ವೈದ್ಯಕೀಯ ಸೌಲಭ್ಯ ಕೊರತೆ ನೀಗಿಸಲು ಕ್ರಮ: ಸಚಿವ ಸುಧಾಕರ
* ಗದಗ ಡಿಎಚ್‌ಒಗೆ ಎಚ್ಚರಿಕೆ ನೀಡಿದ ಸಚಿವ ಕೆ.ಸುಧಾಕರ್
* ಈಗಾಗಲೇ ರಾಜ್ಯದಲ್ಲಿ 1.20 ಕೋಟಿ ಜನರಿಗೆ ಲಸಿಕೆ
* ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ, ಜನರ ಸಹಕಾರ ಅಗತ್ಯ
ಗದಗ(ಮೇ.23): ಜಿಲ್ಲೆಯಲ್ಲಿ ತಜ್ಞ ವೈದ್ಯರು, ಸಾಮಾನ್ಯ ವೈದ್ಯರು, ಆ್ಯಂಬುಲೆನ್ಸ್ ಹೀಗೆ ವೈದ್ಯಕೀಯ ವಿಭಾಗದಲ್ಲಿ ಹಲವಾರು ಕೊರತೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲೆಯ ಕೋವಿಡ್ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಮ್ಸ್‌ನಲ್ಲಿನ ತಜ್ಞ ವೈದ್ಯರ ಕೊರತೆಯನ್ನು ಮುಂದಿನ ಒಂದು ವಾರದಲ್ಲಿ ಹಾಗೂ ಸಾಮಾನ್ಯ ವೈದ್ಯರ ನೇಮಕವನ್ನು ಮುಂದಿನ 2 ವಾರದಲ್ಲಿ ಪೂರ್ಣಗೊಳಿಸಿ ಜಿಲ್ಲೆಗೆ ನೇಮಿಸಲಾಗುವುದು, ಜಿಮ್ಸ್‌ನ 450 ಬೆಡ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಕಾಲಮಿತಿಯಲ್ಲಿ ಆಗಿಲ್ಲ, ಈ ಕುರಿತು ಬೆಂಗಳೂರಿಗೆ ತೆರಳಿದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಂಡು ಸಾಧ್ಯವಿದ್ದಷ್ಟು ಬೇಗನೇ ಸಾರ್ವಜನಿಕರಿಗೆ ಅಸ್ಪತ್ರೆ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.
"
ಜಿಲ್ಲೆಯಲ್ಲಿ ಸದ್ಯಕ್ಕೆ 87 ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ತಜ್ಞ ವೈದ್ಯರು ಹಾಗೂ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು, ಜಿಲ್ಲೆಯಲ್ಲಿ ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದಲ್ಲಿ ವೈದ್ಯಕೀಯ ಸೌಲಭ್ಯಗಳು ಅತ್ಯಂತ ಕಡಿಮೆ ಇದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇನೆ, ಹೆಚ್ಚುವರಿಯಾಗಿ ಆ್ಯಂಬುಲೆನ್ಸ್‌ಗಳನ್ನು ಕೂಡಾ ಜಿಲ್ಲೆಗೆ ಮಂಜೂರು ಮಾಡುವುದಾಗಿ ಹೇಳಿದ್ದಾರೆ.
ಗದಗ: ಕೊರೋನಾ ಸೋಂಕಿನಿಂದ ಮೃತನ ಅಂತ್ಯ ಸಂಸ್ಕಾರಕ್ಕೆ ಸಿಬ್ಬಂದಿ ಹಿಂದೇಟು
ಆಕ್ಸಿಜನ್ ಕೊರತೆಯಾಗುವ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕೂಡಲೇ ಹೆಚ್ಚುವರಿ ವ್ಯವಸ್ಥೆ ಮತ್ತು ಅನಾವಶ್ಯಕವಾಗಿ ಆಕ್ಸಿಜನ್ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇರುವ ಸೌಲಭ್ಯದಲ್ಲಿ ಜಿಮ್ಸ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗದಗ ಡಿಎಚ್‌ಒಗೆ ಎಚ್ಚರಿಕೆ
ಗದಗ ಡಿಎಚ್‌ಒ ಅವರಿಗೆ ಸರಿಯಾದ ಮಾಹಿತಿ ಇಲ್ಲ, ನಾನು ನಡೆಸುತ್ತಿರುವ ಸಭೆಯಲ್ಲಿಯೇ ತಪ್ಪು ತಪ್ಪು ಮಾಹಿತಿ ನೀಡುತ್ತಾರೆ. ಜಿಲ್ಲೆಯಲ್ಲಿ ಎಷ್ಟು ಆ್ಯಂಬುಲೆನ್ಸ್‌ಗಳಿವೆ ಎಂದು ಹೇಳುತ್ತಿಲ್ಲ, ಬೇಗನೇ ಸ್ಪಂದಿಸುತ್ತಿಲ್ಲ ಎನ್ನುವ ಗಂಭೀರ ಆರೋಪ ಅವರ ಮೇಲಿದೆ. