ಗದಗ: ಕೂಲಿ ಕಾರ್ಮಿಕನ ಪುತ್ರಿ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ..!
ದೆಹಲಿಯಲ್ಲಿ ನಡೆಯುವ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾದ ಸೈಕ್ಲಿಂಗ್ ಪಟು| ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಪವಿತ್ರಾ ಕುರ್ತಕೋಟಿ| ತಂದೆ, ತಾಯಿ ಕೂಲಿ ಮಾಡಿ ಜೀವನ, ಮಗಳು ಮಾತ್ರ ಗದಗ ಕ್ರೀಡಾ ಹಾಸ್ಟೆಲ್‌ನಲ್ಲಿದ್ದು ಸಾಧನೆ|
ಶಿವಕುಮಾರ ಕುಷ್ಟಗಿ
ಗದಗ(ಸೆ.17): ಜಿಲ್ಲೆಯ ಗ್ರಾಮೀಣ ಪ್ರತಿಭೆ, ಮಹಿಳಾ ಸೈಕ್ಲಿಂಗ್ ಪಟು ಪವಿತ್ರಾ ಕುರ್ತಕೋಟಿ ದೆಹಲಿಯಲ್ಲಿ ನಡೆಯುವ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.
ಪವಿತ್ರಾ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಿದ ಡಿ.ಎ. ಹುಬ್ಬಳ್ಳಿ ಅವರು, 2015 ರಲ್ಲಿ ಅವಳನ್ನು ಜಿಲ್ಲಾ ಕ್ರೀಡಾ ಶಾಲೆಯ ಆಯ್ಕೆ ಸಂದರ್ಭದಲ್ಲಿ ಕರೆದೊಯ್ದು 5ನೇ ತರಗತಿಗೆ ಪ್ರವೇಶ ದೊರೆಯುವಂತೆ ಮಾಡಿದ್ದಾರೆ. ತೀರಾ ಬಡ ಕುಟುಂಬದ ಈ ವಿದ್ಯಾರ್ಥಿನಿಯ ಪಾಲಕರು ಕೂಲಿ ಕೆಲಸ ಮಾಡುತ್ತಿದ್ದು, ಮಗಳ ಓದಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವುದು, ಆರ್ಥಿಕ ಸೇರಿ ಯಾವುದೇ ರೀತಿಯಲ್ಲಿ ಸ್ಪಂದಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪವಿತ್ರಾ ಅತ್ಯುತ್ತಮ ಸಾಧನೆ ಮಾಡಿ ಖೋಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.
ಇದುವರೆಗಿನ ಸಾಧನೆ:
ಕಠಿಣ ಪರಿಶ್ರಮ, ಸತತ ಸಾಧನೆ, ಅಭ್ಯಾಸದ ಮೂಲಕ 7ನೇ ತರಗತಿಯಿಂದ ಉತ್ತಮ ಸಾಧನೆ ತೋರುತ್ತ ಬಂದಿದ್ದಾಳೆ. 14 ಮತ್ತು 16 ನೇ ವರ್ಷದೊಳಗಿನ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬಳಿಕ 2017 ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದರು. ಅಲ್ಲಿದ್ದ ಹಲವು ಹಿರಿಯ ಸೈಕ್ಲಿಸ್ಟ್‌ಗಳು ಇವಳ ಪ್ರತಿಭೆ ಗುರುತಿಸಿ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ ಮಾಡಿದ್ದಾರೆ.
