'ಇನ್ನಾರು ತಿಂಗಳಲ್ಲಿ ಸಿಎಂ ಆಗಲು ಈಶ್ವರಪ್ಪ ಲೆಟರ್ : ಮುಂದಿನ ಚುನಾವಣೆಯಲ್ಲಿಲ್ಲ ಟಿಕೆಟ್'

ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ಖಚಿತಪಡಿಸಿಕೊಂಡು ಇನ್ನಾರು ತಿಂಗಳಲ್ಲಿ ಸಿಎಂ ಆಗುವ ಸಲುವಾಗಿ ಈಶ್ವರಪ್ಪ  ಲೆಟರ್ ಬರೆದಿದ್ದಾರೆನ್ನಲಾಗಿದೆ. 

KPCC Leader  Prasanna Kumar Slams KS Eshwarappa snr

ಶಿವಮೊಗ್ಗ (ಏ.03):  ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂದು ಖಾತರಿಗೊಂಡ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಈ ಅವಧಿಯಲ್ಲಿ ಆರು ತಿಂಗಳಾದರೂ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನಕುಮಾರ್‌ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ರೀತಿ ದೂರು ನೀಡಿದ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಮುಖ್ಯಮಂತ್ರಿಗಳ ವಜಾಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಸ್ವತಃ ಯಡಿಯೂರಪ್ಪನವರೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆಯಾಗಿದ್ದರೂ, ಬಿಜೆಪಿ ಕೊನೆಯವರೆಗೂ ಈಶ್ವರಪ್ಪ ಅವರ ಹೆಸರನ್ನು ಘೋಷಣೆ ಮಾಡಿರಲಿಲ್ಲ. ಕೈ ಬಿಡುವುದು ಖಚಿತ ಆಗುತ್ತಿದ್ದಂತೆ ಭಾರೀ ಒತ್ತಡ ತಂದು ಟಿಕೆಟ್‌ ತಂದರು. ತಮಗೆ ಟಿಕೆಟ್‌ ವಿಳಂಬವಾಗಲು ಯಡಿಯೂರಪ್ಪನವರೇ ಕಾರಣ ಎನ್ನುತ್ತಿದ್ದ ಈಶ್ವರಪ್ಪನವರು ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್‌ ಅಂತು ಖಂಡಿತವಾಗಿಯೂ ಸಿಗುವುದಿಲ್ಲ ಎಂದು ಭಾವಿಸಿದ್ದಾರೆ. ಹೀಗಾಗಿ ಈಗಿನ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ಆಸೆ ಹುಟ್ಟಿಕೊಂಡಿದೆ. ಇದೇ ಕಾರಣಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

'ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಯಾವುದೇ ಆಸಕ್ತಿಯಿಲ್ಲ' .

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಉಳಿದೆಲ್ಲವನೂಯ್ನ ಮಾಡುತ್ತಿದ್ದಾರೆ. ದಕ್ಷರಾಗಿದ್ದ ಜಿಲ್ಲೆಯ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾಗಿದ್ದಾರೆ. ಮಾತ್ರವಲ್ಲ ನಗರದಲ್ಲಿ ಯಾವುದೇ ಅಭಿವೃದ್ಧಿ ನಡೆಯದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮಾಚೇನಹಳ್ಳಿ ಬಳಿ ಇರುವ ಕಿಯೋನಿಕ್ಸ್‌ ಸಂಸ್ಥೆಯ ಕಟ್ಟಡದಲ್ಲಿ 3900 ಚ.ಅ. ಜಾಗವನ್ನು  ತಮ್ಮ ಕುಟುಂಬದವರ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಈ ವ್ಯವಹಾರ ಸಂಪೂರ್ಣ ಕಾನೂನುಬಾಹಿರ. ಇದೇ ರೀತಿ ಹುಣಸೋಡು ಪ್ರಕರಣದ ತನಿಖೆ ಸಂಪೂರ್ಣ ದಾರಿ ತಪ್ಪುತ್ತಿದೆ. ಇದಕ್ಕೆ ಯಾರು ಕಾರಣ ಎಂಬುದು ಇಡೀ ಜಿಲ್ಲೆಯ ಜನರಿಗೆ ಗೊತ್ತಾಗಿದೆ. ತಕ್ಷಣ ಈ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿಸ್ಥರನ್ನು ಬಂಧಿಸಬೇಕು ಮತ್ತು ಸ್ಫೋಟದಿಂದ ಹಾನಿಗೆ ಒಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸಿಮ್ಸ್‌ ನಿರ್ದೇಶಕರನ್ನು ವರ್ಗಾಯಿಸಿ:  ಸಿಮ್ಸ್‌ನ ನಿರ್ದೇಶಕರು ಭಾರೀ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಇವರ ವರ್ಗಾವಣೆ ಮಾಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಇವರ ವಿರುದ್ಧ ದಾಖಲೆ ಸಂಗ್ರಹಿಸಿದ್ದು,ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ಸದಸ್ಯ ಬಿ.ಎ.ರಮೇಶ್‌ ಹೆಗ್ಡೆ ಮಾತನಾಡಿ, ಕೆ.ಬಿ.ಪ್ರಸನ್ನಕುಮಾರ್‌ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಆಶ್ರಯ ಯೋಜನೆಯಡಿ ಗೋವಿಂದಪುರದಲ್ಲಿ 3 ಸಾವಿರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1836 ಮನೆಗಳನ್ನು ಕಟ್ಟಿಕೊಡಲು ಪಾರದರ್ಶಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಆದರೆ ಈಶ್ವರಪ್ಪನವರು ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಬಗ್ಗೆ ಆಸಕ್ತಿವಹಿಸುತ್ತಿಲ್ಲ ಎಂದು ದೂರಿದರು.

ಈಗಲಾದರೂ ಈಶ್ವರಪ್ಪನವರು ಆಸಕ್ತಿವಹಿಸಿ ಕಾಮಗಾರಿಗಳನ್ನು ಮುಗಿಸಿ ಫಲಾನುಭವಿಗಳು ಗೃಹ ಪ್ರವೇಶ ಮಾಡುವಂತೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದರು. 

Latest Videos
Follow Us:
Download App:
  • android
  • ios