Asianet Suvarna News Asianet Suvarna News

ಉತ್ತರ ಕನ್ನಡದಲ್ಲಿ ಮಳೆಯಿಂದ ಹಾನಿ: ಅಲ್ಪ ಪರಿಹಾರ ವಿತರಣೆಗೆ ಸಚಿವ ಕೋಟ ಆಕ್ಷೇಪ

ಯಾರಿಗೆ ಕಡಿಮೆ ಮೊತ್ತದ ಪರಿಹಾರ ನೀಡಿದ್ದೀರೋ ಅಂತಹವರ ಖಾತೆಗೆ ಸಂಜೆಯೊಳಗೆ ಹೆಚ್ಚಿನ ಪರಿಹಾರ ಜಮಾ ಮಾಡಬೇಕೆಂದು ತಹಸೀಲ್ದಾರರಿಗೆ ತಾಕೀತು ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ 

Minister Kota Shrinivas Poojari Objects to Distribution of Meager Compensation grg
Author
Bengaluru, First Published Jul 17, 2022, 9:24 AM IST

ಭಟ್ಕಳ(ಜು.17): ಮಳೆಯಿಂದಾಗಿ ಮನೆ ಹಾನಿಯಾದ ಸಂತ್ರಸ್ತರಿಗೆ ಅಲ್ಪ ಪ್ರಮಾಣದಲ್ಲಿ ಹಾನಿ ಹಾಗೂ ಮಳೆನೀರು ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೇವಲ 5200 ವಿತರಣೆ ಮಾಡಿದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶನಿವಾರ ಸಚಿವ ಕೋಟ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ, ಪರಿಹಾರ ವಿತರಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಳೆನೀರು ಯಾವುದೇ ಮನೆಗಳಿಗೆ ನುಗ್ಗಿದರೆ 10 ಸಾವಿರ ಹಾಗೂ ಭಾಗಶಃ ಮನೆ ಹಾನಿಯಾದವರ ಖಾತೆಗೆ .50 ಸಾವಿರ ಹಾಕಬೇಕು. ಅತಿಕ್ರಮಣ ಜಾಗದಲ್ಲಿದ್ದ ಮನೆ ಹಾನಿಯಾದರೂ ಪರಿಹಾರ ವಿತರಿಸಬೇಕು. ಪರಿಹಾರ ಸರ್ಕಾರದಿಂದ ಕೊಡುವುದಾಗಿದೆ. ಹಾನಿಯಾದವರಿಗೆ ಸಿಕ್ಕ ಪರಿಹಾರದಿಂದ ಪುನರ್‌ವಸತಿ ಕಲ್ಪಿಸಿಕೊಳ್ಳಲು ಅನುಕೂಲವಾಗಬೇಕು. ಅಲ್ಪಮೊತ್ತದ ಪರಿಹಾರದಿಂದ ಹಾನಿಗೀಡಾದ ಮನೆಯನ್ನು ಅವರು ಹೇಗೆ ದುರಸ್ತಿ ಮಾಡಿಕೊಂಡಾರು ಎಂದು ಸಚಿವರು ಪ್ರಶ್ನಿಸಿದರು.

ಉತ್ತರ ಕನ್ನಡದಲ್ಲಿ ಭಾರೀ ಮಳೆ: ಹೊನ್ನಾವರ-ಸಾಗರ ಸಂಪರ್ಕಿಸುವ ಹೆದ್ದಾರಿ ಕುಸಿತ

ಪ್ರಕೃತಿ ವಿಕೋಪದಡಿ ಹಾನಿಯಾದರಿಗೆ ಪರಿಹಾರ ಕಲ್ಪಿಸುವುದಕ್ಕಾಗಿಯೇ ಪ್ರತಿ ತಾಲೂಕಿನ ತಹಸೀಲ್ದಾರ ಖಾತೆಗೆ .50 ಲಕ್ಷ ನೀಡಲಾಗಿದೆ. ಯಾರಿಗೆ ಕಡಿಮೆ ಮೊತ್ತದ ಪರಿಹಾರ ನೀಡಿದ್ದೀರೋ ಅಂತಹವರ ಖಾತೆಗೆ ಸಂಜೆಯೊಳಗೆ ಹೆಚ್ಚಿನ ಪರಿಹಾರ ಜಮಾ ಮಾಡಬೇಕೆಂದು ತಹಸೀಲ್ದಾರರಿಗೆ ತಾಕೀತು ಮಾಡಿದರು. ಕಾಳಜಿ ಕೇಂದ್ರದಿಂದ ಜನರು ಮನೆಗೆ ತೆರಳುವಾಗ ಕಿಟ್‌ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.

