ರಾಯಚೂರು: 'ಒಪೆಕ್‌ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಡಾಕ್ಟರ್ಸ್ ವಿರುದ್ಧ ಕಠಿಣ ಕ್ರಮ'
ರಾಯಚೂರಿನ ಒಪೆಕ್ ಆಸ್ಪತ್ರೆ ಕಾಯಕಲ್ಪಕ್ಕೆ ಸಚಿವ ಸುಧಾಕರ್ ತಾಕೀತು| ಖಾಲಿ ಇರುವ 49 ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ| ಅಲ್ಲಿಯವರೆಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸೂಚನೆ| ಗ್ರೂಪ್ ಬಿ ಯ 4 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸೂಚನೆ ನೀಡಿದ ಸಚಿವ ಸುಧಾಕರ್|
ರಾಯಚೂರು(ಜೂ.14): ಒಪೆಕ್ ಆಸ್ಪತ್ರೆಯನ್ನು ದುಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಂಸ್ಥೆಯ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದ ಸಚಿವರು ಪರಿಶೀಲನಾ ಸಭೆ ನಡೆಸಿದರು.
ಮಧ್ಯಾಹ್ನ ಮೂರು ಗಂಟೆ ನಂತರ ಯಾವುದೇ ಸೂಪರ್ ಸ್ಪೆಷಾಲಿಟಿ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂಬ ದೂರುಗಳಿವೆ. ದಿನದ 24 ತಾಸು ಎಲ್ಲಾ ವಿಭಾಗಗಳು ಕಾರ್ಯ ನಿರ್ವಹಿಸಬೇಕು. ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಆಸ್ಪತ್ರೆ ಇಂಥ ದುಃಸ್ಥಿತಿಯಲ್ಲಿ ಇದೆ ಎಂದು ಭಾವಿಸಿರಲಿಲ್ಲ. ಒಪೆಕ್ ಆಸ್ಪತ್ರೆಯಲ್ಲಿನ ಎಲ್ಲಾ ಲೋಪಗಳನ್ನು ಸರಿಪಡಿಸಿ ಅತ್ಯುತ್ತಮ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು ಎಂದು ವೈದ್ಯರು ಮತ್ತು ಆಡಳಿತ ವರ್ಗಕ್ಕೆ ನಿರ್ದೇಶನ ನೀಡಿದರು.
ಹೋಮ್ ಕ್ವಾರಂಟೈನ್, ಬೆಸ್ಟ್ ಕ್ವಾರಂಟೈನ್ ಎಂದ ಸಚಿವ ಸುಧಾಕರ್
ಆರಂಭದಲ್ಲಿ ರಿಮ್ಸ್ ಆಡಳಿತ ವೈಖರಿ ಪರಿಶೀಲಿಸಿದ ಸಚಿವರು, ಯಾವುದೇ ನಿರ್ಮಾಣ ಕಾಮಗಾರಿ ಆರಂಭಿಸುವ ಮೊದಲು ತಮ್ಮ ಕಚೇರಿ ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ವೈದ್ಯಕೀಯ ಉಪಕರಣಗಳ ಖರೀದಿಗೆ ಮೊದಲು ನಿರ್ದಿಷ್ಟ ಮಾರ್ಗಸೂಚಿಗಳ ಜೊತೆಗೆ ನಿರ್ದೇಶಕರ ಹಂತದಲ್ಲಿ ತಜ್ಞರ ಸಮಿತಿ ರಚಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಉಪಕರಣಗಳ ಖರೀದಿಗೆ ಅವಕಾಶವಿಲ್ಲದಂತೆ ಶ್ರೇಷ್ಠ ಗುಣಮಟ್ಟದ ಕಂಪನಿಗಳಿಗೆ ಮಾತ್ರ ಅವಕಾಶ ಇರುವಂತೆ ಎಚ್ಚರವಹಿಸಬೇಕು ಎಂದು ಸಚಿವ ಸುಧಾಕರ್ ತಾಕೀತು ಮಾಡಿದರು. ಉಪಕರಣ ಗುತ್ತಿಗೆ ಪಡೆದ ಕಂಪನಿಗಳು ಸಮರ್ಪಕ ಸೇವೆ ನೀಡಲು ಅಗತ್ಯ ಸೂಚನೆ ನೀಡಬೇಕು ಇಲ್ಲವೇ ಮಾರ್ಗಸೂಚಿ ಬದಲಿಸಿ ಎಂದು ಡಿಎಂಇಗೆ ಸೂಚನೆ ನೀಡಿದರು.
ಖಾಲಿ ಇರುವ 49 ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಅಲ್ಲಿಯವರೆಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಹೇಳಿದರು. ಗ್ರೂಪ್ ಬಿ ಯ 4 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸೂಚನೆ ನೀಡಿದ ಸಚಿವರು, ಗ್ರೂಪ್ ಸಿ ಮತ್ತು ಡಿ ವರ್ಗದ ನೇಮಕಕ್ಕೆ ಅನುಕೂಲ ಆಗುವಂತೆ ವೃಂದ ಮತ್ತು ನೇಮಕ ನಿಯಮಗಳನ್ನು ಶೀಘ್ರವಾಗಿ ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಆಡಳಿತದ ವೈಫಲ್ಯಗಳು ಮರುಕಳಿಸದಂತೆ ಜಾಗ್ರತೆವಹಿಸಿ ಮೊದಲ ಹಂತದ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಆಯುಷ್ಮಾನ್ ಭಾರತ ಅಡಿ ವಾರ್ಷಿಕ ಪಡೆಯುತ್ತಿರುವ ಅನುದಾನ ಹೆಚ್ಚಿಸುವ ನಿಟ್ಟಿನಲ್ಲಿ ವಿಭಾಗಗಳ ಮುಖ್ಯಸ್ಥರು ಕಾರ್ಯವೈಖರಿ ಬದಲಿಸಿಕೊಂಡು ಆಯಾದಿನದ ಚಿಕಿತ್ಸೆ ವಿವರಗಳನ್ನು ದಾಖಲು ಮಾಡಿ ಕಳುಹಿಸಬೇಕು. ಇದನ್ನು ಪ್ರತಿ ತಿಂಗಳು ಪರಿಶೀಲಿಸಿ ಗುರಿ ತಲುಪದ ವಿಭಾಗಗಳ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು ಎಂದರು. ಹಟ್ಟಿ ಚಿನ್ನದ ಗಣಿ ಸೇರಿದಂತೆ ಇತರೆ ಕಂಪನಿಗಳನ್ನು ಸಂಪರ್ಕಿಸಿ ಸಿಎಸ್ ಆರ್ ನಿಧಿಯ ನೆರವು ಪಡೆದುಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.