ಉಡುಪಿ(ನ.06): ‘ಸಿದ್ದರಾಮಯ್ಯನಿಗೆ ಹುಚ್ಚು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಸಂಜೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದ ಅವರು, ನಾನು ದೇವಸ್ಥಾನದಲ್ಲಿದ್ದೇನೆ. ಇಲ್ಲದಿದ್ದರೆ ಸಿದ್ದರಾಮಯ್ಯನಿಗೆ ಇನ್ನೂ ಕೆಟ್ಟಪದ ಹೇಳುತ್ತಿದ್ದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನ ಬಿಜೆಪಿಯ ರಾಜಕೀಯ ಪ್ರೇರಿತ ಕೃತ್ಯ’ ಎಂದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ಕೊಲೆ ಪ್ರಕರಣವನ್ನು ತನಿಖೆ ಮಾಡಬಾರದಾ? ಹಾಗಿದ್ದರೆ ಕಾಂಗ್ರೆಸ್‌ ಪಕ್ಷ ಕೊಲೆಗಳಿಗೆ ಬೆಂಬಲ ಕೊಡುತ್ತಾ, ಹಾಗಂತ ಸಿದ್ದರಾಮಯ್ಯ ಒಪ್ಪಿಕೊಂಡು ಬಿಡಲಿ, ನಮ್ಮ ಪಕ್ಷದ ಅನೇಕರನ್ನು ಕಾಂಗ್ರೆಸ್‌ ಸರ್ಕಾರ ಜೈಲಿಗೆ ಕಳಿಸಿದ್ದು ಕೂಡಾ ರಾಜಕೀಯ ಪ್ರೇರಿತನಾ ಬಾಯಿಗೆ ಬಂದಂತೆ ಮಾತನಾಡುವುದು ವಿರೋಧಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ, ತಪ್ಪಿತಸ್ಥನಲ್ಲದಿದ್ದರೆ ವಿನಯ ಕುಲಕರ್ಣಿ ಬಿಡುಗಡೆಯಾಗಿ ಹೊರಗೆ ಬರಲಿ ಎಂದರಲ್ಲದೇ, ಕಾಂಗ್ರೆಸ್‌ ಪಕ್ಷದ ಸರ್ಕಾರದ ಪ್ರತಿಯೊಂದನ್ನು ವಿರೋಧಿಸುವ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.

‘ ಸಿದ್ದರಾಮಯ್ಯ ಒಬ್ಬ ಹುಚ್ಚ, ಮುಖ್ಯಮಂತ್ರಿ ಹುಚ್ಚಿನಿಂದ ಹೊರ ಬಂದಿಲ್ಲ’

‘ರಾಜ್ಯದಲ್ಲಿ ಸದ್ಯವೇ ಮುಖ್ಯಮಂತ್ರಿಗಳ ಬದಲಾವಣೆಯಾಗುತ್ತದೆ’ ಎಂದಿರುವ ಸಿದ್ದರಾಮಯ್ಯ ಬಗ್ಗೆ ಇನ್ನಷ್ಟು ಗರಂ ಆದ ಈಶ್ವರಪ್ಪ, ಮುಖ್ಯಮಂತ್ರಿ ಸ್ಥಾನ ಹೋದನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು, ಸಿದ್ದರಾಮಯ್ಯನಿಗೆ ಇಂತಹ ಸುದ್ದಿಗಳೇನು ಆಕಾಶದಿಂದ ಉದುರಿತಾ? ಮೋದಿ, ನಡ್ಡಾ, ಅಮಿತ್‌ ಶಾ ಅವರೇನಾದರೂ ಫೋನ್‌ ಮಾಡಿ ಹೇಳಿದ್ರಾ? ನಾನು ದೇವಸ್ಥಾನದಲ್ಲಿ ಇದೀನಿ. ಇಲ್ಲದಿದ್ದರೆ ಸಿದ್ದರಾಮಯನಿಗೆ ಇನ್ನೂ ಕೆಟ್ಟಪದ ಹೇಳ್ತಿದ್ದೆ. ಸಿದ್ದರಾಮಯ್ಯ ಇಂತಹ ಸುದ್ದಿಗಳನ್ನು ಹರಡುವುದನ್ನು ಬಿಟ್ಟು ಜನರ ಮಧ್ಯೆ ಹೋಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.