ಕೋಲಾರ (ಸೆ.15):  ಕೋಲಾರ ನಗರಸಭೆ ಆಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ,ಆಡಳಿತ ಹದಗೆಟ್ಟಿದೆ, ತೆರಿಗೆಯೂ ವಸೂಲಿ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯರೊಬ್ಬರು ಆರೋಪಿಸಿದಾಗ, ಉದ್ಧಟತನದಿಂದ ಮಾತಾಡಿದ ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ವಿರುದ್ಧ ಸಿಡಿಮಿಡಿಗೊಂಡ ಪೌರಾಡಳಿತ ಸಚಿವ ನಾರಾಯಣಗೌಡ ಅಮಾನತು ಮಾಡುವ ಎಚ್ಚರಿಕೆ ನೀಡಿದರು.

ಸೋಮವಾರ ನಡೆದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಕೋಲಾರ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆಗಳ ವ್ಯಾಪ್ತಿಯ ಆಡಳಿತ ಹದಗೆಟ್ಟಿದೆ. ಆಯುಕ್ತರು ಸರ್ಕಾರಕ್ಕೆ ಆದಾಯ ತರುವ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕ್ಷಮೆ ಕೇಳಿದ ಪೌರಾಯುಕ್ತ

ಈ ವೇಳೆ ಅಯುಕ್ತ ಶ್ರೀಕಾಂತ್‌, ಏನ್‌ ಸಾರ್‌ ನನ್ನನ್ನೇ ಟಾರ್ಗೆಟ್‌ ಮಾಡುತ್ತೀರಾ ಎಂದು ಉದ್ಧಟತನ ತೋರಿದರು, ಇದರಿಂದಾಗಿ ಕುಪಿತಗೊಂಡ ಸಚಿವ ನಾರಾಯಣಗೌಡ ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಆರೋಪ ಮಾಡಿದವರು ಒಬ್ಬ ಶಾಸಕರು ಎನ್ನುವುದನ್ನು ನೋಡದೆ ಅವಾಜ್‌ ಹಾಕುತ್ತೀಯಾ. ಒಂದು ಕೆಲಸವನ್ನು ನೆಟ್ಟಗೆ ಮಾಡದೆ ಇರುವುದಕ್ಕೆ ಅವರು ಆರೋಪಿಸುತ್ತಿದ್ದಾರೆ, ಮಾಡಿರುವ ಕೆಲಸಗಳನ್ನು ಹೇಳುವುದು ಬಿಟ್ಟು ಅವಾಜ್‌ ಹಾಕಿದರೆ ಅಮಾನತು ಮಾಡಿ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆಗ ಕ್ಷಮೆ ಕೇಳುವಂತೆ ವೈ.ಎ.ನಾರಾಯಣಸ್ವಾಮಿ ಪಟ್ಟುಹಿಡಿದಾಗ, ಆಯುಕ್ತರು ಕ್ಷಮೆ ಕೇಳಿದರು.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ ...

ನಗರದಲ್ಲಿ ಕಸ, ರಸ್ತೆ ಮತ್ತಿತರರ ಸಮಸ್ಯೆಗಳಿವೆ. ಆದಾಯ ತಂದಿರುವುದು ಶೂನ್ಯವಾಗಿದೆ, ಕೇವಲ ನೀವು ವ್ಯವಹಾರಗಳಿಗೆ ಸೀಮಿತವಾಗಿ ಬಿಟ್ಟಿದ್ದೀರಿ. ನೀವು ಕೊಟ್ಟಿರುವ ವರದಿಯು ಸರಿಯಾಗಿದೆಯೇ. ಜಾಹೀರಾತು ಫಲಕಗಳು, ಪ್ಲೆಕ್ಸ್‌ಗಳು ಇಡೀ ನಗರದಲ್ಲಿ ತುಂಬಿಕೊಂಡಿವೆ, ಅವುಗಳಿಗೆ ಅನುಮತಿಯಿದೆಯೇ, ತೆರಿಗೆ ಕಟ್ಟಿದ್ದಾರೆಯೇ ಎಂದು ಸಚಿವರು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗೆ ಪ್ರಶ್ನೆ:

ಆಗಲೂ ಸಮರ್ಪಕ ಉತ್ತರ ಆಯುಕ್ತರಿಂದ ಬಾರದ ಹಿನ್ನೆಲೆಯಲ್ಲಿ ಮತ್ತೆ ಕಿಡಿಕಾರಿದ ಸಚಿವರು, ಇನ್ನು ಮುಂದೆ ಪ್ಲೆಕ್ಸ್‌ಗಳು ಹಾಕುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಬದಲಾವಣೆ ಆಗಬೇಕು ಇಲ್ಲವಾದಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಇಷ್ಟೆಲ್ಲಾ ಆಗುತ್ತಿದ್ದರೂ ನೀವೇನು ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರನ್ನು ಪ್ರಶ್ನಿಸಿದರು.

ದಾವಣಗೆರೆ, ಚಿತ್ರದುರ್ಗಗಳನ್ನು ಒಮ್ಮೆ ನೋಡಿಕೊಂಡು ಬನ್ನಿ ಅಲ್ಲಿ ಯಾವ ರೀತಿ ವ್ಯವಸ್ಥೆಯಿದೆ, ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂದು ತಿಳಿಯುತ್ತದೆ. ನೀವೂ ಸಹ ಆಗಿಂದಾಗ್ಗೆ ಪ್ರಗತಿಪರಿಶೀಲನೆ ನಡೆಸಿ, ವ್ಯವಸ್ಥೆ ಸರಿಪಡಿಸಿ ಎಂದು ಸಲಹೆ ನೀಡಿದರು.

ಯೋಜನಾ ನಿರ್ದೇಶಕರಿಗೆ ತರಾಟೆ

ಇನ್ನು ಯೋಜನಾ ನಿರ್ದೇಶಕರಂತೂ ಪ್ರವಾಸಿ ಮಂದಿರಗಳಿಗೆ ಸೀಮಿತವಾಗಿಬಿಟ್ಟಿದ್ದಾರೆ. ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿಲ್ಲ. ಹಸಿಕಸ-ಒಣ ಕಸ ವಿಂಗಡಿಸುವ ಬಗ್ಗೆ 4 ವರ್ಷಗಳ ಹಿಂದೆ ಹೇಳಿದ್ದರೂ ಈವರೆಗೆ ಜಾರಿಯಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿ, ಒಂದೇ ಒಂದು ರಸ್ತೆ ಸ್ವಚ್ಛ ಮಾಡಿದ್ದೀರಾ ಎಂಬುದನ್ನು ತೋರಿಸಿದರೆ ನಾನು ರಾಜಕಾರಣ ಬಿಡುವುದಾಗಿ ಸವಾಲು ಹಾಕಿದರು.

ನೀವು ಹೇಳಿದ್ದನ್ನು ಕೇಳಿಕೊಂಡಿರಲು ನಾನೇನು ಕಳ್ಳೆಪುರಿ ತಿನ್ನಲು ಬಂದಿಲ್ಲ, ಪ್ರಗತಿಪರಿಶೀಲನೆಗೆ ಬಂದಿದ್ದೇನೆ ಸಮರ್ಪಕ ಮಾಹಿತಿ ಒದಗಿಸಿ ಎಂದು ಸಚಿವರು ಎಚ್ಚರಿಸಿದರು. ಸಭೆಗೆ ಗೈರು ಹಾಜರಾಗಿದ್ದ ಕೆಜಿಎಫ್‌ ನಗರಸಭೆ ಎಇಇ ಶ್ರೀಧರ್‌ ಅಮಾನತಿಗೂ ಸೂಚನೆ ನೀಡಿದರು.

ಅಧಿಕಾರಿಗಳ ಶಾಮೀಲು:  ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಮಾತನಾಡಿ, ಅನಧಿಕೃತ ಅಂಗಡಿಗಳೆಷ್ಟಿವೆ, ಉಪಗುತ್ತಿಗೆ ನೀಡಿರುವವರ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ ಎನ್ನುವ ಬಗ್ಗೆ ಸಭೆಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕಾನೂನು ಸಲಹೆಗಾರರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೇ ಬದಲಾವಣೆ ಮಾಡಿ ಎಂದು ಡಿಸಿಗೆ ಸೂಚಿಸಿದರು.

ಒಟ್ಟಾರೆ ಸಭೆಯಲ್ಲಿ ನಗರಸಭೆ, ಪುರಸಭೆಗಳ ಆಯುಕ್ತರು, ಯೋಜನಾ ನಿರ್ದೇಶಕರ ಕಾರ್ಯವೈಖರಿಗೆ ತೀರ್ವ ಅಸಮಧಾನ ಕೇಳಿ ಬಂದಿದ್ದು, ಮುಂದಿನ ಸಭೆಯ ಒಳಗಾಗಿ ಆದಾಯ ತರುವ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ,ಸಮರ್ಪಕ ಮಾಹಿತಿ ನೀಡದಿದ್ದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಾಸಕರಾದ ಕೆ.ಶ್ರೀನಿವಾಸಗೌಡ, ರೂಪಾ ಶಶಿಧರ್‌, ಎಂಎಲ್‌ಸಿ ಗೋವಿಂದರಾಜ್‌ ಮತ್ತಿತರರು ಉಪಸ್ಥಿತರಿದ್ದರು.