'ಮೋದಿ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದ ನಿರುದ್ಯೋಗ'
ಖೇಲೋ ಇಂಡಿಯಾ
ಒಮ್ಮೆ ಈ ಕ್ಯಾಂಪ್‌ಗೆ ಆಯ್ಕೆಯಾದಲ್ಲಿ ಕ್ರೀಡಾಪಟು ನಿರಂತರವಾಗಿ ಅಲ್ಲಿಯೇ ಇರಬೇಕು. ಅವರು ಆಯ್ಕೆಯಾದ ವಿಭಾಗದಲ್ಲಿಯೇ ತರಬೇತಿ ಪಡೆದು ದೇಶ ಸೇರಿದಂತೆ ವಿದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇದಕ್ಕಾಗಿ ಪ್ರತಿ ಕ್ರೀಡಾಪಟುವಿಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ತರಬೇತುದಾರರು ಅತ್ಯುತ್ಕೃಷ್ಟವಾದ ತರಬೇತಿ, ಮಾರ್ಗದರ್ಶನ ನೀಡುತ್ತಾರೆ. ಮುಖ್ಯವಾಗಿ ಪೌಷ್ಟಿಕ ಆಹಾರ, ಉತ್ತಮ ತಂತ್ರಜ್ಞಾನ ಹಾಗೂ ಹೊಸ ಹೊಸ ಆವಿಷ್ಕಾರಗಳನ್ನು ಕ್ರೀಡಾಪಟುಗಳಿಗೆ ನಿರಂತರವಾಗಿ ಕಲ್ಪಿಸಲಾಗುತ್ತದೆ. ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾದ ಕ್ರೀಡಾಪಟು ನಿತ್ಯ 12 ಗಂಟೆಗೂ ಅಧಿಕ ಕಾಲ ಸಾಧನೆ ಮಾಡಬೇಕಾಗುತ್ತದೆ. ಸದ್ಯ ಕೊರೋನಾ ಹಿನ್ನೆಲೆಯಲ್ಲಿ ಕ್ಯಾಂಪ್ ಪ್ರಾರಂಭಗೊಂಡಿಲ್ಲ. ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯದಿಂದ ಪ್ರಾರಂಭಕ್ಕೆ ಅನುಮತಿ ದೊರೆಯುವ ಸಾಧ್ಯತೆ ಇದೆ.
ಪವಿತ್ರಾ ಕುರ್ತಕೋಟಿ ಹಠವಾದಿ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ್ದು, ಗದಗ ಜಿಲ್ಲೆಯಿಂದ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಸೈಕ್ಲಿಂಗ್ ಪಟು. ಅವಳಿಗೆ ಇನ್ನೂ ದೊಡ್ಡಮಟ್ಟದ ಸಾಧನೆ ಮಾಡಬೇಕು ಎನ್ನುವ ಉತ್ಸಾಹವಿದೆ. ಅದಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ನೀಡಿದೆ ಎಂದು ಗದಗ ಕ್ರೀಡಾ ಶಾಲೆಯ ಸೈಕ್ಲಿಂಗ್ ತರಬೇತುದಾರ ಅನಂತ ದೇಸಾಯಿ ಅವರು ತಿಳಿಸಿದ್ದಾರೆ.
ಪವಿತ್ರಾ ಈ ಹಿಂದೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ವೇಳೆಗೆ ಆಕೆಗೆ ಬೇಕಾಗುವ ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್‌ನ್ನು ಅಂದಿನ ಜಿಲ್ಲಾಧಿಕಾರಿಗಳು ತಕ್ಷಣವೇ ಕೊಡಿಸುವ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಆಕೆ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಈಗ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾಗಿದ್ದು, ಅಲ್ಲಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಬಿ.ಬಿ. ವಿಶ್ವನಾಥ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯ್ಕೆಯಾದ ಸೈಕ್ಲಿಂಗ್ ಪಟು ಪವಿತ್ರಾ ಕುರ್ತಕೋಟಿ, ನಮ್ಮದು ಬಡ ಕುಟುಂಬವಾಗಿದ್ದು, ಕ್ರೀಡಾ ಶಾಲೆಗೆ ಆಯ್ಕೆಯಾದ ವೇಳೆ ಪಾಲಕರು ಮೊದಲು ಕಳಿಸಲು ಹಿಂದೇಟು ಹಾಕಿದರು. ಆದರೆ ವಿಶ್ವನಾಥ ಮತ್ತು ದೇಸಾಯಿ ಸರ್ ಅವರ ಮಾರ್ಗದರ್ಶನ, ಧೈರ್ಯದಿಂದ ಇಂದು ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವುದೇ ನನ್ನ ಗುರಿಯಾಗಿದೆ ಎಂದು ತಿಳಿಸಿದ್ದಾರೆ.