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದು, ತಪ್ಪನ್ನು ಸರಿ ಮಾಡಿಕೊಂಡು ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡಲು ಸೂಚಿಸಿದ್ದೇನೆ. ಇದಕ್ಕೂ ತಪ್ಪಿದಲ್ಲಿ ಅವರ ಮೇಲೆ ಶಿಸ್ತಿನ ಕ್ರಮ ಖಂಡಿತ, ಇದಕ್ಕೆ ಯಾರೂ ಹೊರತಾಗಿಲ್ಲ. ಇದು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾದ ಸಮಯ. ಈ ಸಂದರ್ಭದಲ್ಲಿ ಯಾರೇ ನಿರ್ಲಕ್ಷ್ಯ ಮಾಡಿದರೂ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಸಚಿವ ಡಾ. ಸುಧಾಕರ ಡಿಎಚ್‌ಒ ಡಾ. ಸತೀಶ ಬಸರಿಗಿಡದ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿ ಸಹಕಾರ-ಸುಧಾಕರ ಅಭಿನಂದನೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯಕ್ಕೆ ಬೇಕಾಗುವ ಆಕ್ಸಿಜನ್ ಪೂರೈಕೆ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಸೋಂಕಿತರು ಹೆಚ್ಚು ಗುಣಮುಖರಾಗಲು ಸಾಧ್ಯವಾಗಿದೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. 1050 ಟನ್ ಆಕ್ಸಿಜನ್ ಹಂಚಿಕೆ ಕೇಂದ್ರ ಸಚಿವ ಜೋಶಿ ಅವರಿಂದ ಸಾಧ್ಯವಾಗಿದೆ. ಇನ್ನು ರಾಜ್ಯದಲ್ಲಿಯೇ 10 ಸಾವಿರ ಟನ್ ಆಕ್ಸಿಜನ್ ನಾವೇ ಉತ್ಪಾದನೆ ಮಾಡುತ್ತಿದ್ದೇವೆ. ಇದು ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ದೂರ ದೃಷ್ಟಿಯಿಂದ ಸಾಧ್ಯವಾಗಿದೆ. ಕೋವಿಡ್ ಒಂದನೇ ಅಲೆಯಲ್ಲಿ ಕೇವಲ 2 ಸಾವಿರ ಆಕ್ಸಿಜನ್ ಬೆಡ್ ಹೊಂದಿದ್ದ ನಮ್ಮ ರಾಜ್ಯದಲ್ಲಿ ಇಂದು 35 ಸಾವಿರ ಆಕ್ಸಿಜನ್ ಬೆಡ್ ಹೆಚ್ವಿಸಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ ಎಂದರು.
ಕಾಂಗ್ರೆಸ್ ಟೂಲ್‌ಕಿಟ್ ರೂವಾರಿ ಎಚ್ಕೆ: ಸಚಿವ ಪಾಟೀಲ
ಲಸಿಕೆ ವಿಷಯವಾಗಿ ಕೇಳಿದ ಪ್ರಶ್ನೆಗೆ, ಈಗಾಗಲೇ ರಾಜ್ಯದಲ್ಲಿ 1.20 ಕೋಟಿ ಜನರಿಗೆ ಲಸಿಕೆ ಹಾಕಿದ್ದೇವೆ. 2 ಕೋಟಿ ಲಸಿಕೆ ಗ್ಲೋಬಲ್ ಟೆಂಡರ್ ಕೊಡಲಾಗಿದೆ. 18ರಿಂದ 44 ಅಂಗವಿಕಲರು, ಶಿಕ್ಷಕರು, ಚಿತಾಗಾರ, ಸ್ಮಶಾನ, ಪೆಟ್ರೋಲ್ ಬಂಕ್ ಹೀಗೆ ಮಂಚೂಣಿಯಲ್ಲಿ ನಿಂತು ಕೆಲಸ ಮಾಡುವವರಿಗೆ ಲಸಿಕೆ ಕೊಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಕೊರೋನಾ ಪಾಜಿಟಿವಿಟಿ ದರ 24 ರಷ್ಟು ಕುಸಿತವಾಗಿದೆ. ಸೋಂಕಿತರಿಗಿಂತ ದುಪ್ಪಟ್ಟು ಸಂಖ್ಯೆಯ ಜನರು (61 ಸಾವಿರ) ಗುಣಮುಖರಾಗಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಜನರು ಮಾತ್ರ ಕೋವಿಡ್ ನಿಯಂತ್ರಣಕ್ಕೆ ಬಂತು ಎಂದು ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿದರೆ ಮತ್ತೆ ಸಮಸ್ಯೆ ಹೆಚ್ಚಾಗಲಿದೆ. ಜನರು ಎಚ್ಚರಿಕೆಯಿಂದ ಇರಬೇಕು. ಇನ್ನು ಫಂಗಸ್ ಕುರಿತು ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ, ವಿಪ ಸದಸ್ಯ ಎಸ್.ವಿ. ಸಂಕನೂರ ಮುಂತಾದವರು ಇದ್ದರು.
ಎಚ್ಕೆಗೆ ಏಕವಚನ: ಸಿ.ಸಿ. ಪಾಟೀಲ ವಿಷಾದ
ಪಿಎಂ ಕೇರ್‌ನಿಂದ ಬಂದಿರುವ ವೆಂಟಿಲೇಟರ್‌ಗಳನ್ನು ಡಬ್ಬಾ ಎಂದು ಕರೆದು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಸಿಎಂ ಹಾಗೂ ಮೋದಿ ಅವರಿಗೆ ವಿಶ್ವಾಸ ಹೋಗಿದೆ ಎಂದು ಟೀಕಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರ ಟೀಕೆಗೆ ಉತ್ತರಿಸುವ ಭರದಲ್ಲಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ನನಗೆ ವಿಷಾದವಿದೆ ಎಂದರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ.