ವಿಜಯಪುರ(ನ.18): ರಾಜ್ಯದಲ್ಲಿ ಗೋಹತ್ಯೆ ಮಾಡಿಯೇ ತೀರುತ್ತೇವೆ. ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ಪಡೆಯುತ್ತೇವೆ ಎಂದು ಪಶು ಸಂಗೋಪನೆ ಹಾಗೂ ಹಜ್‌ ಮತ್ತು ವಕ್ಫ್ ಖಾತೆ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. 

ವಿಜಯಪುರ ಜಿಲ್ಲೆಯ ನಿಡಗುಂದಿಯ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ 2018-19ನೇ ಸಾಲಿನ ಪಶು ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಈ ಭರವಸೆ ನೀಡಿದರು.

ಕಸಾಯಿಖಾನೆಗೆ ಸಾಗಿಸುವ ಹಸುಗಳಿಗೆ ಇಲ್ಲಿ ರಕ್ಷಣೆ : 700 ಹಸುಗಳಿಗಿಲ್ಲಿ ಆರೈಕೆ

ಕೋವಿಡ್‌-19ನಿಂದಾಗಿ ಗೋಹತ್ಯೆ ಕಾಯ್ದೆ ಜಾರಿ ವಿಳಂಬವಾಗಿದೆ. ಆದರೆ, ನಾವು ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿಯೇ ಸಿದ್ಧ. ಬಸವ ಸಂಪತ್ತು ನಮ್ಮ ಸಂಪತ್ತು. ಅದರ ರಕ್ಷಣೆಯಾಗಬೇಕಿದೆ. ಹಸುಗಳು ಕಸಾಯಿಖಾನೆಗೆ ಹೋಗಬಾರದು. ನಾನು ಮಂತ್ರಿಯಾದ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಗೋ ಶಾಲೆಗಳಿಗೆ ಹೆಚ್ಚಾಗಿ ಭೇಟಿ ನೀಡಿ ವೀಕ್ಷಿಸಿದ್ದೇನೆ. ರೈತರು ಗೋ ಮಾತೆ ರಕ್ಷಣೆಗೆ ಮುಂದಾಗಬೇಕು. ಸರಿಯಾದ ಪಾಲನೆ, ಪೋಷಣೆ ಮಾಡಿದರೆ, ಗೋವಿನಿಂದ ಒಳ್ಳೆಯದಾಗಲಿದೆ ಎಂದರು.

ಸರ್ಕಾರದಿಂದ ಪಶುಗಳ ತುರ್ತು ಚಿಕಿತ್ಸೆಗಾಗಿ ಪಶು ಸಂಜೀವಿನಿ ವಾಹನವನ್ನು ವಿಜಯಪುರ ಜಿಲ್ಲೆಗೆ ಈಗಾಗಲೇ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈ ರೀತಿಯ ಆ್ಯಂಬುಲೆನ್ಸ್‌ ನೀಡಲಾಗುವುದು. ಈ ವಾಹನದಿಂದ ಜಾನುವಾರುಗಳ ಮಾಲೀಕರಿಗೆ ಅನುಕೂಲವಾಗಲಿದೆ. ಜಾನುವಾರುಗಳಿಗೆ ತೊಂದರೆಯಾದಲ್ಲಿ 1962 ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ವಾಹನವು ವೈದ್ಯರ ಜತೆಯಲ್ಲೇ ಸ್ಥಳಕ್ಕೆ ತೆರಳಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.