ಹಿರೇಕೆರೂರು(ನ.28): ಹಿಂದುಳಿದವರ ನಾಯಕ ನಾನು ಹಿಂದುಳಿದವರ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವೊಬ್ಬ ಹಿಂದುಳಿದವರನ್ನು ಅಭಿವೃದ್ಧಿ ಮಾಡಿಲ್ಲ ಅವರು ಮಾತ್ರ ಅಭಿವೃದ್ಧಿ ಹೊಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದ್ದಾರೆ. 

ತಾಲೂಕಿನ ಕೋಡಮಗ್ಗಿ, ಅರಳೀಕಟ್ಟಿಗ್ರಾಮದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾಗಿನೆಲೆ ಕನಕ ಪೀಠಕ್ಕೆ 25 ಕೋಟಿ, ಮಾದರ ಚನ್ನಯ್ಯ ಪೀಠಕ್ಕೆ ಕೋಟಿ, ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದು ನಮ್ಮ ಸರ್ಕಾರ. ಯು.ಬಿ. ಬಣಕಾರ ಹಾಗೂ ಬಿ.ಸಿ.ಪಾಟೀಲ್‌ ಜೋಡೆತ್ತುಗಳಾಗಿ ತಾಲೂಕಿನಲ್ಲಿ ಒಂದಾಗಿದ್ದು, ತಾಲೂಕಿನಲ್ಲಿ ಬಿಜೆಪಿ ಅಬ್ಬರ ಜೋರಾಗಿದೆ. ಯು.ಬಿ. ಬಣಕಾರ, ಬಿ.ಸಿ. ಪಾಟೀಲರು ಒಳ್ಳೆಯ ಕೆಲಸಗಾರರು ಅವರಿಗೆ ತಾಲೂಕಿನ ಜನರು ಆಶೀರ್ವಾದ ಮಾಡಬೇಕು. ಇಬ್ಬರ ನಾಯಕತ್ವವನ್ನು ಮೆಚ್ಚಿಕೊಂಡು ತಾಲೂಕಿನ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಹಿಂದುಳಿದ ಜನರ ಅಭಿವೃದ್ಧಿಗೆ ಸ್ಪಂಧಿಸಿಲ್ಲ. ಬಿಜೆಪಿ ಪಕ್ಷಕ್ಕೆ ಮತನೀಡುವ ಮೂಲಕ ಯಡಿಯೂರಪ್ಪನವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಯಡಿಯೂರಪ್ಪನವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಬಿ.ಸಿ. ಪಾಟೀಲರೂ ಕಾರಣರಾಗಿದ್ದಾರೆ. ನಾವು ಸಂಪೂರ್ಣ ಬೆಂಬಲ ಕೊಟ್ಟು ಬಿ.ಸಿ. ಪಾಟೀಲರನ್ನು ಅತ್ಯಂತ ಬಹುಮತದಿಂದ ಆರಿಸಿ ತರಬೇಕಾಗಿದೆ. ಯಡಿಯೂರಪ್ಪನವರು ಮೂರುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಬಿ.ಸಿ. ಪಾಟೀಲ ಗೆಲುವು ಮುಖ್ಯವಾಗಿದ್ದು ತಾಲೂಕಿನಲ್ಲಿ ಪಾಟೀಲರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಮಾತನಾಡಿ, ತಾಲೂಕಿನ ಅಭಿವೃದ್ಧಿ ದೃಷ್ಠಿಯಿಂದ ನಾವು ಇಬ್ಬರೂ ಒಂದಾಗಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ಸಾಕಷ್ಟುಅನುದಾನ ನೀಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಮತದಾರರು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಯು.ಬಿ. ಬಣಕಾರ, ಅಧ್ಯಕ್ಷ ಎಸ್‌.ಆರ್‌. ಅಂಗಡಿ, ಜಿಪಂ ಸದಸ್ಯ ಎನ್‌.ಎಂ. ಈಟೇರ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ರಾಜ್ಯ ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ, ಚುನಾವಣಾ ಉಸ್ತುವಾರಿ ದತ್ತಾತ್ರೇಯ, ಬಿ.ಕೆ. ಕುರಿಯವರ, ಆನಂದಪ್ಪ ಹಾದಿಮನಿ, ದೊಡ್ಡಗೌಡ ಪಾಟೀಲ, ದತ್ತಾತ್ರೇಯ ರಾಯ್ಕರ, ಸೇರಿದಂತೆ ನೂರಾರು ಮುಖಂಡರು ಇದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.