ಮಗನಿಗೆ ರಾಜಕೀಯ ಬಳುವಳಿ ನೀಡಲು ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್‌ ಯಡಿಯೂರಪ್ಪ ಅಭಿಮಾನೋತ್ಸವ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗ (ಮೇ.09): ಇತ್ತೀಚಿನ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಮಗನಿಗೆ ರಾಜಕೀಯ ಬಳುವಳಿ ನೀಡಲು ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

Add Asianetnews Kannada as a Preferred SourcegooglePreferred

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಎಷ್ಟು ಹೋರಾಟ ಮಾಡಿದ್ದಾರೆ ಎಂದು ನನ್ನ ಬಳಿ ಲೆಕ್ಕ ಇಲ್ಲ. ಜಿಲ್ಲೆಯಲ್ಲಿ ಜೆ.ಎಚ್.ಪಟೇಲರು ಹೋರಾಟ ಮಾಡಿದ್ದರು. ಬಂಗಾರಪ್ಪ ಅವರ ಹೋರಾಟವನ್ನು ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಯಡಿಯೂರಪ್ಪನವರು ರೈತ ಪರ ಹೋರಾಟ ಮಾಡಿದ್ದಾರೆ ನಿಜ. ಇದನ್ನು ಪಿಕ್ಚರ್ ಮಾಡಿ ತೋರಿಸಲಿ, ಇದನ್ನು ನಾನು ಇಲ್ಲ ಎನ್ನುತ್ತಿಲ್ಲ. ಬೇರೆಯವರಿಗೆ ಹೋಲಿಸಿದರೆ ಯಡಿಯೂರಪ್ಪರ ಹೋರಾಟ ಲೆಕ್ಕಕ್ಕೆ ಇರಲ್ಲ. ಹಾವೇರಿಯಲ್ಲಿ ಗೊಬ್ಬರ ಕೇಳಿದವರಿಗೆ ಗುಂಡಿಟ್ಟು ಹೊಡೆದರು. ಅದಕ್ಕೂ, ಇವರು ಸನ್ಮಾನ ಮಾಡಬೇಕಲ್ಲ ಎಂದು ಕುಟುಕಿದರು.

ಯಡಿಯೂರಪ್ಪನವರ ಹಿರಿತನದ ಬಗ್ಗೆ ನನಗೆ ಗೌರವವಿದೆ. ನಾನೂ ಅನೇಕ ಹೋರಾಟಗಳನ್ನು ಮಾಡಿಯೇ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ. ನಮ್ಮ ತಂದೆ ಬಂಗಾರಪ್ಪನವರೂ ಮುಖ್ಯಮಂತ್ರಿಗಳಾಗಿ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅಂತಹ ಒಂದಾದರೂ ಯೋಜನೆಗಳನ್ನು ಯಡಿಯೂರಪ್ಪ ಜಾರಿಗೆ ತಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ನಕಲಿ ಛೋಟಾ ಸಹಿಯಿಂದಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಜೈಲಿಗೆ ಹೋಗಬೇಕಾಯಿತು. ಅದು ದುರ್ದೈವದ ಸಂಗತಿ. ಅವರಿಂದ ಜನ ಯಾವ ಪಾಠ ಕಲಿಯಲು ಸಾಧ್ಯ? ಎಲ್ಲಿ ಮಗನ ರಾಜ್ಯಾಧ್ಯಕ್ಷ ಪಟ್ಟ ಕೈ ತಪ್ಪಿ ಹೋಗುತ್ತೋ ಎಂಬ ಭಯದಿಂದ ಅಭಿಮಾನೋತ್ಸವ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಜನತೆ ಅದನ್ನು ತಿಳಿಯದಷ್ಟು ಮೂರ್ಖರಲ್ಲ ಎಂದು ತಿರುಗೇಟು ನೀಡಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಫ್ಲಾಪ್ ಆಗಿದ್ದಾರೆ. ಬಿಜೆಪಿಯಲ್ಲಿ ಐದಾರು ಬಾಗಿಲುಗಳು ಇವೆ. ಅದರಲ್ಲಿ ಒಂದು ಬಾಗಿಲು ಮಾಡಿ ವಿಜಯೇಂದ್ರಗೆ ಬಳುವಳಿ ನೀಡಲು ಯಡಿಯೂರಪ್ಪ ಹೊರಟಿದ್ದಾರೆ. ಯಡಿಯೂರಪ್ಪನವರನ್ನು ಭ್ರಷ್ಟಾಚಾರಿ ಎಂದು ಇದೇ ಅಮಿತ್ ಷಾ ಹೇಳಿದ್ದಾರೆ. ಇದು ಅಪ್ಪಟ ರಾಜಕೀಯ ಕಾರ್ಯಕ್ರಮ ಎಂದರು.

ದುರ್ದೈವದ ಸಂಗತಿ

ಬೇಸೂರು ಅಣು ಸ್ಥಾವರ ಸ್ಥಾಪನೆಗೆ ತಮ್ಮ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಈ ಮಾರಕ ಯೋಜನೆಯನ್ನು ಒಪ್ಪುವುದಿಲ್ಲ ಎಂದ ಅವರು, ಕೇಂದ್ರ ಸರ್ಕಾರದವರು ನಮ್ಮ ಸರ್ಕಾರವನ್ನು ಕೇಳದೆ ಪರಿಸರ ಮಾರಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದು ದುರ್ದೈವದ ಸಂಗತಿ. ಈಗ ಬೇಸೂರು ಅಣುಸ್ಥಾವರದ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ. ಮೊದಲು ಕೇಂದ್ರ ಸರ್ಕಾರ ಈ ಭಾಗದ ಅರಣ್ಯವಾಸಿಗಳಿಗೆ ಭೂ ಹಕ್ಕು ನೀಡುವ ಕೆಲಸ ಮಾಡಲಿ. ಅದನ್ನು ಬಿಟ್ಟು ತನಗೆ ಬೇಕಾದ ಯೋಜನೆ ಜಾರಿಗೆ ತರುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು.

ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಅವರು, ಅದನ್ನು ನಿರ್ಮಿಸಿದ್ದು ರಾಜ್ಯ ಸರ್ಕಾರದ ದುಡ್ಡಿನಿಂದ. ರಾಜ್ಯ ಸರ್ಕಾರದಿಂದ ಅದರ ನಿರ್ವಹಣೆ ಸಾಧ್ಯವಾಗದಿದ್ದರೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಿ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ನಿಲ್ದಾಣ ನಿರ್ಮಾಣವಾಗಿದ್ದು ಅವರಪ್ಪನ ದುಡ್ಡಿನಿಂದಲ್ಲ ಎಂದು ಗುಡುಗಿದ ಸಚಿವರು, ಇನ್ನೆರಡು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಆಗುತ್ತದೆ. ಆಗ ಎಲ್ಲ ಸರಿಯಾಗುತ್ತದೆ ಎಂದರು.