ಮಳೆಯಿಂದ ಹೆಚ್ಚು ಹಾನಿಯಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಹಾವೇರಿ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳು| ಪ್ರಕೃತಿ ವಿಕೋಪ ಪರಿಹಾರನಿಧಿಗೆ ಹೆಚ್ಚುವರಿಯಾಗಿ ಐದು ಕೋಟಿ ರು. ಅನುದಾನ ಬಿಡುಗಡೆ| ಈ ಅನುದಾನ ಕೇವಲ ಮಳೆಯಿಂದಾಗ ಹಾನಿ ಪರಿಹಾರಕ್ಕೆ ಮಾತ್ರ ಬಳಕೆಯಾಗಬೇಕು ಎಂದ ಸಚಿವ ಆರ್‌. ಅಶೋಕ್‌|

ಉಡುಪಿ(ಆ.08): ರಾಜ್ಯದ 11 ಮಳೆಪೀಡಿತ ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಲಾ 5 ಕೋಟಿ ವಿಕೋಪ ಪರಿಹಾರ ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಹಾವೇರಿ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಅಲ್ಲಿನ ಜಿಲ್ಲಾಡಳಿತದ ಪ್ರಕೃತಿ ವಿಕೋಪ ಪರಿಹಾರನಿಧಿಗೆ ಹೆಚ್ಚುವರಿಯಾಗಿ ಈ ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಕೇವಲ ಮಳೆಯಿಂದಾಗ ಹಾನಿ ಪರಿಹಾರಕ್ಕೆ ಮಾತ್ರ ಬಳಕೆಯಾಗಬೇಕು ಎಂದರು.

ಉಡುಪಿಯಲ್ಲಿ ಧಾರಾಕಾರ ಮಳೆ: ಅಲೆಗಳ ಆರ್ಭಟ, ಅಬ್ಬರ ಜೋರು

ಅಧಿಕಾರಿಗಳಿಗೆ ರಜೆಯಿಲ್ಲ: 

ಅಧಿಕಾರಿಗಳು ಯಾರೂ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ರಜೆ ಹಾಕಬಾರದು. ಯಾವುದೇ ಸ್ಥಿತಿಯನ್ನು ನಿಭಾಯಿಸಲು ಅಲರ್ಟ್‌ ಆಗಿರಬೇಕು. ಅಧಿಕಾರಗಳನ್ನು ಅಲರ್ಟ್‌ ಮಾಡುವುದಕ್ಕಾಗಿಯೇ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತಿದ್ದೇನೆ. ನೆರೆ ಪರಿಸ್ಥಿತಿ ನಿರ್ವಹಣೆಯಲ್ಲಿ ಕಂದಾಯ ಮತ್ತು ಪೊಲೀಸ್‌ ಇಲಾಖೆಗಳು ಜಂಟಿಯಾಗಿ ಹೆಚ್ಚಿನ ಹೊಣೆ ಹೊರಬೇಕಾಗಿದೆ. ರಾಜ್ಯ ಅಗ್ನಿಶಾಮಕ ದಳಕ್ಕೆ .20 ಕೋಟಿ ಪರಿಕರಗಳನ್ನು ನೀಡಲಾಗಿದೆ ಎಂದರು.

ಈ ಬಾರಿ ಒಂದು ತಿಂಗಳು ಮೊದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೊಡಗಿನ ತಲಕಾವೇರಿಯಲ್ಲಿ ಅರ್ಚಕರ ಕುಟುಂಬ ಸಕಾಲದಲ್ಲಿ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗದೇ ಇದ್ದುದು ದುರಂತಕ್ಕೆ ಕಾರಣವಾಯಿತು ಎಂದು ವಿಷಾದಿಸಿದರು.