Asianet Suvarna News Asianet Suvarna News

ನಮ್ಮದು ಪಾಪರ್‌ ಸರ್ಕಾರವಲ್ಲ ಸೂಪರ್‌ ಸರ್ಕಾರ: ಸಚಿವ ಅಶೋಕ್‌

ರಾಜ್ಯದಲ್ಲಿ ಬಿಜೆಪಿಯದ್ದು ಸೂಪರ್‌ ಸರ್ಕಾರ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾಂಗ್ರೆಸ್‌ನವರ ಆರೋಪ ನಿರಾಧಾರ ಮತ್ತು ಸುಳ್ಳು, ನೆರೆ ಸಂತ್ರಸ್ತರಿಗೆ ಹಂತಹಂತವಾಗಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. 

minister r ashok visited rain affected areas of chamarajanagar gvd
Author
Bangalore, First Published Aug 6, 2022, 6:29 PM IST

ಕೊಳ್ಳೇಗಾಲ (ಆ.06): ರಾಜ್ಯದಲ್ಲಿ ಬಿಜೆಪಿಯದ್ದು ಸೂಪರ್‌ ಸರ್ಕಾರ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾಂಗ್ರೆಸ್‌ನವರ ಆರೋಪ ನಿರಾಧಾರ ಮತ್ತು ಸುಳ್ಳು, ನೆರೆ ಸಂತ್ರಸ್ತರಿಗೆ ಹಂತಹಂತವಾಗಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಕೊಳ್ಳೇಗಾಲದಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನೆರೆ ಪರಿಹಾರವಾಗಿ ಬೆಳಗಾವಿ ಜಿಲ್ಲೆಯಲ್ಲೆ 80 ಕೋಟಿ ಇದೆ. ಪ್ರತಿ ಜಿಲ್ಲಾಧಿಕಾರಿ ಖಾತೆಗಳಲ್ಲೂ ಸಾಕಷ್ಟುಹಣವಿದ್ದು, ವಿಪಕ್ಷಗಳ ಸರ್ಕಾರದ ಬಳಿ ಹಣವಿಲ್ಲ, ಪಾಪರ್‌ ಆಗಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದರು.

ರೈತಪರ ಸರ್ಕಾರ: ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆ ಮಂತ್ರಿಯಾಗಿ ಇಡೀ ರಾಜ್ಯಾದ್ಯಂತ ಭೇಟಿ ಮಾಡುವ ಮೂಲಕ ನೊಂದವರು, ರೈತರಿಗೆ ಸೂಕ್ತ ಪರಿಹಾರ ನೀಡುವ ಹಾಗೂ ಪರಿಹಾರದ ಹಣವನ್ನು ದುಪ್ಪಟ್ಟು ಮಾಡಲು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರದಲ್ಲಿ ಹಣವಿಲ್ಲ ಎಂದು ಅಪಪ್ರಚಾರ ಮಾಡುವುದು ಸರಿಯಾದ ಕ್ರಮವಲ್ಲ. ಬಿಜೆಪಿ ಸರ್ಕಾರ ಸಂತ್ರಸ್ತರಿಗೆ ಪರಿಹಾರ ದುಪ್ಪಟ್ಟು ಮಾಡಿ ರೈತರ ನೆರವಿಗೆ ನಿಲ್ಲಲಿದೆ. ರೈತರು ಆತಂಕಕ್ಕೊಳಗಾಗಬಾರದು. ಸರ್ಕಾರಕ್ಕೆ ಹಾನಿ ಕುರಿತು ಸೂಕ್ತ ಮಾಹಿತಿ, ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ಹೇಳಿದರು. 

ಸಿದ್ದು ಅವಧಿಯಲ್ಲಿ ಹಾಡಹಗಲೇ ಕೊಲೆ ಆಗಿತ್ತು: ಅಶೋಕ್‌ ವಾಗ್ದಾಳಿ

ಮಧ್ಯವರ್ತಿಗಳ ಹಾಗೂ ಲಂಚದ ಹಾವಳಿಯಿಂದ ತಪ್ಪಿಸಲು ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾಕ್ಕೂ ಕ್ರಮ ವಹಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗಳಲ್ಲೂ ನೆರೆ ಪರಿಹಾರಕ್ಕಾಗಿ 800 ಕೋಟಿ ಹಣ ಮೀಸಲಿಡಲಾಗಿದೆ. ಈಗಾಗಲೇ ನೆರೆ ಪರಿಹಾರಕ್ಕಾಗಿ ಸರ್ಕಾರ 300 ಕೋಟಿ ಬಿಡುಗಡೆ ಮಾಡಿದೆ. ಇನ್ನೆರಡು ದಿನದಲ್ಲಿ 500 ಕೋಟಿ ಹಣ ಬಿಡುಗಡೆಯಾಗಲಿದೆ. ಈಸಂಬಂಧ ಮುಖ್ಯಮಂತ್ರಿಗಳು ನನ್ನೊಂದಿಗೆ ಚರ್ಚಿಸಿದ್ದಾರೆಂದು ಸಚಿವರು ಭರವಸೆ ನೀಡಿದರು.

