ಕಂದಾಯ ಸಚಿವರಿಂದ ಕೆಂಚನಹಳ್ಳಿಗೆ ಅನುದಾನ ಬಿಡುಗಡೆ, ಗ್ರಾಮಾಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲು ಸೂಚನೆ

ಎಚ್‌.ಡಿ.ಕೋಟೆ(ನ.21): ಗ್ರಾಮ ವಾಸ್ತವ್ಯ ನಡೆಸಿದ ನೆನಪಿಗಾಗಿ ಕೆಂಚನಹಳ್ಳಿ ಗ್ರಾಮಕ್ಕೆ 1 ಕೋಟಿ ರು.ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಈ ಸಂಬಂಧ ಗ್ರಾಮದ ಅಭಿವೃದ್ಧಿಗೆ ಕ್ರಿಯಾಯೋಜನೆಯನ್ನು ತಯಾರಿಸಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಎಚ್‌.ಡಿ.ಕೋಟೆ ತಾಲೂಕು ಕೆಂಚನಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ವಾಸ್ತವ್ಯದ ಅಂಗವಾಗಿ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮದ ಅನೇಕ ಮುಖಂಡರು ಮಾತನಾಡಿ, ಕೆಂಚನಹಳ್ಳಿ ಗ್ರಾಮ ಪುನರ್ವಸತಿ ಗ್ರಾಮವಾಗಿದ್ದು, ಮಳೆಯಿಂದ ರಸ್ತೆ ಹಾಳಾಗಿದೆ. ಗ್ರಾಮಕ್ಕೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಬೇಕು, ಮನೆಗಳನ್ನು ಮಂಜೂರು ಮಾಡಿಕೊಡಬೇಕು. ಗ್ರಾಮಕ್ಕೆ ಪಿಯು ಕಾಲೇಜು ಬೇಕಿದೆ. ಸ್ಮಶಾನಕ್ಕೆ ಪ್ರತ್ಯೇಕ ಜಾಗ ಬೇಕಾಗಿದೆ. ಕೆಂಚನಹಳ್ಳಿ ಗ್ರಾಮದ ಸುತ್ತಲಿರುವ ಎಲ್ಲಾ ಗ್ರಾಮಗಳನ್ನು ಸೇರಿಸಿ ಕೆಂಚನಹಳ್ಳಿಯಲ್ಲಿ ಗ್ರಾ.ಪಂ. ಕಚೇರಿ ಸ್ಥಾಪನೆ ಮಾಡಬೇಕು. ಜೊತೆಗೆ, ಅಗತ್ಯ ಆಡಳಿತ ಸಿಬ್ಬಂದಿ ನೇಮಿಸಬೇಕು. ಜೊತೆಗೆ ಗ್ರಂಥಾಲಯ ಸೇರಿದಂತೆ ಉಳಿದ ಸೌಲಭ್ಯಗಳನ್ನೂ ಒದಗಿಸಬೇಕು ಎಂದು ಮನವಿ ಮಾಡಿದರು.

Mysuru : ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ

ಗ್ರಾಮಸ್ಥರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಮಾತನಾಡಿ, ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಆರ್‌.ಚೇತನ್‌, ಜಿ.ಪಂ. ಸಿಇಒ ಬಿ.ಆರ್‌. ಪೂರ್ಣಿಮಾ, ಬಂಡೀಪುರ ಸಿಎಫ್‌ ರಮೇಶ್‌ಕುಮಾರ್‌, ಎನ್‌. ಬೇಗೂರು ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ಅಭಿಲಾಷ್‌, ತಹಸೀಲ್ದಾರ್‌ ಚಲುವರಾಜು, ಸಣ್ಣರಾಮಪ್ಪ, ಇಒ ಜೊರಾಲ್ಡ್‌ ರಾಜೇಶ್‌, ವೃತ್ತ ನಿರೀಕ್ಷಕ ಆನಂದ್‌, ಬಸವರಾಜು ಮೊದಲಾದವರು ಇದ್ದರು.