ಅಥಣಿ(ನ.23): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ದಾರಿ ತಪ್ಪಿ‌ದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಜಮೀರ ಅಹ್ಮದ ಅವರೆಲ್ಲ ಚುನಾವಣೆಯೇ ಇಲ್ಲ ಅಂತಾ ಮೌನ ವಹಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಒಂದು ರೀತಿ ಇದ್ದು, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಒಂದು ರೀತಿ ಇದೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಏಕವ್ಯಕ್ತಿ ಪಕ್ಷ ಆಗಿದೆ. ಇಡೀ ರಾಜ್ಯದ ಕಾಂಗ್ರೆಸ್ ನಂದೆ ಎನ್ನುವಂತೆ ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಗುಂಪುಗಾರಿಕೆಯಿಂದ ರಾಜ್ಯದಲ್ಲಿ ಅದರ ಬೆತ್ತಲೆ ಪ್ರದರ್ಶನ ನಡೆದಿದೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರ ಸಂಬಂಧ ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ

ಮಾತನಾಡಿದ ಅವರು, ಅಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು, ಶಿವಸೇನೆ ಹಿಂದುತ್ವವಾದಿ ಎನ್ನುತ್ತ ಅವರ ಜೊತೆ ಸರ್ಕಾರ ಮಾಡಲು ಹೊರಟಿದ್ದರು. ಕಾಂಗ್ರೆಸ್‌ನ ದ್ವಿಮುಖ ನಿಲುವು ಅಲ್ಲಿ ಸ್ಪಷ್ಟವಾಗಿತ್ತು. ಚುನಾವಣೆ ಸಂದರ್ಭದಲ್ಲೇ ಯಾರಿಗೆ ಬಹುಮತ ಇದೆಯೋ ಅವರೇ ಸಿಎಂ ಅಂತಾ ನಿರ್ಧಾರ ಆಗಿತ್ತು. ಆದರೆ ಚುನಾವಣೆ ಬಳಿಕ ಶಿವಸೇನೆ ನಿಲುವು ಬದಲಿಸಿತ್ತು. ಪೊಲಿಟಿಕಲ್ ಸರ್ಜರಿ ರಾತ್ರೋ ರಾತ್ರಿಯೇ ಆಗಬೇಕಿಲ್ಲ. ಬೆಳಗ್ಗೆಯೂ ಆಗುತ್ತೆ ಯಾವಾಗ ಬೇಕಾದ್ರೂ ಆಗುತ್ತದೆ. ಎಂದು ಹೇಳಿದ್ದಾರೆ. 

ಅನರ್ಹ ಶಾಸಕರ ಬಗ್ಗೆ ಕೃಷ್ಣೆಭೈರೆಗೌಡ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಕಾಂಗ್ರೆಸ್ ಜೊತೆ ಇದ್ರೆ ಲಾಯಕ್ಕು, ಕಾಂಗ್ರೆಸ್ ಬಿಟ್ರೇ ಅವರ ಪಾಲಿಗೆ ನಾಲಾಯಕ್ ಆಗುತ್ತಾರೆ. ಆ ರೀತಿ ಪದ ಬಳಕೆ ಸರಿಯಿಲ್ಲ. ಮೊನ್ನೆ ಮೊನ್ನೆ ಇವರ ಪಕ್ಷದಲ್ಲಿ ಇದ್ದಾಗ ಲಾಯಕ್ ಇದ್ದವರು, ಇದೀಗ ನಾಲಾಯಕ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಸಿದ್ದರಾಮಯ್ಯ ಮುಖ್ಯಮಂತ್ರಿ ಆದವರು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಗೊಬ್ಬರ ಅಂತಾ ಕೆರೆದಿದ್ದರು. ಕೇಂದ್ರ ಸಚಿವರ ಬಗ್ಗೆ ಮಾಜಿ ಸಿಎಂ ಆದವರು ಇಂತಹ ಹೇಳಿಕೆಯನ್ನು ನೀಡಬಾರದು. ಈ ಬಗ್ಗೆ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.