ಬಳ್ಳಾರಿ(ಅ.08): ರಾಜ್ಯದಲ್ಲಿ ಚುನಾವಣೆ ಬಂದಾಗಲೆಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಉತ್ತರ ಕುಮಾರನ ಪೌರುಷ ತೋರಿಸುತ್ತಾರೆ. ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಎಂದರೆ ಬಿಜೆಪಿ ಗೆಲುವು ಖಚಿತ ಎನ್ನುವ ವಾತಾವರಣ ಇದೆ. ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಚುನಾವಣೆಯಲ್ಲಿ ಸೋಲುವ ಪಕ್ಷಗಳು ಮುಂಚಿತವಾಗಿ ಅಭ್ಯರ್ಥಿ ಘೋಷಿಸುತ್ತವೆ. ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಹಾಗೇ ಆಗಿದೆ. ಬಿಜೆಪಿ ಕೂಡ ಸೋಲುತ್ತಿದ್ದ ಕಾಲದಲ್ಲಿ ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೆವು. ನಮ್ಮ ಪಕ್ಷದಿಂದ ಸ್ಪರ್ಧಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಈಗ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಸೂಕ್ತ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ರಾಜೀನಾಮೆ ನೀಡಿ ಬಂದವರ ಋಣ ತೀರಿಸಲಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ. 

ಬಿಜೆಪಿಗೆ ತಾಕತ್ತಿದ್ದರೆ ಎಲ್ಲ ಪಕ್ಷಗಳ ನಾಯಕರ ಆಸ್ತಿ ತನಿಖೆ ನಡೆಸಲಿ: ಉಗ್ರಪ್ಪ

ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಮನೆಗಳ ಮೇಲೆ ಮಾತ್ರ ದಾಳಿ ನಡೆದಿತ್ತು. ಈಗ ನಮ್ಮದೇ ಪಕ್ಷದ ಶ್ರೀನಿವಾಸರೆಡ್ಡಿ ನಿವಾಸದ ಮೇಲೆ ಎಸ್ಐಟಿ ದಾಳಿ ಆಗಿದೆ. ತನಿಖಾ ತಂಡಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿ ಎಂದು ಹೇಳಲು ಆಗಲ್ಲ. ಗ್ರಾಪಂ ಚುನಾವಣೆ ನಡೆಸಲು ಸರ್ಕಾರ ಸಿದ್ದವಿದೆ. ಈ ಬಗ್ಗೆ ಚುನಾವಣಾ ಆಯೋಗ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಆಯೋಗ ಕೈಗೊಳ್ಳುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಕುರುಬ, ಕೋಲಿ ಸೇರಿದಂತೆ ಇನ್ನೂ ಕೆಲವು ಸಮುದಾಯದವರು ಎಸ್.ಟಿ ಮೀಸಲಾತಿಗೆ ಹೋರಾಟ ನಡೆಸಿದ್ದಾರೆ. ಕುರುಬ ಹಾಗೂ ಕೋಲಿ ಸಮುದಾಯದವರದ್ದು ತುಂಬಾ ಹಳೆಯ ಬೇಡಿಕೆಯಾಗಿದೆ. ಅರ್ಹತೆ ಇರುವ ಸಮುದಾಯಗಳಿಗೆ ಎಸ್.ಟಿ ಮೀಸಲಾತಿ ಸಿಗಬೇಕು.  ನಾವು ವಾಲ್ಮೀಕಿ ಸಮುದಾಯದ ಮೀಸಲಾತಿಯಲ್ಲಿ ಪಾಲು ಕೇಳುತ್ತಿಲ್ಲ. ವಾಲ್ಮೀಕಿ ಸಮುದಾಯದ ಶೇ.7.5 ಮೀಸಲಾತಿ ಬೇಡಿಕೆಗೆ ನನ್ನ ಬೆಂಬಲ ಇದೆ. ಸಮುದಾಯಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸೌಲಭ್ಯ ಕಲ್ಪಿಸಬೇಕು ಎಂದಿದ್ದಾರೆ. 

ಕುರುಬರದ್ದು ಪಕ್ಷಾತೀತ ಹೋರಾಟವಾಗಿದೆ. ಅ.11 ಸಮುದಾಯದ ಸ್ವಾಮೀಜಿಗಳು ಎಲ್ಲ ಚುನಾಯಿತ ಪ್ರತಿನಿಧಿಗಳ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ. ಹಾಥ್ರಸ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಯಾವುದೇ ವಿಷಯ ಇಲ್ಲದ ಹಿನ್ನೆಲೆಯಲ್ಲಿ ವಿಪಕ್ಷದವರು ಅನಗತ್ಯ ಆರೋಪಗಳನ್ನು ಮಾತನಾಡುತ್ತಿದ್ದಾರೆ. ಪ್ರಧಾನಿ ಎಲ್ಲ ವಿಚಾರಗಳ ಬಗ್ಗೆ ಮಾತನಾಡಬೇಕು ಎಂಬುದು ಸರಿಯಲ್ಲ ಎಂದು ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವಗೌಡ ಹಾಗೂ ಇತರರು ಇದ್ದರು.