Asianet Suvarna News

ಕಲಬುರಗಿಯಲ್ಲಿ 2ನೇ ಅಲೆ ಎದುರಿಸಿದ ಮಾದರಿಯಲ್ಲೇ 3ನೇ ಅಲೆಗೆ ತುರ್ತು ಕ್ರಮ

* 2ನೇ ಅಲೆ ಎದುರಿಸಿದ ಮಾದರಿಯಲ್ಲೇ 3ನೇ ಅಲೆ ತಪ್ಪಿಸಲು ತುರ್ತು ಕ್ರಮ
* ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ಮೀಸಲು
* ಪೋಷಣಾ ಪುನರ್ವಸತಿ ಕೇಂದ್ರ ಸ್ಥಾಪನೆ
* ಟೆಲಿಕನ್ಸಲ್ಟೇಷನ್ ಮೂಲಕ ಮಕ್ಕಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ
* ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ರೀಫಿಲಿಂಗ್ ಸೌಲಭ್ಯ ವ್ಯವಸ್ಥೆ

Minister Murugesh Nirani Meeting In kalaburagi Over Covid Wave 3 rbj
Author
Bengaluru, First Published Jun 22, 2021, 6:19 PM IST
  • Facebook
  • Twitter
  • Whatsapp

ಕಲಬುರಗಿ, (ಜೂನ್.22): ರಾಜ್ಯದಲ್ಲಿ 3ನೇ ಕೋವಿಡ್-19 ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದೆಂಬ ತಜ್ಞರ ಸಲಹೆಯಂತೆ ಜಿಲ್ಲಾಡಳಿತವು ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಂಭಾವ್ಯ ದಾಳಿಯನ್ನು ತಪ್ಪಿಸುವಂತೆ ಗಣಿ ಮತ್ತು ಭೂ ವಿಜ್ಞಾನ  ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಸೂಚಿಸಿದರು. 

ಮಂಗಳವಾರ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ -19 2ನೇ ಅಲೆಯನ್ನು ಯಾವ ರೀತಿ ಯಶಸ್ವಿಯಾಗಿ ನಿಭಾಯಿಸಲಾಯಿತೊ ಅದೇ ಮಾದರಿಯಲ್ಲೂ 3ನೇ ಅಲೆಯನ್ನು  ಎದುರಿಸಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. 

ಕೋವಿಡ್ 3ನೇ ಅಲೆ: ಉನ್ನತ ಮಟ್ಟದ ತಜ್ಞ ಸಮಿತಿ ಸಭೆಯ ಮುಖ್ಯಾಂಶಗಳು

ಮೂರನೇ ಕೋವಿಡ್ ಅಲೆಯ  ಕಾರ್ಯಪಡೆ ಅಧ್ಯಕ್ಷರಾದ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿಯು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ. ಇದನ್ನು ತಡೆಗಟ್ಟುವುದು ಜಿಲ್ಲಾಡಳಿತದ ಮೊದಲ ಕರ್ತವ್ಯ ಎಂದು ಸಲಹೆ ಮಾಡಿದರು. 

ಮಕ್ಕಳಿಗೆ ಸೋಂಕು ಹೆಚ್ಚು ತಗಲಬಹುದೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಹೀಗಾಗಿ ತಕ್ಷಣವೇ  ಜಿಲ್ಲಾದ್ಯಂತ ಪ್ರತ್ಯೇಕ ಮಕ್ಕಳ ವಿಭಾಗ ಸ್ಥಾಪನೆ, ಆಸ್ಪತ್ರೆಯಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕೆಂದು ಹೇಳಿದರು. 

ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ರೀಫಿಲಿಂಗ್ ಸೌಲಭ್ಯ, 50  ಎಲ್‍ಪಿಎಂ ಲಿಕ್ವಿಡ್ ಆಕ್ಸಿಜನ್ ಜನರೇಟರ್ ಘಟಕಗಳನ್ನು ಸ್ಥಾಪಿಸಲು ಮುಂದಾಗಬೇಕು, 50 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳು ಜೊತೆಗೆ ಅಗತ್ಯ ಜಂಬು ಸಿಲಿಂಡರ್‌ ಗಳನ್ನು ಇಟ್ಟುಕೊಳ್ಳಬೇಕೆಂದು ಅಧಿಕಾರಿಗಲಿಗೆ ನಿರ್ದೇಶಿಸಿದರು. 

ಹೆಚ್ಚಿನ ಭಾಗದಲ್ಲಿ ಮಕ್ಕಳಿಗೆ ಸೋಂಕು ತಗಲುಗುವ ಮಕ್ಕಳ ಚಿಕಿತ್ಸೆಗೆ ಬೆಡ್‍ಗಳ ಸಂಖ್ಯೆ ಹೆಚ್ಚಳ ಮಾಡುವುದು,  ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಸ್‍ಎನ್‍ಸಿಯು ಘಟಕವನ್ನು ಸಂಪೂರ್ಣವಾಗಿ ಮಕ್ಕಳಿಗೆ ಮೀಸಲಿಡಬೇಕೆಂದು ತಾಕೀತು ಮಾಡಿದರು. 