ಶೀಘ್ರ ಪರಿಹಾರ: ಮಳೆ ಹಾನಿ ಪರಿಹಾರಕ್ಕೆ ತೀವ್ರ ನಿಗಾ ವಹಿಸಲಾಗುತ್ತಿದೆ. ಅದಕ್ಕೆಂದು ಒಂದು ಹೊಸ ಆ್ಯಪ್‌ ಮೂಲಕ ಶೀಘ್ರದಲ್ಲೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ 8ರಿಂದ 9 ತಿಂಗಳು ಪರಿಹಾರ ನೀಡಲು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ನಾನು ಸಚಿವನಾದ ಬಳಿಕ 20 ದಿನದಿಂದ ಒಂದೂವರೆ ತಿಂಗಳಲ್ಲಿ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕಿಟ್‌ ಜೊತೆ 10 ಸಾವಿರ: ರಾಜ್ಯದಲ್ಲಿ ಮಳೆಹಾನಿಯಿಂದ 630 ಮನೆಗಳು ಪೂರ್ಣ ಹಾನಿಗೊಳಗಾಗಿವೆ. ಭಾಗಶಃ 15,690 ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾದ ಮನೆಗಳಿಗೆ 48 ಗಂಟೆಯೊಳಗೆ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. 1 ವಾರದೊಳಗೆ ಬಿಜೆಪಿ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಿದೆ. ನೆರೆ ಹಾವಳಿಯಿಂದ ನೊಂದ ನಾಗರೀಕರಿಗೆ ಆಹಾರ ಕಿಟ್‌ ನೀಡುವುದು ಯೋಜನೆಯ ಉದ್ದೇಶ. 

ನೆರೆ ಸಂತ್ರಸ್ತರಿಗೆ 15 ದಿನಕ್ಕೊಮ್ಮೆ 10 ಕೆಜಿ ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ಇತರೆ ಪದಾರ್ಥ ನೀಡಲು ಹಾಗೂ ಜೊತೆಗೆ 10 ಸಾವಿರ ಪರಿಹಾರ ನೀಡಲು ಚಿಂತಿಸಲಾಗಿದೆ. ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಕಾಳಜಿ ಕೇಂದ್ರ ಎಂದು ಬದಲಾಯಿಸಿದೆ. ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಂತ್ರಸ್ತರಿಗೆ ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸದ ಉದ್ದೇಶವೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವುದು ಮತ್ತು ನೊಂದವರಿಗೆ ನ್ಯಾಯ ಸಿಗಬೇಕು. ಅಧಿಕಾರಿಗಳಿಗೆ ಚುರುಕು ಮುಟ್ಟಬೇಕು ಎಂಬುದಾಗಿದೆ ಎಂದು ಅಶೋಕ್‌ ಹೇಳಿದರು.

807 ಕುಟುಂಬ ಸ್ಥಳಾಂತರ: ರಾಜ್ಯದಲ್ಲಿ 1,07, 063 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 10,373 ಸೇತುವೆಗಳು ಹಾಳಾಗಿವೆ. 16,301 ವಿದ್ಯುತ್‌ ಕಂಬಗಳು ಹಾಳಾಗಿವೆ. ಈ ಸಂಬಂಧ 64 ಪರಿಹಾರ ಶಿಬಿರ ತೆರೆಯಲಾಗಿದೆ. ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಅಪಾಯದಂಚಿನಲ್ಲಿರುವ 807 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಳೆ ನಿಂತ ಮೇಲೆ ಕೇಂದ್ರಗಳು ಸಹಾ ತನ್ನ ಪಾಲಿನ ಪರಿಹಾರದ ಹಣವನ್ನು ನೀಡಲಿದೆ. 

ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ತುರ್ತು ಕ್ರಮ: ಸಿಎಂ ಸೂಚನೆ

ಈ ಸಂಬಂಧ ಅಗತ್ಯ ಮಾಹಿತಿಯನ್ನು ಈಗಾಗಲೇ ರವಾನಿಸಲಾಗುತ್ತಿದೆ ಎಂದು ತಿಳಿಸಿದರು. ತಡೆಗೋಡೆ ಹಾಗೂ ಕಲ್ಲು ಹಾಕಿ ಗೋಡೆ ನಿರ್ಮಾಣವನ್ನು ವೈಜ್ಞಾನಿಕವಾಗಿ ಅಳವಡಿಸುವ ಕುರಿತು ಸರ್ಕಾರ ಗಂಬೀರವಾಗಿ ಚಿಂತಿಸಲಾಗಿದೆ. ಹೊಸದಾಗಿ ಜಿಲ್ಲಾ ಮಂತ್ರಿಗಳು ಪ್ರಸ್ತಾವನೆ ಸಲ್ಲಿಸಿದ್ದು ಸಮುದ್ರದ ಒಳಗೆ ತೆರಳಿ ಅಲ್ಲಿಂದಲೆ ಅಲೆ ತಡೆಯುವ ಕುರಿತು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು. ಈ ವೇಳೆ ಶಾಸಕ ಮಹೇಶ್‌, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಇನ್ನಿತರರಿದ್ದರು.

Follow Us:
Download App:
  • android
  • ios