ಗಾಂಜಾ ಮಾಫಿಯಾ ನಿಯಂತ್ರಣಕ್ಕೆ ಸಚಿವ ಈಶ್ವರಪ್ಪ ಸೂಚನೆ
ವಿದ್ಯಾರ್ಥಿಗಳು ಗಾಂಜಾ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ| ಬಸ್ ನಿಲ್ದಾಣ ಮತ್ತು ಶಾಲಾ-ಕಾಲೇಜು ಸಮೀಪದ ಅಂಗಡಿಗಳಲ್ಲಿ ಗಾಂಜಾ ಎಗ್ಗಿಲ್ಲದೆ ಮಾರಾಟ| ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಬೇಕು| ಸಮಾಜಘಾತುಕ ಚಟುವಟಿಕೆಗೆ ಪ್ರೇರಣೆ ನೀಡುತ್ತಿರುವವರನ್ನು ಹಿಡಿದು ಕಠಿಣ ಕಾನೂನು ಕ್ರಮ ಜರುಗಿಸಬೇಕು|
ಶಿವಮೊಗ್ಗ(ಸೆ.26) ಜಿಲ್ಲೆಯ ಪಟ್ಟಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಂಜಾ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಬಗ್ಗೆ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬರುತ್ತಿವೆ. ಬಸ್ ನಿಲ್ದಾಣ ಮತ್ತು ಶಾಲಾ-ಕಾಲೇಜು ಸಮೀಪದ ಅಂಗಡಿಗಳಲ್ಲಿ ಗಾಂಜಾ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ಇಂತಹ ಸಮಾಜಘಾತುಕ ಚಟುವಟಿಕೆಗೆ ಪ್ರೇರಣೆ ನೀಡುತ್ತಿರುವ ಹಾಗೂ ಗಾಂಜಾ ಸರಬರಾಜು ಮತ್ತು ಮಾರಾಟ ಮಾಡುತ್ತಿರುವವರನ್ನು ಹಿಡಿದು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವ ಕೆ. ಎಸ್. ಈಶ್ವರಪ್ಪ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾ ಪಂಚಾಯತ್ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಯ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಶಾಲೆಗಳಿಂದ ಶಿಕ್ಷಕರು ವರ್ಗಾವಣೆಗೊಂಡು ಪಟ್ಟಣ ಪ್ರದೇಶಗಳತ್ತ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಆದ್ದರಿಂದ ಬದಲೀ ಶಿಕ್ಷಕರು ಬರುವವರೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌ಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ಕೂಡಲೇ ನಿಯೋಜಿಸುವಂತೆ ಶಾಸಕ ಹೆಚ್. ಹಾಲಪ್ಪ ಪ್ರಸ್ತಾಪ ಮುಂಡಿಸಿದ್ದನ್ನು ಅನುಮೋದಿಸಿದ ಸಚಿವರು ಈ ಸಂಬಂಧ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ತಲಾ 1 ಲಕ್ಷ ರು. ನೀಡಿಕೆ:
ಜಿಲ್ಲೆಯಲ್ಲಿ ಮಂಗನಕಾಯಿಲೆಯಿಂದ ಮೃತಪಟ್ಟ ಕುಟುಂಬಕ್ಕೆ ತಲಾ ಒಂದು ಲಕ್ಷ ರು.ಗಳ ಸಹಾಯಧನ ಬಿಡುಗಡೆ ಮಾಡಲು ಸರ್ಕಾರ ಈಗಾಗಲೆ ನಿರ್ಧರಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಂಗನಕಾಯಿಲೆಯ ರಕ್ತದ ಮಾದರಿಗಳನ್ನು ಪರೀಕ್ಷಿಸಲು ಸಾಗರದಲ್ಲಿ ಪ್ರಯೋಗಾಲಯ ಆರಂಭಿಸಲು ಸೂಕ್ತ ಸ್ಥಳಾವಕಾಶ ಗುರುತಿಸುವಂತೆ ಹಾಗೂ ಕಾರ್ಯಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡನ್ನು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವು ಜನಸಾಮಾನ್ಯರಿಗೆ ದೊರಕಿಸಲು ಅನುಮತಿ ನೀಡಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ 82ಕೇಂದ್ರಗಳಿಗೆ ಅನುಮತಿ ನೀಡಿದೆ ಎಂದು ಡಾ. ರಾಜೇಶ್ ಸುರಗೀಹಳ್ಳಿ ಮಾಹಿತಿ ನೀಡಿದರು.