ನಿರಾಶ್ರಿತರ ಕೇಂದ್ರದಲ್ಲಿ ಜನರ ಸಮಸ್ಯೆ ಆಲಿಸಿದ ಸಚಿವ ಅಶೋಕ್
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಸಚಿವ ಅಶೋಕ್| ಮಲೆಮನೆ ಮತ್ತು ಮಧುಗುಂಡಿ ಗ್ರಾಮಗಳಿಗೆ ತೆರಳಿ ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶದ ವೀಕ್ಷಣೆ| ನಿರಾಶ್ರಿತರಿಗೆ ಮುಂದಿನ ಜೀವನಕ್ಕೊಂದು ದಾರಿಯಾಗಬೇಕು|
ಚಿಕ್ಕಮಗಳೂರು:(ಸೆ.20) ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಗೋಧಿ, ಬೇಳೆ ಹಾಗೂ ಇತರೆ ದಿನೋಪಯೋಗಿ ಸಾಮಗ್ರಿಗಳನ್ನು ನಿರಾಶ್ರಿತರಿಗೆ ಕೊಡುವ ವ್ಯವಸ್ಥೆ ಆಗಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಸಚಿವ ಆರ್.ಅಶೋಕ್ ಸೂಚಿಸಿದರು.
ಭಾರಿ ಮಳೆಯಿಂದಾಗಿ ಮನೆ ಹಾಗೂ ಜಮೀನು ಕಳೆದುಕೊಂಡು ನಿರಾಶ್ರಿತರಾಗಿ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಗುರುವಾರ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಸಚಿವರು ಆಲಿಸಿ ಮಾತನಾಡಿದರು.
ಈ ವೇಳೆ ಅಲ್ಲಿನ ಜನರು ಸಚಿವರನ್ನ ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಕೆಲವರು ಮನೆ ಬಾಡಿಗೆ ಸಿಗ್ತಾ ಇಲ್ಲ, ಕೆಲವೆಡೆ ಸಿಕ್ಕರೂ ಅಡ್ವಾನ್ಸ್ ಕೇಳುತ್ತಿದ್ದಾರೆಂದು ಜನರು ತಮ್ಮ ಅಳಲನ್ನು ತೋಡಿಕೊಂಡರು. ಆಗ, ಸಚಿವ ಅಶೋಕ್ ಮಾತನಾಡಿ, ಮನೆಗಳನ್ನು ಹುಡುಕಿಕೊಡುವ ಕೆಲಸ ಕಂದಾಯ ಇಲಾಖೆ ಮಾಡಬೇಕು. ಬಾಡಿಗೆ ಕಟ್ಟುತ್ತೀರಾ, ಅಕ್ಕಿ ಹಾಗೂ ಇತರೆ ವಸ್ತುಗಳನ್ನು ಕೊಟ್ಟಿದ್ದೀರಾ, ಅಡುಗೆ ಮಾಡಲು ಸಿಲಿಂಡರ್ ಗ್ಯಾಸ್ ಇಲ್ಲ ಎಂದರು. ಆಗ ಅವುಗಳನ್ನೂ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕೆಂದು ಸೂಚಿಸಿದರು.
ಬಳಿಕ ಮಾತನಾಡಿದ ಸಾಹಿವರು, ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳು ಕೊಟ್ಟಿರುವ ವರದಿಯನ್ನು ನೋಡಿಕೊಂಡು ಸುಮ್ಮನೆ ಇರಬಾರದು. ಜನರಿಗೆ ಏನೆಲ್ಲಾ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಅವರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದಿಸಿದೆ. ನಿರಾಶ್ರಿತರ ಕೇಂದ್ರದಲ್ಲಿ ಕೊಡುತ್ತಿರುವ ಊಟ ಚೆನ್ನಾಗಿದ್ದೀಯಾ, ಹೊದಿಕೆ, ಶೌಚಾಲಯದ ವ್ಯವಸ್ಥೆ ಸರಿಯಾಗಿದ್ದೀಯಾ ಎಂಬುದನ್ನು ಖುದ್ದಾಗಿ ನೋಡಲು ಬಂದಿದ್ದೇನೆ. ಈ ಕಾರಣಕ್ಕಾಗಿಯೇ ತಮ್ಮೊಂದಿಗೆ ಕುಳಿತು ಊಟ ಮಾಡಿದ್ದೇನೆ ಎಂದರು.
