ಹುಬ್ಬಳ್ಳಿ(ಸೆ.30): ಧಾರವಾಡ ಜಿಲ್ಲೆಯ ಮಟ್ಟಿಗೆ ಇದು ಸಿಹಿ ಸುದ್ದಿ. ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಮಲಪ್ರಭಾ ನದಿಯಿಂದ ದಿನದ 24x7 ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 1041.80 ಕೋಟಿ ವೆಚ್ಚದ ಯೋಜನೆಯ ನೀಲನಕ್ಷೆ ತಯಾರಾಗಿದೆ. ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಮಂಗಳವಾರ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಈ ಕುರಿತು ಇಲ್ಲಿನ ಸಕ್ರ್ಯೂಟ್‌ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಯೋಜನೆಯ ನೀಲನಕ್ಷೆ ಸಿದ್ಧಪಡಿಸಲಾಗಿದೆ. 1041.80 ಕೋಟಿ ವೆಚ್ಚದ ಯೋಜನೆಯಿದಾಗಿದೆ. ಎಲ್ಲ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದರು.

ಎಸ್‌ಟಿಯುಪಿ ಕನ್ಸ್‌ಲ್ಟೆಂಟ್‌ನವರು ಯೋಜನೆಯ ಪ್ರಾಥಮಿಕ ಸಿದ್ಧತಾ ವರದಿಯನ್ನು ವಿಸ್ತೃತವಾಗಿ ಜನಪ್ರತಿನಿಧಿಗಳೆದುರು ಮಂಡಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ವೆಬಿನಾರ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಘಟಗಿ ನಗರ ಸೇರಿದಂತೆ ಜಿಲ್ಲೆ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. 900.46 ಕೋಟಿ ಯೋಜನೆ ಅನುಷ್ಠಾನಕ್ಕೆ, 141 ಕೋಟಿ 5 ವರ್ಷಗಳ ಕಾಲ ಯೋಜನೆ ನಿರ್ವಹಣೆಗೆ ಮೀಸಲಿರಿಸಲಾಗುವುದು. ಜಿಪಂ ಸಿಇಒ ಸಭೆಯ ನಿರ್ಣಯದ ವರದಿಯನ್ನು ಸರ್ಕಾರಕ್ಕೆ ಕಳಿಸಿಕೊಡಲಿದ್ದಾರೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಒಪ್ಪಿಗೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಯೋಜನೆಯನ್ನು ಮಂಡಿಸಲಾಗುವುದು. ಸಚಿವ ಸಂಪುಟ ಒಪ್ಪಿಗೆ ನಂತರ ಯೋಜನೆ ಟೆಂಡರ್‌ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.

ಕೊರೋನಾ ಕಾಟ: ಆರು ತಿಂಗಳ ಬಳಿಕ ಹೈದರಾಬಾದ್‌ ಬಸ್‌ ಸಂಚಾರ ಪುನಾರಂಭ

ಮಹಾನಗರದ 24x7 ಕುಡಿಯುವ ನೀರಿನ ಯೋಜನೆಗೆ ಕುರಿತು ಎಲ್‌ಎನ್‌ಟಿ ಕಂಪನಿ ಅಧ್ಯಯನಕ್ಕಾಗಿ ಆರು ತಿಂಗಳ ಸಮಯವಕಾಶ ಕೋರಿತ್ತು. ಅವರಿಗೆ ಮೂರು ತಿಂಗಳ ಸಮಯವಕಾಶ ನೀಡಲಾಗಿದೆ. ಬರುವ ಮಾರ್ಚ್‌ ನಂತರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ನಡೆಯುವ ಜಾಗದಲ್ಲಿ ಅಗತ್ಯ ಮುಂಜಾಗೃತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಮಾರ್ಟ್‌ಸಿಟಿ ಎಂಡಿ ಅವರಿಗೆ ಸೂಚನೆ ನೀಡಿದ್ದೇನೆ. ಗ್ಲಾಸ್‌ಹೌಸ್‌ ನಡೆದ ದುರ್ಘಟನೆ ಹೆಣ್ಣುಮಗು ಮೃತಪಟ್ಟಿರುವುದು ದುರದೃಷ್ಟಕರ. ಮೃತ ಮಗುವಿನ ಕುಟುಂಬದವರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಶಾಸಕರಾದ ಪ್ರದೀಪ್‌ ಶೆಟ್ಟರ್‌, ಅಮೃತ ದೇಸಾಯಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಪಂ ಸಿಇಒ ಡಾ. ಬಿ.ಸಿ. ಸತೀಶ್‌, ಪಾಲಿಕೆ ಆಯುಕ್ತ ಡಾ. ಸುರೇಶ್‌ ಇಟ್ನಾಳ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.