ಬೆಂಗಳೂರು(ಡಿ.18): ವಿಶ್ವಮಾನ್ಯ ಪಡೆದಿರುವ, ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ಕಾರಣಕ್ಕಾಗಿ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತರಲಾಗಿದೆಯೇ ಹೊರತು ಚುನಾವಣೆ ಮುಂದೂಡಿಕೆ ಮಾಡಲು ಅಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ‘ಬೆಂಗಳೂರು ಮಿಷನ್‌-2022’ ವಿಚಾರ ಕುರಿತ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯದ ಇತರೆ ನಗರಗಳಿಗೆ ನಡೆಸುವಂತೆ ಕೆಎಂಸಿ ಕಾಯ್ದೆ ಪ್ರಕಾರ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಜನಸಂಖ್ಯೆ ಒಂದು ಕೋಟಿಗೂ ಅಧಿಕವಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾಯ್ದೆ ತಂದು ಚುನಾವಣೆಗೆ ಹೋಗುತ್ತಿದ್ದೇವೆ. ಬಿಬಿಎಂಪಿ ವಿಧೇಯಕ ಅಂಗೀಕಾರವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಈಗಾಗಲೇ ಬೆಂಗಳೂರ ನಗರದಲ್ಲಿ ಪ್ರಗತಿ ಕಾರ್ಯಗಳ ವೀಕ್ಷಣೆ ಮಾಡುವ ಸಂಬಂಧ ನಾಲ್ಕು ಬಾರಿ ಪ್ರದಕ್ಷಿಣೆ ಮಾಡಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಮುಂದಿನ ದಿನದಲ್ಲಿ ಮತ್ತೆ ಆರಂಭಿಸಲಾಗುತ್ತದೆ ಎಂದರು.

ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಬಿಜೆಪಿ ಶಾಸಕರ ಸಭೆ

ಮಾರ್ಚ್‌, ಏಪ್ರಿಲ್‌ ವೇಳೆಗೆ ಸ್ಮಾರ್ಟ್‌ಸಿಟಿ ರಸ್ತೆಗಳು ಪೂರ್ಣ

ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಮುಖ ರಸ್ತೆಗಳ ಕಾಮಗಾರಿಗಳು ಮುಂದಿನ ವರ್ಷ ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಅವಧಿಯನ್ನು ನೀಡಲಾಗಿತ್ತು. ಆದರೆ, ಕೋವಿಡ್‌ ಮತ್ತು ಮಳೆಯಿಂದಾಗಿ ವಿಳಂಬವಾಗಿದೆ. ಪ್ರಮುಖ ರಸ್ತೆಗಳ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವ ಕುರಿತು ಸಭೆ ನಡೆಸಲಾಗಿದೆ. 2021ರ ಮಾರ್ಚ್‌ ಅಥವಾ ತಿಂಗಳ ವೇಳೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದರು.