* ರೈತ ಸಭೆ​ಯಲ್ಲಿ ಸಚಿವ ಮುರು​ಗೇ​ಶ ನಿರಾಣಿ ಭರ​ವ​ಸೆ* ಧಾರವಾಡ ಜಿಲ್ಲೆಗೂ ಉದ್ಯಮ ವಿಸ್ತರಿಸಲು ಮುಂದಾದ ನಿರಾಣಿ* ಕಾರ್ಖಾನೆ ಸ್ಥಾಪನೆಯಿಂದ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆ

ಕಲಘಟಗಿ(ಜೂ.14): ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಭರ​ವಸೆ ನೀಡಿ​ದ್ದಾರೆ. 

ಪಟ್ಟಣದ ಹನ್ನೆರಡು ಮಠದಲ್ಲಿ ಭಾನು​ವಾರ ಸಂಜೆ ತಾಲೂಕಿನ ರೈತರ ಸಭೆಯಲ್ಲಿ ಈ ಭರ​ವಸೆ ನೀಡಿದ ಅವರು, ತಾಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ ಎಂದರು.

ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಕಲಘಟಗಿ ತಾಲೂಕಿನಲ್ಲಿ 17,200 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದೆ. ಆದ್ದ​ರಿಂದ ಒಂದು ತಿಂಗಳು ಸಮಯ ತೆಗೆದುಕೊಂಡು ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ. ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿಪೂಜೆ ಮಾಡಲು ಮುಂದಾಗೋಣ ಎಂದರು.

ಲಾಕ್‌ಡೌನ್‌ ಸಡಿಲಿಕೆ: ಇನ್ನೂ ಇದೆ ಕೊರೋನಾ ಎಚ್ಚರ..!

ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ. ಉದ್ಯೋಗ ಬೇರೆ, ರಾಜಕಾರಣ ಬೇರೆ. ನನಗೆ ಯಾವುದೇ ಜಾತಿಯಿಲ್ಲ. ನನ್ನದು ರೈತರ ಜಾತಿ. ನಿಮಗೆ ತಿಳಿದವರಿಗೆ ಮತ ಹಾಕಿ. ಯಾವುದೇ ಪಕ್ಷ ಭೇದವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸಹ​ಕಾ​ರ ನೀಡಬೇಕು. ಅಂದಾಗ ಅಭಿವೃದ್ಧಿ ಹೊಂದಲು ಸಾಧ್ಯ. ಇಲ್ಲಿನ ಶಾಸಕ ಸಿ.ಎಂ. ನಿಂಬಣ್ಣವರ ಮುಂದಾಳತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡೋಣ. ಈಗಾ​ಗಲೇ ನನ್ನ ಒಡೆತನದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು, ದೇಶದಲ್ಲಿ 2ನೇ ಸ್ಥಾನ ನಮಗೆ ಲಭಿಸಿದೆ ಎಂಬ ಮಾಹಿ​ತಿ​ಯನ್ನು ರೈತ​ರಿಗೆ ನಿರಾಣಿ ಹೇಳಿ​ದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಮಾತ​ನಾ​ಡಿ, ಕಚ್ಚಾವಸ್ತು, ಭೂಮಿ, ನೀರು, ವಾಹನ ಸೌಕರ್ಯ, ಕೆಲಸ ಮಾಡುವ ಪರಿಣಿತ ನೌಕರರು ಇದ್ದರೆ ಮಾತ್ರ ಉದ್ಯಮ ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ. ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಏನು ಸಾಧಿಸಬೇಕು ಎಂಬುದನ್ನು ನಿರಾಣಿ ಅವರು ಉದ್ಯಮದ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಮತಕ್ಷೇತ್ರದ ದೀರ್ಘಕಾಲದ ಬೇಡಿಕೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬುದು ಇದ್ದು, ಈ ಕನಸು ಸಾಕಾರಗೊಳ್ಳಲಿದೆ. ತಾಲೂಕಿನ ರೈತರು ಸಹಕಾರ ಅಗತ್ಯವಾಗಿದೆ. ಇದರಿಂದ ತಾಲೂಕಿನ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಯಾಗುತ್ತದೆ. ನನ್ನ ಅವಧಿ ಮುಗಿಯುವುದರೊಳಗೆ ಮತಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುದು ನನ್ನ ಆಶಯ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಶೆರೆವಾಡ, ನಿಂಗಪ್ಪ ಸುತಗಟ್ಟಿ, ಗೀತಾ ಮರಲಿಂಗಣ್ಣವರ, ಚಂದ್ರಗೌಡ ಪಾಟೀಲ, ನರೇಶ್‌ ಮಲ್ನಾಡ, ಸೋಮು ಕೂಪ್ಪದ, ಮಹಾಂತೇಶ ಹೆಂಬ್ಲಿ, ಎಸ್‌.ಎಂ. ಚಿಕ್ಕಣ್ಣವರ, ವಿ.ಎಸ್‌. ಪಾಟೀಲ್‌ ಇದ್ದರು.