ಇಲ್ಲಿನ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದಾಗ ಎಲ್ಲವೂ ಸರಿಯಾಗಿದೆ ಎಂದು ಜನರು ಹೇಳಿದರು. ಆದರೆ, ಮಕ್ಕಳು ಶೀತ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಇಲ್ಲಿಗೆ ಖಾಸಗಿ ವೈದ್ಯರು ಭೇಟಿ ನೀಡುವ ವ್ಯವಸ್ಥೆಯಾಗಬೇಕು ಎಂದು ಜನರು ಅಳಲು ತೋಡಿಕೊಂಡರು. ಆಗ, ನಾಳೆಯಿಂದಲೇ ವಾರಕ್ಕೆ ಮೂರು ದಿನ ಖಾಸಗಿ ವೈದ್ಯರು ಇಲ್ಲಿಗೆ ಬಂದು ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಅವರಿಗೆ ಬೇಕಾದ ಔಷಧೋಪಚಾರ ಜಿಲ್ಲಾಡಳಿತದಿಂದಲೇ ಆಗಬೇಕೆಂದು ಸಚಿವರು ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನೆಗೆ ಸಂಪೂರ್ಣವಾಗಿ ಹಾನಿಯಾಗಿದ್ದರೆ ಕೂಡಲೇ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಮಂಜೂರು ಮಾಡಲಾಗಿದೆ. ಆರಂಭದಲ್ಲಿ 1 ಲಕ್ಷ ರೂ. ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದಿಂದ ಮನೆಗಳನ್ನು ಕಟ್ಟುವ ಕೆಲಸ ಮಾಡಿದರೆ, ಗುಣಮಟ್ಟದಲ್ಲಿ ಗುತ್ತಿಗೆದಾರರು ವ್ಯತ್ಯಯ ಮಾಡಬಹುದು. ಈ ಕಾರಣಕ್ಕಾಗಿ ಜನರಿಗೆ ಅವರವರ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಅಲೇಖಾನ್ ಹೊರಟ್ಟಿಯಲ್ಲಿ ಮನೆ ಇದೆ. ಅಲ್ಲಿಗೆ ಹೋಗಲು ರಸ್ತೆ ಇಲ್ಲ, ನಗರದಲ್ಲಿ ಬಾಡಿಗೆ ಮನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸ್ಥಳೀಯ ಮಹಿಳೆಯೋರ್ವರು ಹೇಳಿದಾಗ, ಮನೆ ಇದ್ದವರಿಗೆ ಮನೆ ಕೊಡುವುದಿಲ್ಲ. ರಸ್ತೆ ಹಾಳಾಗಿದ್ದರೆ ಅದನ್ನು ಸರಿಪಡಿಸಿಕೊಡಲಾಗುವುದು ಎಂದು ಸಚಿವರು ಹೇಳುತ್ತಿದ್ದಂತೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಕೆಲವೇ ದಿನದಲ್ಲಿ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ನಿರಾಶ್ರಿತರಿಗೆ ಮುಂದಿನ ಜೀವನಕ್ಕೊಂದು ದಾರಿಯಾಗಬೇಕು. ಈ ಕಾರಣಕ್ಕಾಗಿ ಅವರಿಗೆ ನರೇಗಾದಲ್ಲಿ ಉದ್ಯೋಗ ನೀಡಬೇಕೆಂದು ಸೂಚನೆ ನೀಡಿದರು.
ಭಾರೀ ಮಳೆಯಿಂದಾಗಿ ಜನರು ಜಮೀನು ಕಳೆದುಕೊಂಡಿದ್ದಾರೆ. ಅಂತಹವರಲ್ಲಿ ಕೆಲವರದ್ದು ಸ್ವಂತ ಜಮೀನು ಇದ್ದರೆ, ಮತ್ತೆ ಕೆಲವರಿಗೆ ಮಂಜೂರಾಗಿಲ್ಲ, ಖಾತೆಯೂ ಇಲ್ಲ. ಇದು ಯಾವುದನ್ನು ನೋಡದೇ ಎಲ್ಲರಿಗೂ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ನಿರಾಶ್ರಿತರಿಗೆ ಮನೆ ಹಾಗೂ ಜಮೀನು ನೀಡಲು ಈಗಾಗಲೇ ಕಂದಾಯ ಇಲಾಖೆ 374 ಎಕರೆ ಪ್ರದೇಶವನ್ನು ಗುರುತು ಮಾಡಿದೆ. ಶೇ.50ಕ್ಕಿಂತ ಹೆಚ್ಚು ಜಮೀನು ಹಾಳಾಗಿದ್ದರೆ, ಅಂತಹವರಿಗೆ ಪತಿ ಮತ್ತು ಪತ್ನಿಯ ಹೆಸರಿನಲ್ಲಿ ಜಮೀನು ಮಂಜೂರು ಮಾಡಿ ದಾಖಲೆ ನೀಡಲಾಗುವುದು ಎಂದರು.
ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಬಳಿಕ ಸಚಿವರು ಮಲೆಮನೆ ಮತ್ತು ಮಧುಗುಂಡಿ ಗ್ರಾಮಗಳಿಗೆ ತೆರಳಿ ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಮಾಜಿ ಸಚಿವ ಡಿ.ಎನ್.ಜೀವರಾಜ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಎಸ್.ಅಶ್ವಥಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಂ, ಜಿ.ಪಂ. ಸದಸ್ಯೆ ಸುಧಾ ಯೋಗೇಶ್, ತಾ.ಪಂ. ಸದಸ್ಯೆ ಭಾರತೀ ರವೀಂದ್ರ ಹಾಜರಿದ್ದರು.