ಅಗತ್ಯಕ್ಕೆ ಅನುಗುಣವಾಗಿ 500 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗಳನ್ನುಬಳಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮುಂದಿನ ಎರಡು ವಾರದೊಳಗೆ  ಪೋಷಣಾ ಪುನರ್ವಸತಿ ಕೇಂದ್ರ ಸ್ಥಾಪನೆ, ಟೆಲಿಕನ್ಸಲ್ಟೇಷನ್ ಸೇವೆ, ತಾಲ್ಲೂಕು ಆಸ್ಪತ್ರೆಗಳಿಗೆ ಜಿಲ್ಲಾಸ್ಪತ್ರೆ ಮತ್ತು  ಇಎಸ್‍ಐ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರನ್ನು ನೇಮಿಸುವುದು, ಅಗತ್ಯವಿರುವ ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೆ ಪಾಲನೆ ಮಾಡಬೇಕು. ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ, ಕರಪತ್ರಘಿ ಸೇರಿದಂತೆ ಬೇರೆ ಬೇರೆ ವಿಭಾಗದಿಂದಲೂ ಸಾರ್ವಜನಿಕರಲ್ಲಿ ಜನಜಾಗೃತಿಯನ್ನು ಮೂಡಿಸುವಂತೆಯೂ ಸಚಿವರು ಕಿವಿಮಾತು ಹೇಳಿದರು. 

ಜಿಲ್ಲಾಧಿಕಾರಿ  ವಿ.ವಿ.ಜೋಸ್ನಾ, ನಗರ ಪೊಲೀಸ್ ಆಯುಕ್ತ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯನ್ ಜಾರ್ಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲಿಶಾ ಸಾಸಿ, ಮಹಾನಗರ ಪಾಲಿಕೆ ಆಯುಕ್ತ ಲೋಕಲ್‍ಡೇ ಸ್ನೇಹಲ್ ಸುಧಾಕರ್, ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕವಿತಾ ಪಾಟೀಲ್,  ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಇಎಸ್‍ಐಡಿನ್ ಡಾ.ಇವಾನೊಲೊಗೊ ಸೇರಿದಂತೆ ಮತ್ತಿತರ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ನಿರಾಣಿ ತಿಳಿಸಿದರು. 

 7 ಆಸ್ಪತ್ರೆಗಳು ಸಿದ್ದ 
ಮಕ್ಕಳಿಗೆ ಉಂಟಾಗಬಹುದಾದ 3ನೇ ಅಲೆ ಕೋವಿಡ್ ಅಲೆಯನ್ನು ತಪ್ಪಿಸಲು ಕಲಬುರಗಿ ಜಿಲ್ಲಾಡಳಿತ ನಗರದಲ್ಲಿ ತಾತ್ಕಾಲಿಕವಾಗಿ 7 ಮಕ್ಕಳ ಆಸ್ಪತ್ರೆಗಳನ್ನು ಗುರುತಿಸಿದೆ. ನಗರದಲ್ಲಿರುವ 15 ಆಸ್ಪತ್ರೆಗಳ ಪೈಕಿ ಈಗಾಗಲೇ 7 ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ 2ರಿಂದ 3 ಹೆಚ್ಚುವರಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ವಾಣಿಶ್ರೀ ಪಾಟೀಲ್ ಅವರ ಸಲಹೆ ಮೇರೆಗೆ ಜಿಲ್ಲೆಯಾದ್ಯಂತ 90 ಪೀಡಿಯಾಟ್ರಿಶಿಯನ್‍ಗಳನ್ನು ಗುರುತಿಸಲಾಗಿದೆ. ಈಗಾಗಲೇ ಇವರೆಲ್ಲರಿಗೂ ವೆಬಿನಾರ್ ಮೂಲಕ ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸಲಹೆ ನೀಡಲಾಗಿದೆ.

 ಸಹಾಯವಾಣಿ ಆರಂಭ 
 ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆಗಾಗಿ ಜಿಲ್ಲಾಡಳಿತ  144499 ಟೋಲ್ ಫ್ರೀ ಸಹಾಯವಾಣಿಯನ್ನು ಪ್ರಾರಂಭಿಸಿದೆ.
ಮಕ್ಕಳಲ್ಲಿ ವಾಂತಿ,ಬೇಧಿ,ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಲಕ್ಷಣ ಕಂಡುಬಂದರೆ  ತಕ್ಷಣವೇ ಪೋಷಕರು ಈ ಸಂಖ್ಯೆಗೆ ಕರೆ ಮಾಡಿದರೆ ನುರಿತ ವೈದ್ಯರು ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. 

ಕೋವಿಡ್ ಮೊದಲನೇ ಅಲೆಯಲ್ಲಿ  22,007 ಸೋಂಕಿತರ ಪೈಕಿ 3149 ಹಾಗೂ 2ನೇ ಅಲೆಯಲ್ಲಿ 31,226 ಪೈಕಿ 5019 ಮಕ್ಕಳು ಸೋಂಕಿಗೆ ಸಿಲುಕಿದ್ದರು. 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ  ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾದ್ಯಂತ ಸಹಾಯವಾಣಿಯನ್ನು ಆರಂಭಿಸಲಾಗಿದೆ. 

Follow Us:
Download App:
  • android
  • ios