Asianet Suvarna News Asianet Suvarna News

ಸಿಎಂ ಆಗುವ ಭ್ರಮೆಯಲ್ಲಿ ಸಿದ್ದರಾಮಯ್ಯ: ಈಶ್ವರಪ್ಪ

ಸಿದ್ದರಾಮಯ್ಯಗೆ ಸಿಎಂ ಆಗುವ ಆತುರ| ಬಿಎಸ್‌ವೈ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಸಿದ್ದು ಸಿಎಂ ಆಗಲ್ಲ| ನಾನು ರಾಜ್ಯಪಾಲರಿಗೆ ಬರೆದ ಪತ್ರ ಮುಂದಿರಿಸಿ ರಾಜೀನಾಮೆ ಕೇಳುತ್ತಿದ್ದಾರೆ| ಸಹಿ ಸಂಗ್ರಹ, ರಾಜೀನಾಮೆ, ಖಾತೆ ಬದಲಾವಣೆ ಮುಗಿದ ಅಧ್ಯಾಯ: ಈಶ್ವರಪ್ಪ| 

Minister KS Eshwarappa Talks Over Former CM Siddaramaiah grg
Author
Bengaluru, First Published Apr 4, 2021, 1:07 PM IST

ಶಿವಮೊಗ್ಗ(ಏ.04): ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ಕೊಟ್ಟರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದೆಂಬ ಭ್ರಮೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿದ್ದಾರೆ. ಆದರೆ, ಯಾವ ಕಾರಣಕ್ಕೂ ಯಡಿಯೂರಪ್ಪನವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ನನ್ನ ಇಲಾಖೆಗೆ ಸಂಬಂಧಿಸಿ ಪತ್ರ ಬರೆದ ವಿಚಾರವನ್ನಿಟ್ಟುಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ತುರ್ತಾಗಿ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಆದರೆ, ಜನ ಅವರನ್ನು ಈಗಾಗಲೇ ತಿರಸ್ಕಾರ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಅವರನ್ನು ಸೋಲಿಸಿದ್ದಾರೆ. ಸಿದ್ದರಾಮಯ್ಯ ಇಂಥ ಭ್ರಮೆಯಲ್ಲಿ ಇರುವುದು ಬೇಡ ಎಂದು ವ್ಯಂಗ್ಯವಾಡಿದ್ದಾರೆ.

ಪತ್ರ ವಿಚಾರ ಶೀಘ್ರ ಇತ್ಯರ್ಥ: 

ತಮ್ಮ ವಿರುದ್ಧ ಸಹಿ ಸಂಗ್ರಹ, ರಾಜೀನಾಮೆ, ಖಾತೆ ಬದಲಾವಣೆ ಎಲ್ಲವೂ ಮುಗಿದ ವಿಚಾರ. ಈ ಬಗ್ಗೆ ಮೊನ್ನೆ ಸಾಕಷ್ಟುಚರ್ಚೆಯಾಗಿದೆ. ನಾನು ಇದಕ್ಕೆ ಜಗ್ಗಲ್ಲ, ಬಗ್ಗಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ ಮೇಲೆ ಎಲ್ಲರೂ ಸುಮ್ಮನಾಗಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ಆದಷ್ಟುಶೀರ್ಘ ಮುಕ್ತಾಯ ಕಾಣಲಿದೆ ಎಂದು ಈಶ್ವರಪ್ಪ ಹೇಳಿದರು.

'ಇನ್ನಾರು ತಿಂಗಳಲ್ಲಿ ಸಿಎಂ ಆಗಲು ಈಶ್ವರಪ್ಪ ಲೆಟರ್ : ಮುಂದಿನ ಚುನಾವಣೆಯಲ್ಲಿಲ್ಲ ಟಿಕೆಟ್'

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದ ಲೋಪ ಕಂಡುಬಂದ ಕೂಡಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರು ಸೇರಿ ರಾಜ್ಯಪಾಲರು ಹಾಗೂ ಆರ್ಥಿಕ ಇಲಾಖೆ ಗಮನಕ್ಕೂ ತಂದಿದ್ದೇನೆ. ಆದಷ್ಟುಶೀರ್ಘ ಸಮಸ್ಯೆ ಪರಿಹರಿಸುವ ಭರವಸೆಯನ್ನು ನಮ್ಮ ನಾಯಕರು ನೀಡಿದ್ದಾರೆ. ಈ ಪತ್ರದ ವಿಷಯ ಪ್ರತಿಪಕ್ಷಗಳಿಗೆ ಆಹಾರವಾಗಲು ಬಿಡಲ್ಲ ಎಂದರು.

ಆಡಳಿತಾತ್ಮಕವಾಗಿ ಉಂಟಾಗಿರುವ ವ್ಯತ್ಯಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ಇದರಲ್ಲಿ ಪ್ರತಿಪಕ್ಷಗಳಿಗೆ ಯಾವ ಹುಳುಕು, ಬೆಳಕು ಸಿಗುವುದಿಲ್ಲ. ಯಡಿಯೂರಪ್ಪ ನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ಪ್ರತಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ಮಾತನಾಡುವ ಅವಕಾಶವೇ ಇಲ್ಲವಾಗಿದೆ. ಹೀಗಾಗಿ ಅವರ ಕಣ್ಣ ಮುಂದೆ ರಾಜ್ಯಪಾಲರ ಬಳಿ ಹೋಗಿರುವ ಪತ್ರ ಇದೆ. ಅದನ್ನು ಮುಂದಿಟ್ಟುಕೊಂಡು ರಾಜಿನಾಮೆಗೆ ಒತ್ತಾಯಿಸುತ್ತ ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 

Follow Us:
Download App:
  • android
  • ios