ಶಿವಮೊಗ್ಗ(ಏ.16): ಕೊರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡುವ ವಿಚಾರವಾಗಿ ಚುನಾವಣಾ ಆಯೋಗ ನಿರ್ಧಾರ ಮಾಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮುಂದಿನ ಜನ್ಮ ಬಂದರೂ ಬುದ್ಧಿ ಬರಲ್ಲ. ಸೋನಿಯಾರನ್ನು ಮೆಚ್ಚಿಸಲೆಂದೇ ಇವರು ಮಾತನಾಡುತ್ತಾರೆಯೇ ವಿನಃ ಸ್ವಂತ ಬುದ್ಧಿಯಿಂದಲ್ಲ ಎಂದು ಛೇಡಿಸಿದ್ದಾರೆ.

ರಾಜ್ಯಪಾಲರಿಗೆ ಬರೆದ ಪತ್ರ ಹೇಗೆ ಹೊರಬಂತೋ ಗೊತ್ತಿಲ್ಲ: ಈಶ್ವರಪ್ಪ

ಕೋವಿಡ್‌ ಬಗ್ಗೆ ಸರ್ವಪಕ್ಷ ಸಭೆ ಕರೆದರೆ, ಯಾಕೆ ಈ ಸಭೆ ಕರೆಯುತ್ತೀರಿ ಎಂದು ಡಿ.ಕೆ.ಶಿವಕುಮಾರ್‌ ಕೇಳುತ್ತಾರೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಸರ್ವಪಕ್ಷ ಸಭೆ ಕರೆಯುವುದು ವ್ಯವಸ್ಥೆಯ, ಆಡಳಿತದ ಒಂದು ಭಾಗ. ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡುವುದನ್ನು ಬಿಟ್ಟು ರಾಷ್ಟ್ರಪತಿ ಆಳ್ವಿಕೆ ತನ್ನಿ, ವಿಧಾನಸಭೆ ವಿಸರ್ಜಿಸಿ ಎನ್ನುತ್ತಾರೆ. ಒಟ್ಟಾರೆ ಅವರಿಗೆ ಅರ್ಜೆಂಟಾಗಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.