ನಾಡಿದ್ದು ಸಿಎಂ ತವರಲ್ಲಿ ಅಶೋಕ್ ಗ್ರಾಮವಾಸ್ತವ್ಯ
- ನಾಡಿದ್ದು ಸಿಎಂ ತವರಲ್ಲಿ ಅಶೋಕ್ ಗ್ರಾಮವಾಸ್ತವ್ಯ
- ಹಾವೇರಿ ಜಿಲ್ಲೆಯ ಬಾಡಾದಲ್ಲಿ 20ಸಾವಿರ ಮಂದಿಗೆ ಸವಲತ್ತು ವಿತರಣೆ
- ದಲಿತರ ಮನೆಯಲ್ಲಿ ಉಪಹಾರ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಹಾವೇರಿ (ಡಿ.15) : ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಸಿಎಂ ಬೊಮ್ಮಾಯಿಯವರ ಸ್ವಕ್ಷೇತ್ರ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಡಿ.17ರಂದು ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಡಿ.17ರಂದು ಬಾಡ ಗ್ರಾಮಕ್ಕೆ ಆಗಮಿಸಿ, ವಿವಿಧ ಇಲಾಖೆಗಳಿಂದ ತೆರೆಯಲಾದ ಮಳಿಗೆಗಳಿಗೆ ಸಚಿವರು ಭೇಟಿ ನೀಡಲಿದ್ದಾರೆ. ವಿವಿಧ ಇಲಾಖೆಗಳಿಂದ ವಿವಿಧ ಯೋಜನೆಗಳಡಿ ಆಯ್ಕೆಯಾದ 20 ಸಾವಿರಕ್ಕೂ ಅಧಿಕ ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ 150ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಮಾಣಪತ್ರ, ಸೌಲಭ್ಯಗಳನ್ನು ವಿತರಣೆ ಮಾಡಲಿದ್ದಾರೆ. ಸಂಜೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ರಾತ್ರಿ ಬಾಡಾ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವಸತಿ ಶಾಲೆಯ ಮಕ್ಕಳೊಂದಿಗೆ ಭೋಜನ ಸೇವಿಸಿ, ಅದೇ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್
ಡಿ.18ರಂದು ಬೆಳಗ್ಗೆ ಬಾಡ ಗ್ರಾಮದ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ, ಗ್ರಾಮ ಸಭೆ ನಡೆಸಲಿದ್ದಾರೆ. ಗ್ರಾಮ ಸಭೆಯ ಅನುಮೋದನೆ ಪಡೆದು ಗ್ರಾಮದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಂದು ಕೋಟಿ ರು.ಅನುದಾನ ಬಿಡುಗಡೆ ಮಾಡಲಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ಪೌತಿ ಖಾತೆ ಆಂದೋಲನ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.