Asianet Suvarna News Asianet Suvarna News

ನಾಯಕತ್ವ ಬದಲಾವಣೆ: ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದ ಈಶ್ವರಪ್ಪ

* ನಾಯಕತ್ವ ಬದಲಾವಣೆ ಗೊಂದಲಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ
* , ಸರ್ಕಾರದ ವಿರುದ್ಧ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಧಕ್ಕೆ 
* ಪಕ್ಷದ ಸಂಘಟನೆ ಬೇರು ಮಟ್ಟದಿಂದಲೇ ಗಟ್ಟಿಯಾಗಿದೆ

Minister KS Eshwarappa Talks Over CM Change in Karnataka grg
Author
Bengaluru, First Published Jun 16, 2021, 9:33 AM IST

ಹುಬ್ಬಳ್ಳಿ(ಜೂ.16): ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿ ಬೆಳೆದಿದ್ದು, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಮುಂಬರುವ ಚುನಾವಣೆಗಳು ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದಲೇ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಗೊಂದಲಗಳು ಶೀಘ್ರವೇ ತಾರ್ಕಿಕ ಅಂತ್ಯ ಕಾಣಲಿದೆ ಎಂದು ತಿಳಿಸಿದ್ದಾರೆ. 

ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಒಂದು ಕಾಲವಿತ್ತು. ನಮ್ಮ ಪಕ್ಷದ ಸಂಘಟನೆ ಅಷ್ಟಾಗಿ ಗಟ್ಟಿಇರಲಿಲ್ಲ. ಆಗ ವ್ಯಕ್ತಿ ಹಾಗೂ ಜಾತಿ ಆಧಾರದ ಮೇಲೆ ಚುನಾವಣೆ ನಡೆಸುವ ಅನಿವಾರ್ಯತೆಯಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪಕ್ಷದ ಸಂಘಟನೆ ಬೇರು ಮಟ್ಟದಿಂದಲೇ ಗಟ್ಟಿಯಾಗಿದೆ. ಹೀಗಾಗಿ ವ್ಯಕ್ತಿ, ಜಾತಿ ಆಧಾರಿತ ಚುನಾವಣೆ ನಡೆಸುವ ಅನಿವಾರ್ಯತೆ ಪಕ್ಷಕ್ಕಿಲ್ಲ ಎಂದರು.

ಒಂದು ಕುಟುಂಬದಲ್ಲಿಯೇ ವ್ಯತ್ಯಾಸ ಇರುತ್ತದೆ. ಅದರಂತೆಯೇ ನಮ್ಮ ಪಕ್ಷದಲ್ಲಿ ಸಣ್ಣಪುಟ್ಟವ್ಯತ್ಯಾಸಗಳಿವೆ. ಕೇಂದ್ರದ ವರಿಷ್ಠರು ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ರಾಜ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗ ರಾಜ್ಯದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ಅಸಮಾಧಾನವನ್ನು ಬಗೆ ಹರಿಸುವುದಕ್ಕಾಗಿಯೇ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

'ಶಾಸಕ ಬೆಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ'

ಮೂರು ದಿನಗಳ ಕಾಲ ರಾಜ್ಯದಲ್ಲಿ ಅರುಣ್‌ ಸಿಂಗ್‌ ಅವರು ಸಚಿವರು, ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಎಲ್ಲ ಸಮಸ್ಯೆ, ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದರು.

ಕೇಂದ್ರ ವರಿಷ್ಠರು ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ಆ ನಿರ್ಣಯವನ್ನು ವಿರೋಧಿಸುವಂತಹ ವ್ಯಕ್ತಿಗಳು ನಮ್ಮಲ್ಲಿಲ್ಲ. ಆದರೂ ಪರ, ವಿರೋಧ ನಿಲುವು ಹೊಂದಿದವರು ತಮ್ಮ ನಿಲುವು ಬದಲಿಸಲಿಲ್ಲ ಎಂದರೆ, ಪಕ್ಷದ ವರಿಷ್ಠರೇ ಅವರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ, ಶಾಸಕರ, ಸಚಿವರ ಅಭಿಪ್ರಾಯ ಸಂಗ್ರಹಿಸಿದ ಮೇಲೆ ವರಿಷ್ಠರು ನಿರ್ಧರಿಸುತ್ತಾರೆ. ಈಗಂತೂ ಅಂತಹ ವಾತಾವರಣ ಇಲ್ಲ ಎಂದ ಅವರು, ಸರ್ಕಾರದ ವಿರುದ್ಧ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಧಕ್ಕೆ ಆಗಿದೆ ಎಂದರು.

ಮುಖ್ಯಮಂತ್ರಿಗಳ ರೇಸ್‌ನಲ್ಲಿ ಕೆಲವು ಜನ ಇದ್ದಾರೆ. ಅವರನ್ನು ಪಕ್ಷ ಗುರುತಿಸಿದೆಯೇ ಎಂಬ ಪ್ರಶ್ನೆಗೆ, ಪಕ್ಷವು ಯಾರನ್ನು ಗುರುತಿಸಿಲ್ಲ. ಅವರೇ ಕೆಲವರು ತಮ್ಮನ್ನು ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೇನೆ ಎಂದು ಹೇಳಿಕೊಳ್ಳುತ್ತಿರಬಹುದು. ಅದು ಅವರ ವೈಯಕ್ತಿಕ ವಿಚಾರ, ಯಾರಿಗೆ ಆಸೆ ಇರಲ್ಲ. ಹೇಳಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಜಿಲ್ಲಾ ವಕ್ತಾರ ರವಿ ನಾಯಕ ಇದ್ದರು.
 

Follow Us:
Download App:
  • android
  • ios