* ಸಂಜೆ 7ರಿಂದ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ* ಮದ್ಯ ಖರೀದಿಸಲು ಮಧ್ಯಾಹ್ನ 2ರ ವರೆಗೆ, ದಿನವಿಡಿ ಹೋಟೆಲ್‌ ಪಾರ್ಸೆಲ್‌ಗೆ ಅವಕಾಶ* ಮದುವೆ, ಸಾಮೂಹಿಕ ಕಾರ್ಯಕ್ರಮಗಳಿಗೆ ಬ್ರೇಕ್‌ 

ಧಾರವಾಡ(ಜೂ.14):ಕೋವಿಡ್‌ ಹಿನ್ನೆಲೆ ಜಿಲ್ಲೆಯ ಜನತೆಯು ಕಳೆದ ಏಪ್ರಿಲ್‌ ಕೊನೆಯ ವಾರದಿಂದ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಹಾಗೂ ಸಂಪೂರ್ಣ ಲಾಕ್‌ಡೌನ್‌ ಮುಗಿಸಿ ಇದೀಗ ಕೋವಿಡ್‌ ಪಾಸಿಟಿವಿಟಿ ದರ ಇಳಿಕೆಯಾದ ಹಿನ್ನೆಲೆ ಜೂ. 14ರಿಂದ ತುಸು ಮಟ್ಟಿಗೆ ರಿಲ್ಯಾಕ್ಸ್‌ ಆಗುತ್ತಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲೂ ಸೋಮವಾರದಿಂದ ಅನ್‌ಲಾಕ್‌ ಮಾಡುತ್ತಿದ್ದು, ಜಿಲ್ಲಾಧಿಕಾರಿ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಇಲ್ಲಿಯವರೆಗೆ ಬೆಳಗ್ಗೆ 6 ರಿಂದ 10ರ ವರೆಗೆ ಮಾತ್ರ ತರಕಾರಿ, ಕಿರಾಣಿ, ಹಾಲು, ಹಣ್ಣು, ಮಾಂಸ ಮಾರಾಟ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿತ್ತು. ಆದರೆ, ಸೋಮವಾರದಿಂದ ಮುಂಜಾನೆ 6ರಿಂದ ಮಧ್ಯಾಹ್ನ 2ರ ವರೆಗೆ ಈ ಎಲ್ಲ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಕಲ್ಪಿಸಿದ್ದು, ಈ ಆದೇಶ ಜೂ. 21ರ ವರೆಗೆ ಜಾರಿಯಲ್ಲಿರುತ್ತದೆ.

ಜಿಲ್ಲೆಯ ಪ್ರತಿಯೊಂದು ಉತ್ಪಾದನಾ ಘಟಕ, ಕೈಗಾರಿಕಾ ಘಟಕಗಳು ಶೇ. 50ರಷ್ಟು ನೌಕರರ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದ್ದು, ಅದೇ ರೀತಿ ಗಾರ್ಮೆಂಟ್ಸ್‌ ಉತ್ಪಾದನಾ ಘಟಕಗಳು ಶೇ. 30ರಷ್ಟು ನೌಕರರ ಮೇಲೆ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ, ಮದ್ಯ ಮಾರಾಟ ಅಂಗಡಿಗಳೂ ಮಧ್ಯಾಹ್ನ 2ರ ವರೆಗೆ ಪಾರ್ಸಲ್‌ ಸೇವೆ ನೀಡಬಹುದು. ಆದರೆ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಮಾತ್ರ ಬಾಗಿಲು ತೆರೆಯುವಂತಿಲ್ಲ. ಅಲ್ಲದೇ ಹೋಂ ಡಿಲೇವರಿ ನೀಡುವ ಹೊಟೇಲ್‌ಗಳು ದಿನನಿತ್ಯವೂ ಕರ್ತವ್ಯ ನಿರ್ವಹಿಸಬಹುದು ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.

ಬಿಜೆಪಿಗೆ ಕಿಂಚಿತ್ತೂ ಬಡವರ ಕಾಳಜಿಯಿಲ್ಲ: ಬಿ.ಕೆ. ಹರಿಪ್ರಸಾದ್‌

ನಿರ್ಮಾಣ ಕಾಮಗಾರಿಗಳು ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದ್ದು, ಉದ್ಯಾನಗಳನ್ನು ಮುಂಜಾನೆ 5ರಿಂದ 10ರ ವರೆಗೆ ತೆರೆದು ಕೇವಲ ವಾಕಿಂಗ್‌ ಮತ್ತು ಜಾಗಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಆಟದ ಮೈದಾನಗಳಿಗೆ ಅವಕಾಶವಿಲ್ಲ. ಜತೆಗೆ ಯಾವುದೇ ಸಮೂಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿಲ್ಲ. ಟ್ಯಾಕ್ಸಿ ಮತ್ತು ಆಟೋ ಚಾಲಕರು ಪ್ರತಿ ಸೇವೆ ಒದಗಿಸುವ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಯಕರನ್ನು ಕೂಡಿಸಿಕೊಂಡು ಹೋಗಬಹುದಾಗಿದೆ. ಅಲ್ಲದೇ ಸರ್ಕಾರಿ ಕಚೇರಿಗಳು ಶೇ. 50ರಷ್ಟು ಸಿಬ್ಬಂದಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸಬಹುದು. ಒಟ್ಟಾರೆ ಜಿಲ್ಲೆಯಲ್ಲಿ ಶೇ. 5ರ ವರೆಗೆ ಪಾಸಿಟಿವಿಟಿ ದರ ಬಂದಿದ್ದು ಸಮಾಧಾನದ ಸಂಗತಿ. ಸಾವಿರದ ಗಡಿಯಲ್ಲಿದ್ದ ಪಾಸಿಟಿವ್‌ ಪ್ರಕರಣಗಳು ಬರೀ 250ಕ್ಕೆ ಇಳಿಕೆಯಾಗಿದ್ದು, ಲಾಕ್‌ಡೌನ್‌ ಪ್ರತಿಫಲವೇ ಸರಿ.

ವೀಕೆಂಡ್‌ ಕರ್ಫ್ಯೂ ಇರುತ್ತೆ

ಕೋವಿಡ್‌ ತಡೆಗಟ್ಟಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಬರುವ ಜೂ. 21ರ ಮುಂಜಾನೆ 6ರ ವರೆಗೆ ಜಿಲ್ಲಾದ್ಯಂತ ಯಾವುದೇ ಮದುವೆ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿಲ್ಲ. ಅಲ್ಲದೇ ಪ್ರತಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಮುಂಜಾನೆ 5ರ ವರೆಗೆ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಕೋವಿಡ್‌ ಕಡಿಮೆಯಾಗಿದೆ, ಅನ್‌ಲಾಕ್‌ ಮಾಡಲಾಗಿದೆ ಎಂದು ಜಿಲ್ಲೆಯ ಜನರು ಬೇಕಾಬಿಟ್ಟಿಅಡ್ಡಾಡುವಂತಿಲ್ಲ. ಕೋವಿಡ್‌ ಸಂಪೂರ್ಣ ಕಡಿಮೆಯಾಗಿ ಒಂದಂಕಿ ಪ್ರಕರಣಗಳು ದಾಖಲಾದಾಗ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ನಿಯಮ ಸಡಿಲಗೊಳಿಸಲಾಗಿದೆ ಎಂದು ಜನರು ಗುಂಪಾಗಿ ಅಡ್ಡಾಡುವುದು ಬೇಡ, ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಮಾತ್ರ ಕೋವಿಡ್‌ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.