3000+ ಸೋಂಕಿತರು ನಾಪತ್ತೆ; ಸರ್ಕಾರಕ್ಕೆ ಸವಾಲ್‌| ಪಾಸಿಟಿವ್‌ ವರದಿ ಬರುತ್ತಿದ್ದಂತೆ ಮೊಬೈಲ್‌ ಸ್ವಿಚ್‌ಆಫ್‌| ಮನೆ ಖಾಲಿ ಮಾಡಿಕೊಂಡು ಪರಾರಿ| ಇವರ ಪತ್ತೆಯೇ ಕಷ್ಟ: ಸಚಿವ ಆರ್‌.ಅಶೋಕ್‌ ಆತಂಕ| 

ಬೆಂಗಳೂರು(ಏ.29): ನಗರದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜನರು ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ಆಫ್‌ ಮಾಡಿಕೊಂಡು ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವುದೇ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಬಾಗಲಕುಂಟೆಯಲ್ಲಿ ನಿರ್ಮಿಸಿರುವ 130 ಹಾಸಿಗೆಗಳ ನೂತನ ಕೊರೋನಾ ಆರೈಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಪರೀಕ್ಷೆ ಬಳಿಕ ಕೊರೋನಾ ಪಾಸಿಟಿವ್‌/ ನೆಗೆಟಿವ್‌ ವೈದ್ಯಕೀಯ ವರದಿಗಳು ಟೆಸ್ಟ್‌ ಮಾಡಿಸಿರುವವರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತಿದೆ. ಪಾಸಿಟಿವ್‌ ವರದಿ ಬರುತ್ತಿದ್ದಂತೆ ಸುಮಾರು 3 ಸಾವಿರಕ್ಕೂ ಹೆಚ್ಚಿನ ಮಂದಿ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಕಾಣೆಯಾಗಿದ್ದಾರೆ ಎಂದು ಹೇಳಿದರು.

ಮೊಬೈಲ್‌ಗಳನ್ನು ಸ್ವಿಚ್‌ಆಫ್‌ ಮಾಡಿಕೊಂಡು ಮನೆ ಖಾಲಿ ಮಾಡಿರುವುದರಿಂದ ಸೋಂಕಿತರನ್ನು ಹುಡುಕಿ ಆಸ್ಪತ್ರೆಗೆ ಕರೆತರುವುದು ಸಾಹಸದ ಕೆಲಸವಾಗಿದೆ. ದಯವಿಟ್ಟು ಯಾರೂ ಇಂತಹ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ಕರ್ಫ್ಯೂ​ ಅವಧಿಯಲ್ಲಿ ಅವಶ್ಯ ಓಡಾಟಕ್ಕೆ ಪಾಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಕಮಲ್ ಪಂತ್

ಈಗಿನ ಪರಿಸ್ಥಿತಿಯಲ್ಲಿ ಪೊಲೀಸರ ಮೂಲಕ ಸೋಂಕಿತರನ್ನು ಹುಡುಕಿಸುವುದು ಕಷ್ಟದ ಕೆಲಸ. ಆದ್ದರಿಂದ ಸೋಂಕಿತರು ಧೈರ್ಯವಾಗಿ ಆಸ್ಪತ್ರೆಗೆ ಬರಬೇಕು. ಯಾವುದೇ ಕಾರಣಕ್ಕೂ ಪರಾರಿಯಾಗಬಾರದು. ಉಸಿರಾಟದ ಸಮಸ್ಯೆ ಎದುರಾದ ಬಳಿಕ ಮೊಬೈಲ್‌ ಫೋನ್‌ಗಳನ್ನು ಆನ್‌ ಮಾಡುತ್ತಿದ್ದಾರೆ. ಹೀಗಾದರೆ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.

ಬಾಗಲಗುಂಟೆಯಲ್ಲಿ 130 ಬೆಡ್‌ ಕೇಂದ್ರ

ಬಿಬಿಎಂಪಿಯು ಬಾಗಲಗುಂಟೆಯಲ್ಲಿ ಆರಂಭಿಸಿರುವ 130 ಸಾಮಾನ್ಯ ಹಾಸಿಗೆ ಹಾಗೂ 10 ಆಕ್ಸಿಜನ್‌ (ಆಮ್ಲಜನಕ) ಬೆಡ್‌ಗಳ ವ್ಯವಸ್ಥೆಯುಳ್ಳ ಕೇಂದ್ರವನ್ನು ಬುಧವಾರದಿಂದ ಆರಂಭಿಸಲಾಯಿತು. ನಗರದಲ್ಲಿ ಈಗಾಗಲೇ 12 ಕೊರೋನಾ ಆರೈಕೆ ಕೇಂದ್ರಗಳಿದ್ದು, ಬಾಗಲಗುಂಟೆ 13ನೇ ಕೇಂದ್ರವಾಗಿದೆ. ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಕೇಂದ್ರದಲ್ಲಿ 14 ದಿನಗಳ ಕಾಲ ವೈದ್ಯರು ಪಾಳಿ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸುಸಜ್ಜಿತವಾಗಿ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದರು.

ನಿಯಂತ್ರಣಕ್ಕೆ ಬಾರದಿದ್ದರೆ ಕರ್ಫ್ಯೂ ಮುಂದುವರಿಕೆ

ಸದ್ಯ ರಾಜ್ಯದಲ್ಲಿ ಜಾರಿಗೆ ತಂದಿರುವ 14 ದಿನಗಳ ಜನತಾ ಕರ್ಫ್ಯೂ ಅವಧಿಯಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇದೇ ಪರಿಸ್ಥಿತಿ ಮುಂದುವರಿದರೆ ಮತ್ತೆ ಜನತಾ ಕರ್ಫ್ಯೂ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದರು. ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಕೂಲಿ ಕಾರ್ಮಿಕರಿಗೆ ಪರಿಹಾರ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು.