ಕಲಬುರಗಿ(ಜೂ.06): ಬಿಜೆಪಿ ಶಾಸಕರು ಪ್ರತ್ಯೇಕ ಸಭೆ ಮಾಡಿದರೆ ತಪ್ಪೇನು? ಸಭೆ ಮಾಡಿ ಚರ್ಚೆ ಮಾಡೋದರಲ್ಲಿ ಯಾವುದೇ ತಪ್ಪಿಲ್ಲ, ಹಲವು ಶಾಸಕರು ಸಭೆ ಮಾಡಿ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳೋದರಲ್ಲಿ ತಪ್ಪೇನಿದೆ? ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಂಡರೆ ತಪ್ಪಾಗುತ್ತದೆ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಇತ್ತೀಚೆಗೆ ಬಿಜೆಪಿಯಲ್ಲಿ ಬಿರುಗಾಳಿ ಹುಟ್ಟುಹಾಕಿರುವ ಅತೃಪ್ತ ಶಾಸಕರ ಸಭೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಹೊನ್ನಕಿರಣಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ ಲಾಬಿ, ಗುಂಪುಗಾರಿಕೆ ಬಿಜೆಪಿಗೆ ಸೂಟ್‌ ಆಗಲ್ಲ, ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡೋದರಲ್ಲಿ ತಪ್ಪೇನಿಲ್ಲ, ಸಭೆ ಸೇರಿ ಪಕ್ಷದ ವಿರುದ್ಧ ಸಂಚು ಹೂಡಲು ಮುಂದಾದರೆ ಅದು ತಪ್ಪು, ಪಕ್ಷಕ್ಕೆ ದ್ರೋಹ ಬಗೆದಂತಾಗುತ್ತದೆ, ಶಾಸಕರು ಸಭೆ ಸೇರಿ ತಮ್ಮ ಆಸೆ, ಆಕಾಂಕ್ಷೆಗಳ ಬಗ್ಗೆ ಚರ್ಚಿಸಿದಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು, ಬಿಜೆಪಿಯಲ್ಲಿ ಶಾಸಕರ ಅಸಮಾಧಾನ ಇರುವುದು ನಿಜ. ಆದರೆ, ಅದೇ ದೊಡ್ಡ ವಿಷಯವಲ್ಲ. ಬಿಜೆಪಿ ಒಂದೇ ಕುಟುಂಬ ಇದ್ದಂತೆ. ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಎಲ್ಲ ಶಾಸಕರು ಸ್ನೇಹಿತರು. ಸಾಮಾನ್ಯವಾಗಿ ಒಟ್ಟಾಗಿ ಕೂಡಿರಬಹುದು. ಅವರು ಯಾರು ಸನ್ಯಾಸಿಗಳಲ್ಲ. ಸೂಕ್ತ ವೇದಿಕೆಯಲ್ಲಿ ಅತೃಪ್ತಿ ಬಗೆಹರಿಸಿಕೊಳ್ಳುತ್ತೇವೆ. ಶಾಸಕರ ಪ್ರತ್ಯೇಕ ಸಭೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ಮೂರು ವರ್ಷದ ಅವಧಿಯನ್ನು ಸರ್ಕಾರ ಪೂರೈಸಲಿದೆ ಎಂದರು.

ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ರೇಣುಕಾಚಾರ್ಯ ಸ್ಪಷ್ಟನೆ

ಗ್ರಾಪಂಗಳ ಅವಧಿ ವಿಸ್ತರಣೆ ಶೀಘ್ರ ತೀರ್ಮಾನ

ಗ್ರಾಪಂಗಳಿಗೆ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ಅಪೇಕ್ಷೆ ಕೂಡ ಇತ್ತು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಪಡೆದಾಗ ಸದ್ಯಕ್ಕೆ ಕೋವಿಡ್‌-19 ಇರುವುದರಿಂದ ಚುನಾವಣೆ ನಡೆಸುವುದು ಬೇಡ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು. ಆದ್ದರಿಂದ ಚುನಾವಣೆ ಮುಂದೂಡಲಾಗಿದೆ ಎಂದ ಈಶ್ವರಪ್ಪ ಈಗಿರುವ ಪಂಚಾಯ್ತಿ ಅವಧಿಯನ್ನೇ ವಿಸ್ತರಿಸಬೇಕೋ, ಆಡಳಿತಾಧಿಕಾರಿ ನೇಮಕ ಮಾಡಬೇಕೋ ಎಂಬ ಬಗ್ಗೆ ಸಂಪುಟದಲ್ಲಿ ವಿಷಯ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು.

ಜೂನ್‌ ಮತ್ತು ಜುಲೈ-2020ರ ಮಾಹೆಯಲ್ಲಿ ರಾಜ್ಯದ 5200 ಗಾಪಂಗಳ ಅವಧಿ ಮುಕ್ತಾಯವಾಗಲಿದೆ. ಗ್ರಾ.ಪಂ. ಸಂಬಂಧ ಈಗಾಗಲೇ ಮೂರು ಆಯ್ಕೆಗಳು ಸರ್ಕಾರದ ಮುಂದೆ ಇದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈ ಗೊಳ್ಳಲಾಗುವುದು. ಆದರೆ, ಗ್ರಾ.ಪಂ.ಗಳಿಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿ ಪಕ್ಷವನ್ನು ಗಟ್ಟಿಗೊಳಿಸಲು ಸರ್ಕಾರ ಹೊರಟಿದೆ ಎಂಬ ಕಾಂಗ್ರೆಸ್‌ ನಾಯಕರ ಆರೋಪ ಸುಳ್ಳು. ನಮ್ಮ ಪಕ್ಷದ ಬೇಸ್‌ ಗಟ್ಟಿಯಾಗಿದೆ. ನಿಮ್ಮ ಬೇಸ್‌ ನೋಡಿಕೊಳ್ಳಿ ಎಂದು ಈಶ್ವರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.

‘ಕೆಲವು ಮೆಂಟಲ್‌ಗಳು ಈಗ ಮನ ಬಂದಂತೆ ಮಾತಾಡ್ತಾರೆ’

ಅವಧಿ ಮುಕ್ತಾಯವಾಗಲಿರುವ 5200 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಪಡೆದಿದ್ದು, ಪ್ರಸ್ತುತ ಕೊರೋನಾ ಸಾಂಕ್ರಾಮಿಕ ಸೋಂಕು ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಇದರಲ್ಲಿ ತೊಡಗಿದ್ದು, ಚುನಾವಣೆ ಮುಂದೂಡವುದು ಸೂಕ್ತವೆಂದು ಬಹುತೇಕ ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಸಿದ್ರಾಮಯ್ಯ ವಿರುದ್ಧ ಈಶ್ವರಪ್ಪ ಆಕ್ರೋಶ

ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ಹೊರಹಾಕಿದ ಈಶ್ವರಪ್ಪ ನೀವು ಸಿಎಂ ಆಗಿದ್ದಾಗ ನಿಮ್ಮ ಮಗ ಶಾಸಕರು ಇಲ್ಲದೆ ಇದ್ರೂ ಮೈಸೂರಲ್ಲಿ ಸರ್ಕಾರಿ ಕಾರು ತಗೊಂಡು ಸಭೆ ನಡೆಸಿದ್ರಲ್ವಾ  ಆಗ ಸಿದ್ರಾಮಯ್ಯ ಕುರುಡಾಗಿದ್ದರಾ? ಮೊದಲು ಸಿದ್ರಾಮಯ್ಯ ಇದಕ್ಕೆ ಉತ್ತರ ಕೊಡಲಿ, ಸಿದ್ರಾಮಯ್ಯ ಮಾತನಾಡುವಾಗ ಯತೀಂದ್ರ ಅನ್ನೋ ಬದಲು ವಿಜಯೇಂದ್ರ ಅಂದಿರ ಬಹುದು ಎಂದು ಮಾತಿನಲ್ಲೇ ಟಾಂಗ್‌ ನೀಡಿದರು.

ಮಾಧ್ಯಮದವರ ಮೇಲೆ ಗರಂ

ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಕೋರೋನಾ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದನ್ನ ಮರೆತರು. ಹೊನ್ನಕಿರಣಗಿ ಗ್ರಾಮದಲ್ಲಿನ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲನೆ ವೇಳೆ ಸಾಮಾಜಿಕ ಅಂತರ ಮರೆತ ಸಚಿವ ಈಶ್ವರಪ್ಪ ಹೊಲದಲ್ಲಿ ಬದು ನಿರ್ಮಾಣ ವೀಕ್ಷಣೆ ವೇಳೆ ನೂರಾರು ಬೆಂಬಲಿಗರಲ್ಲಿ ಮುಳುಗಿ ಹೋದರು.

ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ವೀಕ್ಷಣೆ ಮಾಡಿದಿರಲ್ಲ, ಕೊರೋನಾ ಕಾಟದಲ್ಲೇ ಹೀಗಾದರೆ ಹೇಗೆಂದು ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೇ ಈಶ್ವರಪ್ಪ ಗರಂ ಆದ ಪ್ರಸಂಗ ಹೊನ್ನ ಕಿರಣಗಿಯಲ್ಲಿ ನಡೆಯಿತು. ನನ್ನ ಸಾಮಾಜಿಕ ಅಂತರದ ಬಗ್ಗೆ ಮಾತಾಡ್ತಿರ? ನಿಮ್ಮಲ್ಲಿ ಸಾಮಾಜಿಕ ಅಂತರ ಇದೆಯಾ? ಎಂದು ಖಾರವಾಗಿ ಪ್ರಶ್ನಿಸುತ್ತ ತಮಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಈಶ್ವರಪ್ಪ ಎಲ್ಲರ ಮುಂದೆಯೇ ಹರಿಹಾಯ್ದರು.