ಗೆಳೆತನ ಅನುಭೂತಿ ವರ್ಣಿಸಲು ಸಾಧ್ಯವಿಲ್ಲ: ಆಂಧ್ರದ ಸಚಿವ ಗೋವರ್ಧನ ರೆಡ್ಡಿ
* ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆಂಧ್ರ ಸಚಿವ
* ಇಡೀ ಕಾರ್ಯಕ್ರಮದಲ್ಲಿ ಸಚಿವ ಗೋವರ್ಧನ ರೆಡ್ಡಿಯೇ ಕೇಂದ್ರಬಿಂದು
* 30 ವರ್ಷಗಳ ಬಳಿಕ ಕನ್ನಡದಲ್ಲಿ ಮಾತನಾಡಿದ ಸಚಿವ ಕಾಕನಿ ಗೋವರ್ಧನ ರೆಡ್ಡಿ
ಶಿವಮೊಗ್ಗ(ಜೂ.22): ಎಷ್ಟೇ ದೊಡ್ಡ ವ್ಯಕ್ತಿಯಾದರೂ, ಅದೆಷ್ಟೆ ಗೌರವ ಸಿಕ್ಕರೂ, ಅದ್ಯಾವುದಕ್ಕೂ ಕಿಮ್ಮತ್ತು ನೀಡದೇ ಗೆಳೆಯನೊಬ್ಬ ಹೋಗಲೇ ಅನ್ನುವ ಮಾತಿದ್ಯಲ್ಲ, ಅದು ನೀಡುವ ಅನುಭೂತಿ ವರ್ಣಿಸಲು ಸಾಧ್ಯವಿಲ್ಲ’ ಈ ಮಾತನ್ನು ಆಡಿದ್ದು ಬೇರಾರೂ ಅಲ್ಲ. ಆಂಧ್ರಪ್ರದೇಶದ ಸಹಕಾರ ಸಚಿವ ಕಾಕನಿ ಗೋವರ್ಧನ ರೆಡ್ಡಿ!
ಇಲ್ಲಿನ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಇಲ್ಲಿಗೆ ಆಗಮಿಸಿದ ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ- ನೆನಪಿನ ಅಂಗಳ 2022 ಕಾರ್ಯಕ್ರಮದಲ್ಲಿ ಭಾಗಿಯಾದರು.
ಇಡೀ ಕಾರ್ಯಕ್ರಮದಲ್ಲಿ ಸಚಿವ ಗೋವರ್ಧನ ರೆಡ್ಡಿಯೇ ಕೇಂದ್ರಬಿಂದು. ಇಲ್ಲಿ ಓದುವ ವೇಳೆ ಕನ್ನಡವನ್ನು ಕಲಿತಿದ್ದ ಸಚಿವ ರೆಡ್ಡಿ ಅವರು ಕನ್ನಡದಲ್ಲಿಯೇ ಮಾತನಾಡುತ್ತ, ನಾನು ಇಲ್ಲಿಯೇ ಓದಿದ್ದು, ಸ್ನೇಹಿತರು ಸಿಗುತ್ತಾರೆ ಎಂಬ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. 30 ವರ್ಷಗಳ ಬಳಿಕ ಕನ್ನಡದಲ್ಲಿ ಮಾತನಾಡುತ್ತಿದ್ದೇನೆ. ಮನಸ್ಸು ರೋಮಾಂಚನಗೊಳ್ಳುತ್ತಿದೆ ಎಂದರು.
ವಾಣಿಜ್ಯ ವಿಭಾಗದಲ್ಲಿ ನಾಲ್ವರು, ವಿಜ್ಞಾನ ವಿಭಾಗದಲ್ಲಿ ಒಬ್ಬ ಟಾಪರ್!
