ಕೊರೋನಾ ನಡುವೆಯೂ ಉತ್ತಮ ಆಡಳಿತ ನೀಡಿದ ಯಡಿಯೂರಪ್ಪ: ಶಂಕರ್
* ರಾಣಿಬೆನ್ನೂರು ನಗರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ ಸಿಎಂ
* ಪಕ್ಷಾತೀತವಾಗಿ ನಗರದ ಎಲ್ಲ ವಾರ್ಡುಗಳಿಗೆ ಅನುದಾನ ಹಂಚಿಕೆ
* ಗ್ರಾಮೀಣ ಭಾಗದ 20 ಕೆರೆ ತುಂಬಿಸಲು 229 ಕೋಟಿ ಬಿಡುಗಡೆ
ರಾಣಿಬೆನ್ನೂರು(ಜು.03): ಕೊರೋನಾ ಎರಡನೇ ಅಲೆ ಸಾಕಷ್ಟು ಹಾನಿ ಮಾಡಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮರ್ಪಕ ಆಡಳಿತ ನೀಡಿದ್ದಾರೆ ಎಂದು ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಆರ್. ಶಂಕರ್ ಹೇಳಿದ್ದಾರೆ.
ನಗರದ ದೊಡ್ಡಪೇಟೆ ದುರ್ಗಾದೇವಿ ದೇವಸ್ಥಾನದ ಬಳಿ ಶುಕ್ರವಾರ ಸ್ಥಳೀಯ ನಗರಸಭೆಯ 2020-21ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಐದು ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೊರೋನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಸಮಯದಲ್ಲಿಯೂ ಮುಖ್ಯಮಂತ್ರಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವೆ. ಮುಂದಿನ ದಿನಗಳಲ್ಲಿ ಶಾಸಕರ ಜತೆಗೂಡಿ ಸ್ಥಳೀಯ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ: ಉದಾಸಿ
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಸಿಎಂ ವಿಶೇಷ ಅನುದಾನ ನೀಡಿದ್ದಾರೆ. ಜಿಲ್ಲೆಯಲ್ಲಿ ಸ್ಥಳೀಯ ನಗರಸಭೆ ದೊಡ್ಡದಾಗಿದ್ದು. ವಾರ್ಡಿಗೆ ಒಂದು ಕೋಟಿಯಂತೆ ಸಿಎಂ 29 ಕೋಟಿ ನೀಡಿದ್ದಾರೆ. ಪಕ್ಷಾತೀತವಾಗಿ ನಗರದ ಎಲ್ಲ ವಾರ್ಡುಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಇದಲ್ಲದೆ ಗ್ರಾಮೀಣ ಭಾಗದ 20 ಕೆರೆ ತುಂಬಿಸಲು 229 ಕೋಟಿ ಬಿಡುಗಡೆ ಮಾಡಿದ್ದಾರೆ. ಅತೀ ಶೀಘ್ರದಲ್ಲಿ ಸಿಎಂ ಕರೆಯಿಸಿ ಕಾರ್ಯಕ್ರಮ ಮಾಡಲಾಗುವುದು ಎಂದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿಮ್ಮ ಚಿಕ್ಕಬಿದರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲವರ, ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಕುಲಕರ್ಣಿ, ಹುಚ್ಚಪ್ಪ ಮೇಡ್ಲೇರಿ, ನಾಗರಾಜ ಪವಾರ, ಪ್ರಕಾಶ ಪೂಜಾರ, ಉಷಾ ಚಿನ್ನಿಕಟ್ಟಿ, ಮೈಲಪ್ಪ ಗೋಣಿಬಸಮ್ಮನವರ, ಚನ್ನಪ್ಪ ತೋಟಪ್ಪನವರ, ವಾಕರಸಾ ಸಂಸ್ಥೆ ನಿರ್ದೇಶಕ ಸಂತೋಷÜಕುಮಾರ ಪಾಟೀಲ, ಮಂಜುನಾಥ ಓಲೇಕಾರ, ಅನಿಲಕುಮಾರ ಸಿದ್ದಾಳಿ, ಸಿದ್ದು ಚಿಕ್ಕಬಿದರಿ, ಸಿ.ಆರ್. ಅಸುಂಡಿ, ಪ್ರಭುಸ್ವಾಮಿ ಕರ್ಜಗಿಮಠ ಸೇರಿದಂತೆ ಇತರರಿದ್ದರು.