ಹುಬ್ಬಳ್ಳಿ[ನ.29]: ಉಪಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ನೀವೂ ಎಂಟು ಸ್ಥಾನ ಗೆಲ್ಲದಿದ್ದರೆ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಸಚಿವ ಕೆ. ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ಬಹಿರಂಗ ವಾಗಿಯೇ ಸವಾಲು ಹಾಕಿದ್ದಾರೆ. 

ಉಪಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ  ಶುಕ್ರವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಸಿದ್ದರಾಮಯ್ಯ ಹೇಳಿಕೆಯನ್ನ ಭ್ರಮೆ ಅನ್ನಬೇಕೋ, ಕನಸು ಅನ್ನಬೇಕೋ ತಿಳಿಯುತ್ತಿಲ್ಲ. 
ಸಿದ್ದರಾಮಯ್ಯ ಒಬ್ಬ ಹುಚ್ಚ, ಹುಚ್ಚಿನಿಂದ ಹೊರ ಬಂದಿಲ್ಲ. ಮುಖ್ಯಮಂತ್ರಿ ಸ್ಥಾನದ ಹುಚ್ವಿನಿಂದ ಹೊರಬರಲು ಆಗುತ್ತಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ ಜೊತೆ ಯಾವುದೇ ಕಾಂಗ್ರೆಸ್ ನಾಯಕರಿಲ್ಲ. ಅವನೊಬ್ಬ ಸ್ವಾರ್ಥಿಯಾಗಿದ್ದಾನೆ, ರಾಜ್ಯದಲ್ಲಿ ಯಾರನ್ನು ಬೆಳೆಯಲು ಬಿಡಲಿಲ್ಲ. ಯಾವುದೇ ಕುರುಬ, ಹಿಂದುಳಿದ ನಾಯಕರನ್ನ ಬೆಳೆಸಿದ್ದಾರೆ ? ಹೇಳಿ ನೋಡೋಣ ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ. ಹೆಚ್. ವಿಶ್ವನಾಥ ಅವರನ್ನ ಮುಗಿಸಲು ಹೆಜ್ಜೆ ಹೆಜ್ಜೆಗೂ ಸಿದ್ದು ಪ್ರಯತ್ನ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳ ಸ್ಥಿತಿ ಏನಾಗಿದೆ ಗೋತ್ತಿಲ್ವಾ? ರಾಜ್ಯದ ಜನರು ಜೆಡಿಎಸ್-ಕಾಂಗ್ರೆಸ್ ಪಕ್ಷಗಳನ್ನ ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿಗೆ ಸಿಎಂ ಆಗಿದ್ದಾಗ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇನ್ನೂ ಬಿಜೆಪಿಯನ್ನ ಸೋಲಿಸುತ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.  ಮುಂದಿನ ಮೂರುವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರ್ತಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.