ಉತ್ತರ ಕನ್ನಡದಲ್ಲಿ ಭಾರೀ ಮಳೆ: ಹೊನ್ನಾವರ-ಸಾಗರ ಸಂಪರ್ಕಿಸುವ ಹೆದ್ದಾರಿ ಕುಸಿತ
ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಹೊನ್ನಾವರ- ಗೇರುಸೊಪ್ಪ- ಮಾವಿನಗುಂಡಿ ರಸ್ತೆ ಮಾರ್ಗ ಬಂದ್ ಮಾಡಿದೆ. ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ.
ಕಾರವಾರ(ಜು.17): ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಶನಿವಾರ ಮಳೆ ಬಿರುಸುಕೊಂಡಿದೆ. ಹೊನ್ನಾವರ-ಸಾಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭೂಕುಸಿತ ಉಂಟಾಗಿದೆ. ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದೆ. ಹೊನ್ನಾವರದಿಂದ-ಸಾಗರಕ್ಕೆ ತೆರಳುವ ಮಾರ್ಗ ಇದಾಗಿದೆ. ಪಟ್ಟಣದ ಮೂಲಕ ಗೇರುಸೊಪ್ಪ ಗ್ರಾಮದಿಂದ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಭಾಗಕ್ಕೆ ತೆರಳುವವರು ಪರ್ಯಾಯ ಮಾರ್ಗವಾಗಿ ಕುಮಟಾದ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಹೊನ್ನಾವರ- ಗೇರುಸೊಪ್ಪ- ಮಾವಿನಗುಂಡಿ ರಸ್ತೆ ಮಾರ್ಗ ಬಂದ್ ಮಾಡಿದೆ. ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಹೊನ್ನಾವರ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಶರಾವತಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಭಾಸ್ಕೇರಿ ಗ್ರಾಮ ಜಲಾವೃತವಾಗಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹೊಸಾಕುಳಿ ಗ್ರಾಮ ಜಲಾವೃತವಾಗಿದ್ದು, ತೋಟಗಳಿಗೆ, ಮನೆಗಳಿಗೆ ನೀರು ನುಗ್ಗಿದೆ. ಕಾರವಾರ ತಾಲೂಕಿನ ಕದ್ರಾ ಜಲಾಶಯದ 8 ರೇಡಿಯಲ್ ಗೇಟ್ ತೆರೆಯಲಾಗಿದ್ದು, 20,200 ಕ್ಯೂಸೆಕ್ ನೀರನ್ನು ಸತತವಾಗಿ ಹೊರಕ್ಕೆ ಬಿಡಲಾಗುತ್ತಿದೆ.
ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ
ಮೇಲ್ಚಾವಣಿ ಕುಸಿತ:
ಕಾರವಾರ ತಾಲೂಕಿನ ಬೈರಾ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದಿದ್ದು, ಪಾಲಕರಲ್ಲಿ ಆತಂಕ ಮೂಡಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಕಾಳಜಿ ಕೇಂದ್ರ ತೆರೆಯಲಾಗಿದೆ. 104 ಕುಟುಂಬ ಆಶ್ರಯ ಪಡೆದಿದೆ.
ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕಾರವಾರದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದ್ದು, ಆಗಾಗ ರಭಸದಿಂದ ಸುರಿಯುತ್ತಿತ್ತು. ಜೋಯಿಡಾ ತಾಲೂಕಿನಲ್ಲಿ ಸತತ ಮಳೆಯಾಗುತ್ತಿದ್ದು, ಬಹುತೇಕ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಸಿದ್ದಾಪುರದಲ್ಲಿ ಬಿರುಸಿನಿಂದ ಮಳೆಯಾಗುತ್ತಿದೆ. ಶಿರಸಿ ತಾಲೂಕಿನಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಹಾಗೂ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತೋಟಗಾರಿಕೆ ಹಾಗೂ ಕೃಷಿ ಬೆಳೆ ಅಪಾರ ಹಾನಿಯಾಗಿದೆ. ಕೃಷಿ ಜು.14ರಂದು 11.1 ಹೆಕ್ಟೇರ್, 15ರಂದು 2.5 ಹೆಕ್ಟೇರ್, 16ರಂದು 28.64 ಹೆಕ್ಟೇರ್ ಹಾಗೂ ತೋಟಗಾರಿಕೆ 13ರಂದು 0.5, 14ರಂದು 0.13, 15ರಂದು 0.3 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ.