ಬೆಂಗಳೂರು(ಫೆ.06): ​ರಾಜ್ಯದ ಪುರಸಭೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಟರ್‌ಮ್ಯಾನ್‌ ಮತ್ತು ವಾಲ್‌ಮ್ಯಾನ್‌ಗಳಿಗೆ 2021ರ ಮಾರ್ಚ್‌ವರೆಗೆ ವೇತನ ಬಿಡುಗಡೆ ಮಾಡಲಾಗಿದೆ ಎಂಬ ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಜರುಗಿತು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ತುಕಾರಾಂ ಕೇಳಿದ ಪ್ರಶ್ನೆಗೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌, ಎಸ್‌ಎಫ್‌ಸಿ ವೇತನ ನಿಧಿಯಡಿ ಮಾರ್ಚ್‌ 2021ರವರೆಗೆ ಈಗಾಗಲೇ ವೇತನ ಬಿಡುಗಡೆ ಮಾಡಲಾಗಿದೆ ಎಂದು ಉತ್ತರ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತುಕಾರಾಂ, ಮಾರ್ಚ್‌ ತಿಂಗಳು ಇನ್ನೂ ಬಂದೇ ಇಲ್ಲ. ಆಗಲೇ ವೇತನ ಹೇಗೆ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜವಾಗಲಿಲ್ಲ. ಉತ್ತರವನ್ನು ಪರಿಶೀಲನೆ ನಡೆಸಲಾಗುವುದು. ತಪ್ಪಾಗಿದ್ದರೆ ಸರಿಪಡಿಸುತ್ತೇವೆ ಎಂದು ಸಚಿವರು ಹೇಳಿದರು.

ಈ ಖಾತೆ ನಾನೇನು ಮಾಡಲಿ? ಬೇಡವೇ ಬೇಡ ಎಂದ ಸಚಿವ

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಂ.ಟಿ.ಬಿ.ನಾಗರಾಜ್‌ ನೆರವಿಗೆ ಧಾವಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದರು. ನಂತರ ನೆರವಿಗೆ ಬಂದ ಬೊಮ್ಮಾಯಿ ಅವರು, ಭಾಷೆಯಲ್ಲಿ ವ್ಯತ್ಯಾಸವಾಗಿದೆ. ಸರ್ಕಾರದ ಮಟ್ಟದಲ್ಲಿ ಬಿಡುಗಡೆಯಾಗಿರುತ್ತದೆ. ಸ್ಥಳೀಯ ಮಟ್ಟದಲ್ಲಿ ಬಿಡುಗಡೆಯಾಗುವುದಿಲ್ಲ. ಹೀಗಾಗಿ ಆ ರೀತಿಯಾಗಿ ಉತ್ತರ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.