ಗುಡ್ಡ ಕುಸಿತ ಇರುವ ಕಡೆ ನಿಗಾ ಇಡಬೇಕು. ಜೆಸಿಬಿ ಬಳಸಿ ಸಮಸ್ಯೆ ಪರಿಹರಿಸಬೇಕಿದೆ. ಯಾರಿಂದಲೂ ದೂರು ಬಾರದಂತೆ ಗಮನಹರಿಸಬೇಕು. ಪಿಡಿಒ, ನೋಡಲ್‌ ಅಧಿಕಾರಿಗಳ ಜವಾಬ್ದಾರಿ ತುಂಬ ಇದ್ದು, ಹಾನಿಯಾದರೆ ತಹಸೀಲ್ದಾರರ ಗಮನಕ್ಕೆ ತಂದು ಫಲಾನುಭವಿಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಮದರು.

ಪರಿಹಾರ ವಿತರಿಸದ್ದಕ್ಕೆ ಗರಂ ಆದ ಶಾಸಕ!

ಕಾಯ್ಕಿಣಿಯಲ್ಲಿ ಮಹಿಳೆಯೊಬ್ಬರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಶೇ.15ರಷ್ಟುಹಾನಿಯಾಗಿದೆ ಎಂದು ಅಂದಾಜಿಸಿದ ಇಂಜಿನಿಯರ್‌ ಪರಿಹಾರ ವಿತರಿಸಲು ಬರುವುದಿಲ್ಲ ಎಂದು ಶರಾ ಬರೆದಿದ್ದಕ್ಕೆ ಸಚಿವರ ಸಭೆಯಲ್ಲಿ ಶಾಸಕ ಸುನೀಲ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮನೆ ಮೇಲೆ ಮರ ಬಿದ್ದು ಹಾನಿಯಾದ ಮೇಲೆ ಪರಿಹಾರ ಕೊಡುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಅದರಂತೆ ಸಭೆಗೆ ಬಾರದೇ ಕಾರವಾರದ ಕಚೇರಿಗೆ ತೆರಳಿದ್ದ ಇಂಜಿನಿಯರ್‌ಗೆ ಸಭೆಯಲ್ಲಿ ಸಚಿವರ ಎದುರಿನಲ್ಲೇ ಕರೆ ಮಾಡಿ ಪರಿಹಾರ ವಿತರಿಸದ ಕುರಿತು ಪ್ರಶ್ನಿಸಿದರು. ಸಚಿವರು ಮನೆ ಹಾನಿಯಾದವರಿಗೆ ಪರಿಹಾರ ಕೊಡಲು ಮೀನಮೇಷ ಮಾಡಬೇಡಿ. ಮಹಿಳೆಗೆ ಸೂಕ್ತ ಪರಿಹಾರ ಒದಗಿಸಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.

ಮಳೆ ಮುಗಿಯುವವರೆಗೆ ರಜೆ ಇಲ್ಲ !

ಎಲ್ಲೆಡೆ ಹಾನಿ ಸಂಭವಿಸುತ್ತಿದೆ. ಮಳೆ ಮುಗಿಯುವ ತನಕ ಅಧಿಕಾರಿಗಳಿಗೆ, ಸಿಬ್ಬಂದಿಗೆ ರಜೆ ಇಲ್ಲ. ಮಳೆ ಹಾನಿಗೆ ಸ್ಪಂದಿಸದೇ ಇರುವುದು, ಪರಿಹಾರ ವಿತರಣೆಯಲ್ಲಿ ವ್ಯತ್ಯಯ ಸೇರಿದಂತೆ ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದರು.

ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

ಭಟ್ಕಳ ಸಂಶುದ್ದೀನ ವೃತ್ತ, ರಂಗೀಕಟ್ಟೆ, ಶಿರಾಲಿ ಮುಂತಾದ ಕಡೆ ಹೆದ್ದಾರಿ ಮಳೆ ಬಂದಾಗ ಹೊಳೆ ಆಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದಾಗ, ಸಚಿವರು ಐಆರ್‌ಬಿ, ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇವೆ. ಸದ್ಯವೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಅಡಕೆ ಕೊಳೆರೋಗಕ್ಕೂ ಪರಿಹಾರ:

ಈ ಬಾರಿ ಅಡಕೆ, ಭತ್ತ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಾವಳಿಯಂತೆ ಪರಿಹಾರ ವಿತರಿಸಲಾಗುತ್ತದೆ. ಪರಿಹಾರ ಮೊತ್ತ ಪರಿಷ್ಕರಣೆಯಾಗಿದ್ದು, ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು.

Follow Us:
Download App:
  • android
  • ios