ಜೊತೆಗೆ ಕನ್ನಡದಲ್ಲಿಯೇ ತಮ್ಮ ಅನುಭವ, ಶಿವಮೊಗ್ಗದ ನಂಟು, ಎಚ್‌ಪಿಸಿ, ವೀರಭದ್ರೇಶ್ವರ ಟಾಕೀಸು, ಶ್ರೀ ಗುರು ರಾಘವೇಂದ್ರ ಮಠ, ಮೀನಾಕ್ಷಿ ಭವನದ ಬೆಣ್ಣೆದೋಸೆ, ರಾಜಕುಮಾರ್ ಸಿನಿಮಾ ಹೀಗೆ ಒಂದೊಂದನ್ನೇ ನೆನಪಿಸಿಕೊಂಡರು. ಶಿವಮೊಗ್ಗಕ್ಕೆ ಬಂದಾಕ್ಷಣ ಹೃದಯ ತುಂಬಿ ಬಂದಿದ್ದನ್ನು ಹೇಳಿಕೊಂಡರು.
ಇಂದು ಬಂದು ನಾಳೆ ಹೋಗುವ ಅಧಿಕಾರಕ್ಕಿಂತ ನಾವು ರೂಢಿಸಿಕೊಂಡ ವ್ಯಕ್ತಿತ್ವವೇ ಬದುಕಿನಲ್ಲಿ ಎಂದೆಂದಿಗೂ ಶಾಶ್ವತ. ಓರ್ವ ವ್ಯಕ್ತಿಯ ಉನ್ನತೀಕರಣದಲ್ಲಿ ಶಿಕ್ಷಕರ ಹಾಗೂ ವಿದ್ಯಾ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಅಂತಹ ಅದ್ಭುತ ಸ್ಪಂದನೆ ನನಗೆ ಕಲಿಸಿದ ಶಿಕ್ಷಕರಿಂದ, ವಿದ್ಯಾಸಂಸ್ಥೆಗಳಿಂದ ದೊರೆತ್ತಿದ್ದರಿಂದಲೇ ಯಶಸ್ಸಿನ ಹಾದಿಯೆಡೆಗೆ ಸಾಗಲು ನನಗೆ ಸಾಧ್ಯವಾಯಿತು. ಇಲ್ಲಿ ವಿದ್ಯಾಭ್ಯಾಸದ ಬಳಿಕ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಾಗದೆ ನಾನೇ ಸ್ವತಃ ಸಿವಿಲ್ ಕನ್ಸಲ್ಟೆಂಟ್ ಆಗಿ ಉದ್ಯಮ ಆರಂಭಿಸಿದೆ. ಸವಾಲುಗಳ ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದೆ. ರಾಜಶೇಖರ ರೆಡ್ಡಿ ಅವರ ನಾಯಕತ್ವದಲ್ಲಿ ರಾಜಕಾರಣಕ್ಕೆ ಪ್ರವೇಶ ಮಾಡಿದೆ. ಮೊದಲಿಗೆ ಜಿಲ್ಲಾ ಪರಿಷತ್ ಅಧ್ಯಕ್ಷನಾದೆ. ಆನಂತರ ಶಾಸಕನಾಗಿ, ಈಗ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡರು.
ಐಶಾರಾಮಿ ಕಾರಿನಲ್ಲಿ ಜಾನುವಾರು ಕಳವು: ಓರ್ವನ ಬಂಧನ
ಇದೇ ವೇಳೆ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಹಳೆಯ ವಿದ್ಯಾರ್ಥಿಗಳ ಸಭಾಂಗಣಕ್ಕೆ ವೈಯಕ್ತಿಕವಾಗಿ 5 ಲಕ್ಷ ಸಹಾಯಧನ ಘೋಷಿಸಿದರು. ಕಾರ್ಯಕ್ರಮದಲ್ಲಿ ಸಚಿವ ಗೋವರ್ಧನ ರೆಡ್ಡಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಜನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಎಸ್. ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್. ಎನ್. ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ. ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ. ರಮೇಶ್, ನಿರ್ದೇಶಕರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಜಿ.ಎನ್. ಸುಧೀರ್, ಕುಲಸಚಿವರಾದ ಪೊ›. ಹೂವಯ್ಯಗೌಡ, ಪ್ರಾಂಶುಪಾಲ ಡಾ. ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಸುರೇಂದ್ರ, ಉಪಾಧ್ಯಕ್ಷರಾದ ರಾಜೇಂದ್ರಪ್ರಸಾದ್, ಕಾರ್ಯದರ್ಶಿ ಡಾ. ಕೆ.ಎಂ.ಬಸಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.