'ಸಿದ್ದು, ಎಚ್‌ಡಿಕೆ ಹಣ ನೀಡದಿದ್ರೂ ರಾಮ ಮಂದಿರ ನಿರ್ಮಾಣವಾಗುತ್ತೆ'
ಪಂಚಮಸಾಲಿ ಸಮುದಾಯದ ಹೋರಾಟದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿಲ್ಲ| ಸಂವಿಧಾನದಡಿ ರೂಪಿಸಲಾದ ಸಂಸ್ಥೆಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ| ಈಗಾಗಲೇ ಹಿಂದುಳಿದ ವರ್ಗದ ಆಯೋಗಕ್ಕೆ ಅಧ್ಯಯನಕ್ಕೆ ಸೂಚಿಸಿದ ಸಿಎಂ| ಉಳಿದ ಸಮುದಾಯಗಳ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ: ಜಗದೀಶ್ ಶೆಟ್ಟರ್|
ಹುಬ್ಬಳ್ಳಿ(ಫೆ.21): ಸಿದ್ದರಾಮಯ್ಯ, ಕುಮಾರಸ್ವಾಮಿ ಹಣ ನೀಡದಿದ್ದರೂ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗೇ ಆಗುತ್ತದೆ. ಈ ರೀತಿಯ ತಮ್ಮ ಹೇಳಿಕೆಗಳಿಂದ ವೋಟ್‌ಬ್ಯಾಂಕ್ ಸೃಷ್ಟಿಯಾಗುತ್ತದೆ ಎಂದುಕೊಂಡಿದ್ದರೆ, ಅದು ಅವರ ಭ್ರಮೆ ಮಾತ್ರ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡಬೇಡಿ ಎಂದು ಯಾಕೆ ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಡಿ ದೇಶದ 130 ಕೋಟಿ ಜನರು ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣವಾಗಲಿ ಎಂಬ ಆಶಯವಿದೆ. ಇದು ಕೇವಲ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ನ ಅಜೆಂಡಾ ಆಗಿಲ್ಲ ಎಂದರು.
ಬಾಬರ್ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್
ಸಿದ್ದರಾಮಯ್ಯ ಅವರು ಮಂದಿರ ನಿರ್ಮಾಣ ಸ್ಥಳವನ್ನು ವಿವಾದಾತ್ಮಕ ಸ್ಥಳ ಎಂದು ಹೇಳಿದ್ದಾರೆ. ಅವರು ವಕೀಲಿಕೆ ಮಾಡಿದ್ದಾರೆಯೆ ಎಂದು ಪ್ರಶ್ನಿಸಬೇಕಾಗುತ್ತದೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿರುವ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರು ಕೂಡ ಒಪ್ಪಿದ ಬಳಿಕ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಹಣ ನೀಡದಿದ್ದರೂ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ದೇಶದ ಜನತೆ ಸಾವಿರಾರು ಕೋಟಿ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಇವೆಲ್ಲ ವೋಟ್‌ಬ್ಯಾಂಕ್ ಹೇಳಿಕೆಗಳು ಮಾತ್ರ. ತಮ್ಮ ಹೇಳಿಕೆಗಳಿಂದ ಮತ ಬರುತ್ತದೆ ಎಂದುಕೊಂಡಿದ್ದರೆ ಅದು ಭ್ರಮೆ ಮಾತ್ರ.
ಇವೆಲ್ಲ ಒಂದು ಸಮಾಜವನ್ನು ಓಲೈಕೆ ಮಾಡಲು ನೀಡಿರುವ ಹೇಳಿಕೆ ಮಾತ್ರ. ಆದರೆ, ಇವರು ಓಲೈಕೆ ಮಾಡಬೇಕು ಎಂದುಕೊಂಡಿರುವ ಸಮಾಜದವರೂ ಮಂದಿರ ನಿರ್ಮಾಣಕ್ಕೆ ಒಪ್ಪಿದ್ದಾರೆ ಎಂಬುದನ್ನು ಗಮನಿಸಬೇಕು. ಕೋಟ್ಯಂತರ ಜನಮಾನಸದಲ್ಲಿರುವ ಶ್ರೀರಾಮನ ಕುರಿತು ಕೀಳು ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಅವರು ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದ ಹೋರಾಟದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿಲ್ಲ. ಇವೆಲ್ಲ ಇರುವಂತದ್ದೆ, ಸಂವಿಧಾನದಡಿ ರೂಪಿಸಲಾದ ಸಂಸ್ಥೆಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಈಗಾಗಲೆ ಹಿಂದುಳಿದ ವರ್ಗದ ಆಯೋಗಕ್ಕೆ ಅಧ್ಯಯನಕ್ಕೆ ಸೂಚಿಸಿದ್ದಾರೆ. ಇನ್ನು, ಉಳಿದ ಸಮುದಾಯಗಳ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದರು.