟಿಎಸ್ ಆಗಿ ಬದಲಾಗಿ ಈಗ ಬಿಎಂಟಿಸಿ ಆಗಿದೆ. ನಿತ್ಯ 6,500 ಬಸ್‌ಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಓಡಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಉಪಸ್ಥಿತರಿದ್ದರು.
ಮನೆ ಬಾಗಿಲಿಗೇ ಬರಲಿದೆ ಡಿಎಲ್, ಆರ್‌ಸಿ ಕಾರ್ಡ್: ಗುಡ್‌ನ್ಯೂಸ್ ಕೊಟ್ಟ ಸಚಿವ ರಾಮಲಿಂಗಾರೆಡ್ಡಿ
32% ಸಿಬ್ಬಂದಿಗೆ ಮಧುಮೇಹ
ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ। ಸಿ.ಎನ್ ಮಂಜುನಾಥ, ಆರೋಗ್ಯ ಚೆನ್ನಾಗಿರಬೇಕು ಎಂದರೆ ದೇಹ ಚಲಿಸುತ್ತಿರಬೇಕು. ಮನಸ್ಸು ಸ್ಥಿರವಾಗಿರಬೇಕು. ಈಗಿನ ಕಾಲದಲ್ಲಿ ದೇಹದ ಚಲನೆ ಕಡಿಮೆಯಾಗಿದ್ದು, ಮನಸ್ಸಿನ ಚಲನೆ ಹೆಚ್ಚಾಗಿದೆ. ಬಸ್ ಓಡಾಡುತ್ತಿದೆ. ಆದರೆ, ಚಾಲಕ, ನಿರ್ವಾಹಕರ ದೇಹಕ್ಕೆ ವ್ಯಾಯಾಮ ಆಗುತ್ತಿಲ್ಲ. ಬಿಎಂಟಿಸಿ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ 1,200 ರೂ.ಗೆ ಮಾಸ್ಟರ್ ಚೆಕಪ್ ಮಾಡಲಾಗುತ್ತಿದೆ. ಕಳೆದ 10 ತಿಂಗಳಲ್ಲಿ ಸಾರಿಗೆ ಇಲಾಖೆಯ 7,635 ನೌಕರರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ ಶೇ.32ರಷ್ಟು ಸಿಬ್ಬಂದಿಗೆ ಸಕ್ಕರೆ ಕಾಯಿಲೆ, ಶೇ.25ರಷ್ಟು ಸಿಬ್ಬಂದಿಗೆ ಕೊಬ್ಬಿನಾಂಶ, ಶೇ.62ರಷ್ಟು ನೌಕರರಲ್ಲಿ ತೂಕ ಹೆಚ್ಚಾಗಿದೆ. ಹೀಗಾಗಿ, ನೌಕರರು ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ನೂತನ ಆ್ಯಪ್ ಬಿಡುಗಡೆ
ಮಹಿಳೆಯರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ನಿರ್ಭಯಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ನಮ್ಮ ಬಿಎಂಟಿಸಿ ಹೆಸರಿನ ನೂತನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಮಹಿಳೆಯರಿಗಾಗಿ ಪ್ಯಾನಿಕ್ ಬಟನ್, ಲೈವ್ ಲೊಕೇಶನ್ ಶೇರಿಂಗ್, ಸಹಾಯವಾಣಿ, ಹತ್ತಿರದ ಬಸ್ ನಿಲ್ದಾಣ, ಆಗಮಿಸುತ್ತಿರುವ ಬಸ್‌ಗಳ ಮಾಹಿತಿ, ವೇಳಾಪಟ್ಟಿ ಸೇರಿದಂತೆ ಇನ್ನಿತರ ಮಾಹಿತಿ ಲಭ್ಯವಿದೆ. ಸದ್ಯ 5 ಸಾವಿರ ಬಸ್‌ಗಳಲ್ಲಿ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ಉಳಿದ ಒಂದುವರೆ ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ವಿಸ್ತರಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.